ವಿವಿಧ ಕಾಲಘಟ್ಟಕ್ಕೆ  ಸ್ಪಂದಿಸುವ
‘ವಿಲೋಚನ’


 

‘ವಿಲೋಚನ’ ಇದು  ಶಿವಮೊಗ್ಗ ಜಿಲ್ಲೆ ಹೊಸನಗರದ ಪ್ರಾಧ್ಯಾಪಕ ಶ್ರೀಪತಿ ಹಳಗುಂದ  ವಿಮರ್ಶಾ ಸಂಕಲನ. ಇದರಲ್ಲಿ  ೧೯ ಲೇಖನಗಳ ಗುಚ್ಛವಿದೆ. ವಿವಿಧೆಡೆ ಲೇಖಕರು ಮಂಡಿಸಿದ ವಿಚಾರ ಸಂಕಿರಣಗಳ ಪ್ರಬಂಧವೂ ಇದಾಗಿದೆ. ಜೊತೆಗೆ ವಿಮರ್ಶಕ ಅಥವಾ ಲೇಖಕನೊಬ್ಬ ಒಂದು ಕೃತಿಯ ಕಾಲವನ್ನು ಆ ಕಾಲಘಟ್ಟಕ್ಕೆ ಸ್ಪಂದಿಸಿ ಮನಮುಟ್ಟುವಂತೆ ವಿಮರ್ಶಿಸಿದ್ದಾರೆ.

ಇಲ್ಲಿ ಲೇಖಕರು ಕೆಲವು ಕೃತಿಗಳ ಬಗ್ಗೆ ವಿಶೇಷವಾದ ಒಳನೋಟವನ್ನು ಬೀರಿದ್ದಾರೆ. ವಿಷಯ ಮಂಡನೆ, ಭಾಷಾ ಶೈಲಿ, ತಂತ್ರಗಾರಿಕೆ, ನಯವಾದ ವಿಮರ್ಶೆ ಮೂಲಕ ಈ ಕೃತಿಯ ಮೌಲ್ಯ ಹೆಚ್ಚಾಗಿದೆ. ಅವರ ಮೇಧಾಶಕ್ತಿ, ವೈಚಾರಿಕ ಚಿಂತನೆ ಎಲ್ಲವೂ ಇದರಲ್ಲಿ ಬಿತ್ತರಗೊಂಡಿದೆ. ವಿಶೇಷವಾಗಿ ಮಲೆನಾಡಿನ ಬಗ್ಗೆಯೂ ಇದರಲ್ಲಿ ಬರಹವಿದೆ. ಇಲ್ಲಿನ ಮುಳುಗಡೆ ಸಮಸ್ಯೆಯಿಂದಾದ ತಲ್ಲಣವನ್ನು ಎಳೆಎಳೆಯಾಗಿ, ಗಂಭೀರವಾಗಿ, ಅಲ್ಲಲ್ಲಿ ಹಾಸ್ಯಮಿಶ್ರ್ರಿತವಾಗಿ ಓದುಗರೆದುರು ಬಿಚ್ಚಿಟ್ಟಿದ್ದಾರೆ.

 ಮೊದಲ ಲೇಖನ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನ; ಅಭಿವ್ಯಕ್ತಿಗೆ ಎಲ್ಲೆ ಇದೆ ಎನ್ನುವುದನ್ನು ಒಪ್ಪುವ ಲೇಖಕರು, ಬರಹಗಾರನ ಮೇಲೆ ಸರ್ಕಾರ ಹಿಡಿತವಿದೆ. ಅಭಿವ್ಯಕ್ತಿ ಕ್ರಮವನ್ನು ಸಾಹಿತ್ಯದ ಮೂಲಕ ಪ್ರತಿಭಟಿಸಿದರೆ ಸರ್ಕಾರದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಕ್ರಮ ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಎದುರಾಗಿದ್ದನ್ನು ವಿವರಿಸಿದ್ದಾರೆ.  ತನ್ನ ಮೂಲ ಧರ್ಮ ಜಾತಿಯಿಂದ ಹೊರಬಂದು ಯೋಚಿಸದೆ ಹೋದರೆ ಅಪಚಾರ ಆಗುತ್ತದೆ. ಸಂಬಂಧಗಳ ಗಟ್ಟಿತನವನ್ನು ಕಾಪಾಡಿಕೊಂಡೇ ಸಾಹಿತ್ಯ ಅಭಿವ್ಯಕ್ತಿಯನ್ನು ನಿರ್ಮಿತಿಯಿಂದ ದಾಖಲಿಸುವಂತಾಗಬೇಕು. ಇದು ಸ್ಪಷ್ಟ ಸಮಾಜದ ಪರಿಕಲ್ಪನೆ. ಎಲ್ಲಾ ಪ್ರಜೆಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಈ ಮಿತಿಯಲ್ಲಿಯೇ ಸಾಹಿತ್ಯ ಮತ್ತು ಅಭಿವ್ಯಕ್ತಿ ಸಾಗಬೇಕು ಎಂದು ಹೇಳುತ್ತಾರೆ.

 ಎರಡನೇ ಲೇಖನ ‘ಆತ್ಮಕಥನಗಳೊಂದಿಗೆ ಒಂದು ಆತ್ಮಾವಲೋಕನ’ : ಕನ್ನಡದಲ್ಲಿ  ನೂರಾರು ಆತ್ಮಕಥೆಗಳು ಇಂದು ನಮ್ಮೆದುರಿಗಿವೆ. ಹತ್ತನೇ ಶತಮಾನದಲ್ಲಿ ಪಂಪನ ನಂತರ ಹರಿಹರ ಅಧಿಕೃತವಾಗಿ ಆತ್ಮಕಥೆಯನ್ನು ಬರೆದುಕೊಳ್ಳದಿದ್ದರೂ ಅವರ ಕಾವ್ಯಗಳಲ್ಲಿ ಆತ್ಮಕಥನದ ಸ್ವರೂಪವಿತ್ತು. ಹರ್ಡೇಕರ್ ಮಂಜಪ್ಪ ಅವರು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ‘ನನ್ನ ೩೦ ವರ್ಷಗಳ ಕಾಣಿಕೆ’ ಎಂಬ ಆತ್ಮಚರಿತ್ರೆ ಬರೆದಿದ್ದಾರೆ. ೧೯ನೆಯ ಶತಮಾನದವರೆಗೆ ಆತ್ಮಚರಿತ್ರೆಗಳು ಬಂದಿರಲಿಲ್ಲ. ನಂತರ ಎಲ್ಲಾ ಭಾಷೆಗಳಲ್ಲೂ ಬರತೊಡಗಿದವು. ಬಹುತೇಕವೆಲ್ಲವೂ ಕನ್ನಡ ಅನುವಾದವಾದವು.  

 ಆತ್ಮಕಥನಗಳಲ್ಲಿ ಯಾವುದನ್ನು ಹೇಳಬೇಕು ಯಾವುದನ್ನು ಹೇಳಬಾರದು ಎಂಬ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ಕನ್ನಡದ ಆರಂಭಿಕ ಆತ್ಮಕಥೆಗಳನ್ನು ಅವಲೋಕಿಸಿದಾಗ ಸಾಧಕನಾದವನು ತನ್ನ ಇಡೀ ವಯಸ್ಸಿನಲ್ಲಿ ಮಾತ್ರ ಬರೆದುಕೊಳ್ಳುವ ಹಾಗೂ ತನ್ನ ಸಾಧನೆಯನ್ನು ಸ್ವಪ್ರಶಂಸೆ ಮಾಡಿಕೊಳ್ಳುವ ಕ್ರಮಗಳ ರೀತಿಯಲ್ಲಿ ಕಂಡುಬರುತ್ತಿತ್ತು.  ಆತ್ಮಚರಿತ್ರೆಗಳು ವೈಯಕ್ತಿಕ ನೆಲೆಯಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯ ಅಭಿವ್ಯಕ್ತಿ ಮತ್ತು ವಿಮರ್ಶೆ ಕಡೆ ಮುಖ ಮಾಡಬೇಕು. ಒಟ್ಟಿನಲ್ಲಿ, ಆತ್ಮಕಥೆಗಳ ಬಗ್ಗೆ ಗಂಭೀರವಾಗಿ ಚರ್ಚಿಸುವ ಅಗತ್ಯವಿದೆ ಎನ್ನುತ್ತಾರೆ. ಜಿ ಪಿ ರಾಜರತ್ನಂ ಅವರ ‘ಹತ್ತು ವರುಷ’ (೧೯೯೪ರಲ್ಲಿ ಪ್ರಕಟ) ದಲ್ಲಿ ೧೨ ಸಾಹಿತಿಗಳ  ಆತ್ಮಕಥನವಿದೆ. ಜೊತೆಗೆ ಕನ್ನಡದ ಪ್ರಮುಖ ಆತ್ಮಕಥೆಗಳ ಪಟ್ಟಿಯನ್ನು ಈ ಲೇಖನದಲ್ಲಿ ಲೇಖಕರು ನೀಡಿದ್ದಾರೆ.

 ಮೂರನೇ ಲೇಖನ ‘ಪ್ರೇಮ ನವೋದಯ- ಹೊಸ ನೋಟ’:  ಪ್ರೇಮ ನವೋದಯ ಎಂಬ ಪಿಎಚ್‌ಡಿ ಕೃತಿ ಬಗ್ಗೆ ವಿಮರ್ಶಿಸಿದ್ದಾರೆ.  ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಜಿ. ಪ್ರಶಾಂತ್ ನಾಯಕ್ ಅವರ ಪಿಎಚ್‌ಡಿ ಕೃತಿ ಇದು.

  ಪ್ರೇಮ ಎನ್ನುವುದು ಬದುಕಿಗೆ ಸಹಕಾರವಾದ, ಭಾವನಾತ್ಮಕ ಬಗೆ. ಹೃದಯಗಳ ನಡುವಿನ ಪ್ರೀತಿ ಮಾಯವಾಗಿ ಪ್ರೀತಿ ಎಂದರೆ ಅದೊಂದು ಬುದ್ಧಿಗೆ ಸೀಮಿತ ಎನ್ನುವ ಕಾಲಘಟ್ಟಕ್ಕೆ ಬಂದಿದೆ. ನವೋದಯ ಕವಿಗಳು ಕಂಡುಕೊಂಡಂತೆ ನಿಜನೆಲೆಯ ಪ್ರೀತಿ ಯುವಪೀಳಿಗೆಗೆ ದಾರಿದೀಪವಾಗಬೇಕು. ಆ ಮೂಲಕವೇ ಸ್ವಾಸ್ಥ್ಯ ಸಮಾಜಕ್ಕೆ ಮುನ್ನುಡಿ ಬರೆಯಬೇಕು. ಪ್ರೀತಿಯನ್ನು ನಿವೇದಿಸುವ ಬಗೆ ನಾವು ಬಳಸುವ ಭಾಷೆಯ ಮೇಲೆ ನಿಂತಿದೆ. ಭಾಷೆಯ ಏರಿಳಿತದ ಸಂದರ್ಭವೇ ಪ್ರೀತಿಯನ್ನು ನಿರ್ಧರಿಸುತ್ತದೆ. ಈ ಕಾರಣಕ್ಕೆ ಹಳ್ಳಿಯಲ್ಲಿನ ಕೆಲವು ಪ್ರೀತಿ -ಪ್ರೇಮ ಪ್ರಕರಣಗಳು ಗಟ್ಟಿಯಾಗಿ ನಿಂತಿವೆ. ಪ್ರೇಮ ಕಣ್ಣಿನಲ್ಲಿ ಹುಟ್ಟಿ ಕಣ್ಣಿನಲ್ಲಿ ಸಾಯಬೇಕು. ಆದರೆ ಇಂದು ಕೈಯಲ್ಲಿ ಹುಟ್ಟಿ ಕಾಲಲ್ಲೋ, ಕೈಯ್ಯಲ್ಲೋ ಸಾಯುತ್ತಿದೆ.  

 ನನ್ನಂತೆ ನೀನು ಹುಡುಕಿ ನೊಂದಿಹೆ ಬಲ್ಲೆ/ ಸಾರುತಿದೆ ನಿನ್ನ ಕಣ್ಣಿನ ಪ್ರಣಯ ಕ್ರಾಂತಿ ಎಂಬ ಕುವೆಂಪು ಸಾಲನ್ನು ಗಮನಿಸಬಹುದು. ಎಷ್ಟು ಅರ್ಥಪೂರ್ಣವಾದದ್ದು ಇದು. ಪ್ರೀತಿ-ಪ್ರೇಮ- ಕಾಮ ಸಿಗುವುದಲ್ಲ, ಸಿದ್ಧಿಸಬೇಕು. ವೇದನೆಯಲ್ಲಿ ಹುಟ್ಟಬೇಕು. ಅದನ್ನು ಕಾಯಿಸಬೇಕು. ಆಗಲೇ ಅದಕ್ಕೊಂದು ಹದ ಬರುತ್ತದೆ. ಇಲ್ಲವಾದಲ್ಲಿ ಸಿಕ್ಕಷ್ಟೇ ಸುಲಭವಾಗಿ ಜಾರಿ ಹೋಗುತ್ತದೆ. ಇಂದು ಬಾಹ್ಯ ಸೌಂದರ್ಯ ಮುಖ್ಯವಾಗಿದೆ. ಅಂತರಂಗದ ಸೌಂದರ್ಯ ಇನ್ನೂ ಹೆಚ್ಚಬೇಕಿದೆ. ಒಟ್ಟಿನಲ್ಲಿ, ನಿಜವಾದ ಬದುಕಲ್ಲಿ ಪ್ರೀತಿಗೆ ಇರುವ ಸ್ಥಾನವನ್ನು ಕವಿ ಪುತಿನ, ಕುವೆಂಪು, ಬೇಂದ್ರೆ,  ತೀನಂ ಶ್ರೀಕಂಠಯ್ಯ, ಜಿ ಪಿ ರಾಜರತ್ನಂ ಮೊದಲಾದವರ ಕೃತಿಗಳ ಮೂಲಕ ಕಾಣಬಹುದು ಎಂದು ಲೇಖಕರು ವಿಮರ್ಶಿಸಿದ್ದಾರೆ.

 ಈ ಕೃತಿ ಇನ್ನೊಂದು ಪ್ರಮುಖ ಲೇಖನ ‘ಮುಳುಗಡೆಯಾಚೆಗೆ’. ಹೊಸನಗರ ತಾಲೂಕು ಬಹುತೇಕ ಮುಳುಗಡೆ ಪ್ರದೇಶವಾಗಿದೆ. ವಾರಾಹಿ, ಚಕ್ರ್ರಾ, ಮಾನಿ  ಜಲವಿದ್ಯುತ್ ಯೋಜನೆಗಾಗಿ ಭೂಮಿಯನ್ನು ಕಳೆದುಕೊಂಡ ಸುಮಾರು ೩,೮೪೭ ಕುಟುಂಬಗಳು ಇವೆ. ಹೊಸನಗರ ತಾಲೂಕಿನ ಹಲವಾರು ಊರುಗಳಿಗೆ ಈ ಮುಳುಗಡೆಯೇ ಜಾಗತೀಕರಣವಾಗಿ ಪರಿಣಮಿಸಿದೆ. ಮುಳುಗಡೆ ಎಂದರೆ ಅದೊಂದು ಕಾಣುವ ವಸ್ತುಗಳ ನಾಶವಲ್ಲ. ಕಾಣದ ಅದೆಷ್ಟೋ ವಸ್ತುಗಳ, ಮನಸ್ಸುಗಳ ಮುಳುಗಡೆ ಎನ್ನುತ್ತಾರೆ ಲೇಖಕರು.

 ಸಾಂಸ್ಕೃತಿಕ ಶ್ರೀಮಂತಿಕೆಯ ದ್ಯೋತಕವಾಗಿದ್ದ ಕಲೆಗಳು ಸಹ ಈ ಮುಳುಗಡೆಯಿಂದ ಮುಳುಗಿ ಹೋಗಿವೆ. ಇದು ಒಂದು ಪರಂಪರೆಯು ಅನುಭವಿಸಿದ ಆಘಾತವೂ ಹೌದು. ಚಂದ್ರ ಕಾಣಲಿಲ್ಲ ಎಂದರೆ ಅತ್ತರೆ ನಕ್ಷತ್ರವೂ ಕಾಣುವುದಿಲ್ಲ’ ಎಂಬ ಟಾಗೋರರ ಮಾತಿನಂತೆ ಪಾಲಿಗೆ ಬಂದದ್ದು ಪಂಚಾಮೃತ ಎನ್ನುತ್ತಾ ಜನರು ಸಿಕ್ಕಷ್ಟನ್ನು ಪಡೆದುಕೊಂಡು ಹೊರಡಬೇಕಾಯಿತು. ಸಂಬಂಧವನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. ಇಲ್ಲಿ ಅವರ ಅಂತಃಕರಣವಿದೆ. ಆದರೆ ದುರಂತವೆಂದರೆ, ಮುಳುಗಡೆಯಾದ ಪ್ರದೇಶದ ಎಷ್ಟು ಕುಟುಂಬಗಳಿಗೆ ಇಂದಿಗೂ ಪರಿಹಾರ ಸಿಗದೇ ಜಮೀನು ಕೂಡ ಸಿಗದೆ ಅತಂತ್ರರಾಗಿದ್ದಾರೆ. ‘ಅಂದು ನೀರು ಮುಳುಗಿಸಿತು, ಇಂದು ರಾಜಕಾರಣಿಗಳು ಮುಳುಗಿಸಿದರು’ ಎಂಬ ಮಾತು ಕೇಳಿಬರುತ್ತಿದೆ. ನಿಜವಾದ ಸಮಾಜವಾದ ಎಂದರೆ ವಿಕೇಂದ್ರೀಕರಣ ಮತ್ತು ಮನುಷ್ಯತ್ವ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆನ್ನುತ್ತಾರೆ.

 ಇನ್ನೊಂದು ಲೇಖನ ಹೊಸನಗರ ತಾಲೂಕಿನ ‘ಮಹಾಸತಿಕಟ್ಟೆ ಅಥವಾ ಮಾಸ್ತಿಕಟ್ಟೆ’ ಎಂಬ ಪ್ರಸಿದ್ಧ ಊರು ಮುಳುಗಡೆಯಿಂದ ಎಲ್ಲವನ್ನೂ ಕಳೆದುಕೊಂಡ ಬಗ್ಗೆ ವಿಷಾದದಿಂದ ಬರೆಯುತ್ತಾರೆ. ಮಹಾಸತಿಕಟ್ಟೆ  ಜನರ ಬಾಯಲ್ಲಿ ಮಾಸ್ತಿಕಟ್ಟೆಯಾಗಿದೆ. ‘ದೀಪದ ಬುಡದಲ್ಲಿ ಯಾವಾಗಲೂ ಕತ್ತಲೆ’ ಎನ್ನುವಂತೆ ಮಾಸ್ತಿ ಕಟ್ಟೆ ಸಂತ್ರಸ್ತರ ಊರಾಗಿ ಪರಿಣಮಿಸಿದೆ. ಕಾಡು ಮತ್ತು ಮಳೆ ಇಲ್ಲಿಯ ಸಾಮಾನ್ಯ ವಿಷಯವಾಗಿತ್ತು. ಆದರೆ ಮಾಸ್ತಿಕಟ್ಟೆಯ ಮೂಲ ಸಂಸ್ಕೃತಿಯನ್ನು ಕರ್ನಾಟಕ ಪವರ್ ಕಾರ್ಪೊರೇಷನ್ (ಕೆಪಿಸಿ) ಎನ್ನುವ ಸಂಸ್ಥೆ ಬರುವ ಮೂಲಕ ನಾಶವಾಗಿದೆ. ವಿದ್ಯುತ್ ಉತ್ಪಾದನೆಗೆ ಅಣೆಕಟ್ಟನ್ನು ಕಟ್ಟಿದಾಗ ಹಿಂಬದಿಯಿಂದ ಬಂದ ಬ್ಯಾಕ್ ವಾಟರ್ ಸಿಕ್ಕ ಊರು, ಕೊಟ್ಟಿಗೆ, ದೇವಸ್ಥಾನ, ಹೊಲ, ಗದ್ದೆ, ತೋಟ, ಮನೆ ಎಲ್ಲವನ್ನೂ ಮುಳುಗಿಸಿತು. ಮತ್ತೆ ಮಾಸ್ತಿಕಟ್ಟೆಗೆ ಕಳೆಕಟ್ಟಿ ಕೊಡಬೇಕಾಗಿದೆ. ಸಂಸ್ಕೃತಿಯೊಂದಿಗೆ ಜೋಪಾನವಾಗಿ ಮಹಾಸತಿಕಟ್ಟೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳುತ್ತಾರೆ.

 ಹೊಸನಗರದ ಸಾಹಿತಿ ಪ್ರೊ. ಎಸ್ ಪಿ ಪದ್ಮಪ್ರಸಾದ್  ಅವರ ಕಾವ್ಯ ಲಹರಿಯನ್ನು ಲೇಖಕರು ಪರಿಚಯಿಸುತ್ತಾ,  ದೇಶ ಸುತ್ತುವುದು, ಕೋಶ ಓದುವುದು ಅವರ ಹ್ಯವಾಸವಾಗಿತ್ತು. ಅವರ ಕರ್ತೃತ್ವ ಶಕ್ತಿ ಮೆಚ್ಚುವಂತದ್ದು, ಕಾವ್ಯಜೀವಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿ ಸುಮಾರು ೧೦೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅವರ ಸೃಜನಶೀಲತೆ, ಹೆಂಗರುಳು, ದಾಖಲಿಸುವ ಕ್ರಮ,  ತಾಯ್ತನವನ್ನು ಮೀರಿದ ತಂದೆತನ,  ಜ್ಞಾನ ಮತ್ತು ಜಾಣ್ಮೆ ಅಪರೂಪವಾದುದು ಎಂದು ವಿವರಿಸುತ್ತಾರೆ.

ಈ ಕೃತಿಯಲ್ಲಿ ಖ್ಯಾತ ಗಾಯಕ ಗರ್ತಿಕೆರೆ ರಾಘಣ್ಣ,  ಶಾಂತವೇರಿ ಗೋಪಾಲಗೌಡರು, ನಿವೃತ್ತ ಪ್ರೊ. ಬಿ. ಗಣಪತಿ, ಹೃದಯವಂತ ಡಾ|| ಬಿ. ಗುರುರಾಜ್ ಮೊದಲಾದವರ ವ್ಯಕ್ತಿ ಚಿತ್ರಣವನ್ನು ಸಹ ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ.

ಒಟ್ಟಿನಲ್ಲಿ, ಇದೊಂದು ಕೇವಲ ವಿಮರ್ಶಾ ಕೃತಿಯಾಗದೆ,  ವ್ಯಕ್ತಿ, ವ್ಯಕ್ತಿತ್ವ, ಸಂವೇದನೆ, ಸವಾಲು,  ಸಮುದಾಯ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಸದಾ ನೆನಪಿನಲ್ಲುಳಿಯುವಂತದ್ದಾಗಿದೆ. ಬದಲಾದ ಕಾಲಘಟ್ಟಕ್ಕೆ ಹೊಸತನ್ನು ಕಟ್ಟುವ ಕೆಲಸವನ್ನು ಯಾರು ಮಾಡಬೇಕೆಂಬ ಪ್ರಶ್ನೆಯನ್ನು ಇಲ್ಲಿ ಓದುಗರ ವಿವೇಚನೆಗೆ ಬಿಟ್ಟಿದ್ದಾರೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ,

Published by dattareya Hegde on April 10, 2025

...........................


Comments

Popular posts from this blog