ಕನ್ನಡ ಚಿತ್ರಗೀತೆಗಳ ಶ್ರೀಮಂತ ಸಂಸ್ಕೃತಿ ತೆರೆದಿಡುವ 

‘ಚಿತ್ರ ಚಿಂತನ’  


‘ಚಿತ್ರ ಚಿಂತನ’ ಇದು ಚಲನಚಿತ್ರ ಗೀತೆಗಳ ವಿಮರ್ಶಾ ಸಂಕಲನ. ಕನ್ನಡದಲ್ಲಿ ಪ್ರಖ್ಯಾತ ಚಲನಚಿತ್ರ ಗೀತೆಗಳನ್ನು ವಿಮರ್ಶಿಸಿ ಬರೆದ ಸಂಕಲನಗಳು ವಿರಳಾತಿರವಿರಳ. ಇಂತಹ ಒಂದು ಸಾಹಸವನ್ನು ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶ್ರೀಪತಿ ಹಳಗುಂದ ಮಾಡಿದ್ದಾರೆ.

ಕೃತಿಯಲ್ಲಿ  ಲೇಖಕರು ಪ್ರಮುಖವಾದ ೧೮ ಚಿತ್ರಗೀತೆಗಳನ್ನು ವಿಮರ್ಶಿಸಿದ್ದಾರೆ. ೫೦ರ ದಶಕದಿಂದ ೯೦ ರ ದಶಕದವರೆಗೆ ಬಂದ, ನಾವು- ನೀವೆಲ್ಲ  ಸದಾ ಗುನುಗುನಿಸುವ ಮತ್ತು ಅತ್ಯಂತ ಸ್ಮರಣೀಯವಾದ ಚಿತ್ರಗೀತೆಗಳನ್ನು ಈ ವಿಮರ್ಶೆಗೆ ಅವರು ಆಯ್ದುಕೊಂಡಿದ್ದಾರೆ. ರಾಜಕುಮಾರ್, ಶಂಕರನಾಗ್, ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಮಂಜುಳಾ, ಅನಂತನಾಗ್, ಭಾರತಿ, ಜಯಂತಿ ಮೊದಲಾದವರ ನಟನೆಯ ಚಿತ್ರಗಳ ಸಿನಿಮಾ ಹಾಡುಗಳಲ್ಲಿ ಇರುವ ಭಾವ, ಬದುಕನ್ನು ತಾತ್ವಿಕವಾದ ಮತ್ತು ತಾರ್ಕಿಕವಾದ ಹಿನ್ನೆಲೆಯಲ್ಲಿ ಹಲವು ಉದಾಹರಣೆಗಳೊಂದಿಗೆ ಒರೆಗೆ ಹಚ್ಚಿದ್ದಾರೆ. ಆ ಕಾಲದ ಸಿನಿಮಾ ಗೀತೆಗಳಿಗೆ ಎಂಥವನನ್ನೂ ಸೆಳೆಯುವ ಸೂಜಿಗಲ್ಲಿನ ಗುಣವಿತ್ತು. ಜನಮನದಲ್ಲಿ ಅಚ್ಚಳಿಯದೆ ಉಳಿಯುವ ಮೂಲಕ ಭಾವ, ಅನುಭಾವ ಮತ್ತು ಅನುಭವವನ್ನು ಭಾವಗೀತೆಗಳಿಗಿಂತ ಹೆಚ್ಚಾಗಿ ಅಳವಡಿಸಿಕೊಂಡಿದ್ದನ್ನು ನಾವು ಗಮನಿಸಬಹುದು.

ಈ ವಿಮರ್ಶಾ ಕೃತಿಯಲ್ಲಿ ಮೊದಲ ಗೀತೆಯನ್ನಾಗಿ ‘ಬಾಳುವಂತ ಹೂವೇ ಬಾಡುವಾಸೆ ಏಕೆ’ ಎನ್ನುವುದರಲ್ಲಿ ವ್ಯರ್ಥ ವ್ಯಸನದಿಂದ ನಮ್ಮ ಬದುಕು ಸಿಹಿಯಿಂದ ಕಹಿಯತ್ತ ಸಾಗುತ್ತದೆ. ನಮ್ಮ ಬದುಕನ್ನು ಬೇವು ಮಾಡಿಕೊಳ್ಳುವುದು ನಾವೇ ಎಂಬ ಸತ್ಯದ ಅರಿವನ್ನು  ಸಾರುವ ಸಂದೇಶವಿದೆ. ಅದನ್ನು ಲೇಖಕರು ಇಲ್ಲಿ ಸುಂದರವಾಗಿ ಕಟ್ಟಿಕೊಡುತ್ತಾ, ಈ ಗೀತೆ ವರ್ತಮಾನಕ್ಕೆ ಹಿಡಿದ ಕನ್ನಡಿಯಾಗಿದೆ ಮತ್ತು ಸಾರ್ವಕಾಲಿಕವಾಗಿದೆ. ಕನಸುಗಳನ್ನು ಸಾಯಿಸದೆ, ಕನಸಿನ ಗೋಪುರ ಕಟ್ಟಿಕೊಳ್ಳಬೇಕೆಂದಿದ್ದಾರೆ.

 ‘ಕಲಿಸು ಗುರುವೇ ಕಲಿಸು’ ಎಂಬ ಇನ್ನೊಂದು ಗೀತೆಯಲ್ಲಿ ಸ್ವಾರ್ಥದ ಮನೋಭಾವದಿಂದ ಹೊರಬಂದು ನಿಸ್ವಾರ್ಥಿಯಾಗುವುದನ್ನು ಕಲಿಸಬೇಕಾಗಿದೆ. ಕಲ್ಲಿನ ದೇವಾಲಯಕ್ಕಿಂತ ಕಲಿಸುವ ಶಾಲೆ ಮುಖ್ಯವಾಗಬೇಕು. ಮಾನವೀಯತೆಯನ್ನು, ಜಾಣತನವನ್ನು, ಮರುಗುವುದನ್ನು, ಕರಗುವುದನ್ನು, ಕಲಿಸುವ ಅವಶ್ಯಕತೆ ಇದೆ. ನಾವು ಬದುಕಬೇಕು, ಇತರರನ್ನೂ ಬದುಕಲು ಬಿಡಬೇಕು ಎಂಬ ಸತ್ಯದ ಕಲಿಕೆ ಅವಶ್ಯಕ ಎಂಬ ಅಂಶವನ್ನು ದಾಖಲಿಸುತ್ತಾ, ಕಾಲ ಕ್ಷಣಿಕ. ನಮ್ಮೊಳಗಿನ ಅಹಂಕಾರವನ್ನು ಇಲ್ಲವಾಗಿಸಿಕೊಳ್ಳಬೇಕು. ಈ ಸತ್ಯವನ್ನು ಗಟ್ಟಿಯಾಗಿ ‘ಈ ಭೂಮಿ ಬಣ್ಣದ ಬುಗುರಿ’ ಎಂಬ ವಿಮರ್ಶೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಇನ್ನೊಂದು ಮಹತ್ವದ ಗೀತೆ ‘ಬೆಳ್ಳಿ ಕಾಲುಂಗುರ, ಶ್ರೀಮತಿಗೆ ಸುಂದರ’ ಈ ಅಮರ ಗೀತೆ ಜೀವನ ಪ್ರೀತಿಯನ್ನು ಹೆಚ್ಚಿಸುತ್ತಾ, ಮೌಲ್ಯವನ್ನು ವರ್ಧಿಸುವ ಪ್ರತೀಕವಾಗಿ ಬೆಳ್ಳಿ ಕಾಲುಂಗುರ ಎಂಬ ಗೀತೆಯನ್ನು ವಿಮರ್ಶಿಸಿದ್ದಾರೆ. ಇಲ್ಲಿ ಸಂಸ್ಕೃತಿಯ, ಸಂಸ್ಕಾರದ, ಸಂಸಾರದ, ಸನ್ನಡತೆಯ, ಸಾಕ್ಷಿ ರೂಪವಾದ ಬೆಳ್ಳಿ ಕಾಲುಂಗುರ ಮಿಂಚುಂಗುರವಾಗಿದೆ. ಬದುಕಿನ ಮಿಂಚಿಗೆ ಜೊತೆಯಾಗಿ ನಿಂತಿದೆ. ಎರಡು ಮನಸ್ಸುಗಳ ಸೇರುವಿಕೆಯ ಸಾಕ್ಷಿಪ್ರಜ್ಞೆಯಾಗಿ ನಿಂತಿರುವುದು ಕಾಲುಂಗುರ. ನಾನೊಬ್ಬಳು ಗೃಹಿಣಿ ಎನ್ನುವುದನ್ನು ಇದು ನೆನಪು ಮಾಡಿಕೊಡುತ್ತ ಜೀವಂತಿಕೆಗೆ ಇಂಬು ಕೊಡುವ ಸಾಧನವಾಗಿದೆ. ಕಾಲುಂಗುರ ದಾಂಪತ್ಯದ ಕಾವಲಿಗೆ ಇದ್ದಂತೆ ಎಂದು ವರ್ಣಿಸುತ್ತಾರೆ.

 ‘ವಿರಹಾ ನೂರು ನೂರು ತರಹ’ ಇದು ಇವತ್ತಿಗೂ ಎಲ್ಲರ ನಾಲಗೆಯಂಚಿನಲ್ಲಿರುವ ಹಾಡು.  ಈ ಚಿತ್ರಗೀತೆಯ ವಿಮರ್ಶೆಯಲ್ಲಿ ಬರುವ ಶಬ್ದಗಳನ್ನು ಬಹಳ ಚೆನ್ನಾಗಿ ನೇಯಲಾಗಿದೆ.  ಮನಸ್ಸು ಮತ್ತು ದೇಹದ ಆಸೆ -ಆಕಾಂಕ್ಷೆಗಳು, ಅಭೀಪ್ಸೆಗಳು ನಮಗೆ ಮುಖ್ಯವಾಗುತ್ತವೆ. ಪಂಚೇಂದ್ರಿಯಗಳ ಒಡತಿಯಾಗುವ ಬದಲು ದಾಸಿಯಾದರೆ ತನ್ನತನವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ಈ ಗೀತೆ ಸಾರುತ್ತದೆ ಎನ್ನುತ್ತಾರೆ. ‘ಏಳು ಸುತ್ತಿನ ಕೋಟೆ ಸಿನಿಮಾದ ‘ಏನೋ ಮಾಡಲು ಹೋಗಿ’ ಎಂಬ ಗೀತೆಯನ್ನು ವಿಮರ್ಶಿಸುವ ಕೃತಿಕಾರರು ಜಗತ್ತಿನ ನಾಯಕರಾಗುವ ಮುನ್ನ ಜಗುಲಿಯೊಳಗಿನ ಜನನಿಗೆ ನಾಯಕನಾಗಬೇಕು. ಈ ಸಮಾಜದಲ್ಲಿನ ವ್ಯವಸ್ಥೆಯನ್ನು ಸರಿಪಡಿಸಲು ಎಂಟೆದೆ ಇರಬೇಕು. ವೃತ್ತಾಕಾರದ ಈ ಕೋಟೆಯನ್ನು ಮುರಿದು ಒಳ ಪ್ರವೇಶಿಸಿದರೆ ಹೊರಬರಲು ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ನಾವೇ ಕೋಟೆಯೊಳಗೆ ಬಂಧಿ ಆಗಬೇಕಾಗುತ್ತದೆ.  ಸಾಂಘಿಕ ಪ್ರಯತ್ನದಿಂದ ಮಾತ್ರ ಸಮಾಜದ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ಸಂದೇಶವಿರುವುದನ್ನು ಅನೇಕ ಉದಾಹರಣೆಗಳ ಮೂಲಕ ನೀಡುತ್ತಾರೆ.

 ‘ಸತ್ಯ ಹರಿಶ್ಚಂದ್ರ’ ಸಿನಿಮಾದ ‘ಕುಲದಲ್ಲಿ ಕೀಳಾವುದೋ’ ಎಂಬ ಗೀತೆಯನ್ನು ವಿಮರ್ಶಿಸುವ ಲೇಖಕರು, ಈ ಮಣ್ಣಿಗೆ ಮತ್ತು ಬೆಂಕಿಗೆ ದೇಹ ಸೇರಿಕೊಳ್ಳುವ ಮುನ್ನ ಉರಿಯದೆ ಆರಬೇಕು. ಮಣ್ಣಿಗೆ ಹೋಗುವ ಮುನ್ನ ತಣ್ಣಗಾಗಿರಬೇಕು ಎಂಬ ಸಂದೇಶವನ್ನು ಕಟ್ಟಿಕೊಡುತ್ತದೆ ಅನ್ನುತ್ತಾರೆ. ‘ಮಠ’ ಚಿತ್ರದ ‘ತಪ್ಪು ಮಾಡದವರು ಯಾರವ್ರೆ’ ಎಂಬ ಗೀತೆಯು ಪ್ರತಿಯೊಬ್ಬರು ತಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಒಂದು ಸ್ವಾಸ್ಥ್ಯ ಸಮಾಜವನ್ನು ಈ ಹಾಡು ನಿರೀಕ್ಷಿಸುತ್ತದೆ.

 ‘ಗೆಜ್ಜೆಪೂಜೆ’ ಸಿನಿಮಾದ

‘ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ

 ಗೆಜ್ಜೆಪೂಜೆಯ ಉರುಳಿಗೆ

ಕೊರಳನೆಂದೂ  ನೀಡೆನು

’ ಎಂಬ ಗೀತೆಯಲ್ಲಿ ನಾಯಕಿ ಸಂಪ್ರದಾಯಿಕ ಧರ್ಮದ ನೆಪದಲ್ಲಿ ವ್ಯವಸ್ಥಿಕವಾಗಿ ಗೆಜ್ಜೆಪೂಜೆ ಎಂಬ ಅನಿಷ್ಠ ಪದ್ಧತಿಯನ್ನು ವಿರೋಧಿಸುವುದನ್ನು ಕಾಣಬಹುದು. ಬದುಕಲಿಕ್ಕೆ ನೂರಾರು ದಾರಿಗಳಿವೆ. ಆದರೆ ಅಧರ್ಮ, ಅನೀತಿ, ಅಹಂ,  ಬಡತನ, ಅಜ್ಞಾನದಿಂದ ಹೊರಬರಬೇಕು ಎನ್ನುತ್ತಾರೆ. ಹೆಣ್ಣನ್ನು ಮಾರಾಟದ ಸರಕನ್ನಾಗಿ ನೋಡುವರ ವಿರುದ್ಧ ಇಲ್ಲಿ ಆಕ್ರೋಶ ವ್ಯಕ್ತವಾಗಿದೆ. ಲೈಂಗಿಕ ಅರಾಜಕತೆಯನ್ನು ತರುವವರ, ಸಾಮಾಜಿಕ ವ್ಯವಸ್ಥೆಯನ್ನು ಹಾಳುಮಾಡುವವರ ವಿರುದ್ಧ ಸಮಾಜದ ಕಣ್ಣನ್ನು ಈ ಗೀತೆ ತೆರೆಸುತ್ತದೆ ಎನ್ನುತ್ತಾರೆ.

 ‘ಹಿಂದುಸ್ಥಾನವು ಎಂದೂ ಮರೆಯದ

ಭಾರತ ರತ್ನವು ನೀನಾಗು’

ಎಂಬ  ಸಿನಿಮಾ ಗೀತೆಯಲ್ಲಿ ನಾಡು-ನುಡಿಯ ಅನನ್ಯತೆಯನ್ನು ಗಟ್ಟಿಗೊಳಿಸಲಾಗಿದೆ. ಕರ್ನಾಟಕ ಮತ್ತು ಭಾರತವನ್ನು ಚಿತ್ರಿಸುವ ಗೀತೆ ಇದಾಗಿದೆ. ಭಾರತದ ಸಂಸ್ಕೃತಿಯನ್ನು, ಅದರ ಸಾರವನ್ನು ಪರಿಚಯಿಸುತ್ತದೆ ಎನ್ನುತ್ತಾರೆ. ‘ಯಾರಿಗೆ ಬೇಕು ಈ ಲೋಕ’ ಎಂಬ ಗೀತೆಯ ವಿಮರ್ಶೆಯಲ್ಲಿ  ಸಮಾಜದ ವ್ಯವಸ್ಥೆಯ ಬಗ್ಗೆ ತಿರಸ್ಕಾರವಿರುವುದನ್ನು ಹೇಳುತ್ತಾ ಪ್ರೀತಿಯ ಲೋಕವನ್ನು ಮತ್ತು ಪ್ರೀತಿಯ ವೈಫಲ್ಯತೆಯಿಂದ ಆಗುವ ಪರಿಣಾಮವನ್ನು ತುಂಬಾ ಚಂದವಾಗಿ ಇದರಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಎಂಬ ಚಿತ್ರಗೀತೆ ವಿಮರ್ಶೆಯಲ್ಲಿ ನಾಡು, ನುಡಿ, ಕಲೆ ಮೂಲಕ ಈ ನೆಲದ ಶ್ರೀಮಂತಿಕೆಯನ್ನು ಸಾಂಸ್ಕೃತಿಕ ಸೊಗಡನ್ನು ಸಾರಲಾಗಿದೆ ಎನ್ನುವುದನ್ನು ಲೇಖಕ ವಿವರಿಸಿದ್ದಾರೆ

ಒಟ್ಟಿನಲ್ಲಿ, ‘ಚಿತ್ರ ಚಿಂತನ’ದಲ್ಲಿ ಲೇಖಕರು  ಸಂವೇದನಾಶೀಲ ಹಾಡುಗಳ ಶ್ರೀಮಂತ ಸಂಸ್ಕೃತಿಯನ್ನು ತೆರೆದಿಟ್ಟಿದ್ದಾರೆ. ಆ ಕಾಲದ ವೈಚಾರಿಕ ಪ್ರಜ್ಞೆಗೆ ಹಾಡುಗಳು ಸಾಕ್ಷಿಯಾದುದನ್ನು, ಗೀತೆಗಳಲ್ಲಿ ಶಬ್ದ ಪೋಣಿಸುವ ಕಲೆ, ಪ್ರಾಸಬದ್ಧ ರಚನೆ, ಅಪೂರ್ವ ಸಾಹಿತ್ಯದ ಮೂಲಕ ವಾಸ್ತವದ ನೆಲೆಗಟ್ಟಿನಲ್ಲಿ ರಚನೆಯಾಗಿರುವುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.  ಹಾಡುಗಳ ಅರ್ಥವ್ಯಾಪ್ತಿಯನ್ನು ಹೆಚ್ಚಿಸಿ,  ಅದಕ್ಕೆ ರಾಮಾಯಣ, ಮಹಾಭಾರತ, ಜನಪದದ, ವಚನಗಳ, ಕವಿಗಳ ಸಾಲಿನ ಉದಾಹರಣೆ, ನಿದರ್ಶನ ಕೊಟ್ಟಿದ್ದಾರೆ. ಮಹತ್ವದ ಒಳನೋಟದ ಮೂಲಕ ಬದುಕಿಗೆ ಮತ್ತು ಸಮಾಜಕ್ಕೆ ಹೇಗೆ ಇದು ಅನ್ವಯವಾಗುತ್ತದೆ ಎನ್ನುವುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಸೂಕ್ಷ್ಮ ಮನಸ್ಸಿನಿಂದ ಕೇಳಿದರೆ ಸಿನಿಮಾ ಹಾಡುಗಳಲ್ಲಿ ಎಂತಹ ಮಾಧುರ್ಯವಿದೆ, ಅರ್ಥವಿದೆ, ಆಕರ್ಷಣೆಯಿದೆ ಎನ್ನುವುದನ್ನು ತಿಳಿಸಲು ಹೊಸಬಗೆಯ ಪ್ರಯತ್ನ ಮಾಡಿದ್ದಾರೆ.

Published by dattarey Hegde on April 16, 2025

Comments

Popular posts from this blog