ಚಿರಂತನ ನೆನಪಾಗಿ ಉಳಿಯುವ  



‘ಏಸೂರು ಕೊಟ್ಟರೂ ಈಸೂರು ಕೊಡೆವು’


 ಒಂದು ಗ್ರಾಮದ ರಕ್ಷಣೆಗೆ  ಇಂದು ಕುಟುಂಬವನ್ನು , ದೇಶದ ರಕ್ಷಣೆಗೆ ಒಂದು ಗ್ರಾಮವನ್ನು, ಆತ್ಮರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಜಿಸಬೇಕೆಂಬ ಮಾತಿದೆ. ಈಸೂರು ಎಂಬ ಗ್ರಾಮದ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಸವಸ್ವವನ್ನೂ ತ್ಯಾಗ ಮಾಡಿದೆ. ಇಂತಹ ಒಂದು ಗ್ರಾಮದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬಿಚ್ಚಿಡುವ ನಾಟಕವೇ ‘ಏಸೂರು ಕೊಟ್ಟರೂ ಈಸೂರು ಕೊಡೆವು’.

 ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ  ಈಸೂರಿನ ಸ್ವಾತಂತ್ರ್ಯ ಚಳವಳಿ ತುಂಬಾ ಪ್ರಮುಖವಾದುದು.  ದೇಶದ ಮೊದಲ ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿ, ತಮ್ಮ ಊರಿನವರನ್ನೇ ಸರ್ಕಾರದ ಅಧಿಕಾರಿಗಳನ್ನಾಗಿ ನೇಮಿಸಿ, ತಮ್ಮದೇ ಆದ ಕಾನೂನುಗಳನ್ನು, ನೀತಿ- ನಿಯಮಗಳನ್ನು ರೂಪಿಸಿ ಬ್ರಿಟಿಷರಿಗೆ ಸೆಡ್ಡು ಹೊಡೆದು ಆಡಳಿತ ನಡೆಸಿದ ಕೀರ್ತಿ ಈಸೂರಿನದು. ಇಂತಹ ಸಂದರ್ಭದಲ್ಲಿ ಬ್ರಿಟಿಷರು ಈ ಗ್ರಾಮದ ಐವರು ಸ್ವಾತಂತ್ರ್ಯ ಹೋರಾಟಗಾರರನ್ನು ನೇಣು ಶಿಕ್ಷೆಗೆ ಗುರಿಪಡಿಸುತ್ತಾರೆ.

 ಈ ಸತ್ಯಕಥೆಯ ನಾಟಕ ಕೃತಿ ‘ಏಸೂರು ಕೊಟ್ಟರೂ ಈಸೂರು ಕೊಡೆವು’. ಈ ನಾಟಕವನ್ನು ಬರೆದವರು ಸಾಸ್ವೆಹಳ್ಳಿ ಸತೀಶ್. ಇವರು ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕರು. ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ನಟನೆ, ನಿರ್ದೇಶನ, ಪ್ರಸಾಧನ, ಹಾಡುಗಳ ರಚನೆ ಹೀಗೆ  ಎಲ್ಲಾ ಕ್ಷೇತ್ರಗಳಲ್ಲೂ ನೈಪುಣ್ಯ ಹೊಂದಿದವರು.

ಪ್ರ್ರಸ್ತುತ ನಾಟಕ ಕೃತಿಯಲ್ಲಿ  ೧೬ ದೃಶ್ಯಗಳಿವೆ.  ಚಿಕ್ಕದು, ದೊಡ್ಡದು ಸೇರಿದಂತೆ ಸುಮಾರು ೩೦ ಪಾತ್ರಗಳಿವೆ. ಇಲ್ಲಿನ ಹೋರಾಟದ ಎಲ್ಲಾ ಅಂಶಗಳನ್ನು ರೋಮಾಂಚನಕಾರಿಯಾದವು. ಅದನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಕೆಲಸವನ್ನು ನಾಟಕಕಾರ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮದೇ ಆದ ಹೊಂಗಿರಣ ತಂಡದ ಮೂಲಕ ಇದರ ಪ್ರದರ್ಶನವನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಮಾಡಿದ್ದಾರೆ. ಭಾರತ ಸ್ವಾತಂತ್ರ್ಯದ ೭೫ನೆಯ ವರ್ಷದ ಸಂದರ್ಭದಲ್ಲಿ ಸಿದ್ಧಗೊಂಡ ನಾಟಕದ ಕೃತಿ ಇದಾಗಿದೆ. ನಾಟಕಕಾರ ಇಲ್ಲಿನ ಪಾತ್ರಗಳನ್ನೆಲ್ಲ್ಲ ಅಧ್ಯಯನ ಮಾಡಿ, ರಂಗಭೂಮಿಯಲ್ಲಿ ಪ್ರಸ್ತುತಗೊಳಿಸುವ ಮೂಲಕ ಈಸೂರಿನ ಹೋರಾಟದ ಹೆಸರು ರಾಷ್ಟ್ರದಾದ್ಯಂತ ಹರಡುವಂತೆ ಮಾಡಿದ್ದಾರೆ.    

 ಇತಿಹಾಸದ ಸೂಕ್ಷ್ಮಗಳನ್ನು ಚೆನ್ನಾಗಿ ಅರಿತೇ ಈ ಚಾರಿತ್ರಿಕ ನಾಟಕ ರಚನೆಯಾಗಿದೆ. ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಬರೆಯುವ ಮೂಲಕ ಕೃತಿ ಪ್ರಸಿದ್ಧ್ಧಿಯಾಗುವಂತೆ ಮಾಡಿದ್ದಾರೆ. ಬಹಳ ಬೇಡಿಕೆಯ ನಾಟಕ ಇದಾಗಿದ್ದು, ಸಾಕಷ್ಟು ಪ್ರದರ್ಶನದ ಸಹ ಕಂಡಿದೆ.    

ಕೃತಿಯ ಕುರಿತಾಗಿ ನೋಡುವುದಾದರೆ, ೧೯೪೨ರ ಆಗಸ್ಟ್ ೮ರಂದು ಮುಂಬೈನಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರು ಕರೆಕೊಟ್ಟಿದ್ದ  ಕ್ವಿಟ್ ಇಂಡಿಯಾ ಚಳವಳಿ  ಈಸೂರು ಘಟನೆಗೆ ಮೂಲ ಪ್ರೇರಣೆ. ಈ ಹೊತ್ತಿಗೆ ಈಸೂರಿನ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗಿ ಪ್ರಾದೇಶಿಕ ಹೋರಾಟಗಳಿಗಿಂತ ಭಿನ್ನವಾಗಿಯೇ ಚಳವಳಿಯನ್ನು ಆರಂಭಿಸಿ ತಮ್ಮ ಊರನ್ನು ದೇಶದ ಪ್ರಪ್ರಥಮ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಳ್ಳುತ್ತಾರೆ. ಬ್ರಿಟಿಷರ ವಿರುದ್ಧ   ಸಭೆಗಳನ್ನು ಆಯೋಜಿಸಿ ಕಂದಾಯ ಕೊಡುವುದನ್ನು ನಿರಾಕರಿಸಿ ತಮ್ಮ ಊರಿನ ವೀರಭದ್ರ ದೇವಾಲಯದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಾರೆ. ಇದನ್ನು ಬ್ರಿಟಿಷರು ವಿರೋಧಿಸಿ ದ್ವಜವನ್ನು ಕಿತ್ತೆಸೆದು ಊರಿನೊಳಕ್ಕೆ ಪೊಲೀಸರ ಮೂಲಕ ನುಗ್ಗಿ ಜನರನ್ನು ಮನೆಯೊಳಕ್ಕೆ ಕೂಡಿ ಹಾಕುತ್ತಾರೆ. ಕೋಪಗೊಂಡ ಜನರು ಗಲಭೆ ಆರಂಭಿಸುತ್ತಾರೆ.

ಈ ವೇಳೆ ಕೆಂಚೇಗೌಡ ಎನ್ನುವ  ಸಬ್ ಇನ್ಸ್‌ಪೆಕ್ಟರ್ ಚಳವಳಿಕಾರರ ಮೇಲೆ ಗುಂಡು ಹಾರಿಸುತ್ತಾನೆ. ಕೆಲವರಿಗೆ ಗುಂಡೇಟು ತಗಲುತ್ತದೆ. ಉದ್ರಿಕ್ತರು ಅಮಲ್ದಾರ್ ಚನ್ನಕೃಷ್ಣಯ್ಯ ಮತ್ತು ಕೆಂಚೇಗೌಡನನ್ನು ಕೊಂದು ಹಾಕುತ್ತಾರೆ. ಈ ಸುದ್ದಿ ತಿಳಿದ ಬ್ರಿಟಿಷ್ ಸರಕಾರ ಈಸೂರಿಗೆ ಸೈನ್ಯ ಮತ್ತು ಪೊಲೀಸ್ ಪಡೆಯನ್ನು ಕಳುಹಿಸುತ್ತದೆ. ಈ ವೇಳೆ  ಹಲವರನ್ನು ಬಂಧಿಸಲಾಗುತ್ತದೆ, ಕೆಲವರು ಕಾಡು ಸೇರುತ್ತಾರೆ. ೪೧ ಜನರನ್ನು ಬಂಧಿಸಲಾಗುತ್ತದೆ.  ದಂಗೆಗೆ ಕಾರಣರಾದವರ ಮೇಲೆ ಸಾಗರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುತ್ತದೆ. ಏಕಮುಖದ ವಿಚಾರಣೆ ನಂತರ ಹೋರಾಟಗಾರರಾದ ಗುರಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯನಾರಾಯಣಾಚಾರ್ಯ ಮತ್ತು ಶಂಕರಪ್ಪ ಎನ್ನುವವರಿಗೆ ಮರಣದಂಡನೆ ಆಗುತ್ತದೆ.  ಹೀಗೆ ಈಸೂರು ದುರಂತವು ಚಿರಂತನ ನೆನಪಾಗಿ ಉಳಿಯುತ್ತದೆ.

 ಗಾಂಧೀಜಿಯ ಅಹಿಂಸಾತ್ಮಕ ಕರೆಗೆ ಯುವಕರು ಬ್ರಿಟಿಷರ ವಿರುದ್ಧ ಉಗ್ರ ಹೋರಾಟಕ್ಕಿಳಿದು ಸಾವನ್ನಪ್ಪಬೇಕಾಯಿತು. ಈ  ಹೋರಾಟ ಮುಂದಿನ ಹೋರಾಟಗಳಿಗೆ ದೊಡ್ಡ ಸ್ಫ್ಪೂರ್ತಿಯಾಯಿತು. ಅಲ್ಲಿ ಹುಟ್ಟಿಕೊಂಡ ಒಂದು ಘೋಷಣೆಯೇ  ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎನ್ನುವುದು. ನಾಟಕ ನೋಡಿದವರಿಗೆ ರಾಷ್ಟ್ರೀಯ ಪ್ರಜ್ಞೆ ಮೂಡುತ್ತದೆ. ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ಇದು ನಡೆದಿದ್ದಾದರೂ ಅದು ಸಮಕಾಲೀನವೇ ಆಗಿದೆ ಎನ್ನುವ ಭಾವನೆ ಜನರಲ್ಲಿ ಮೂಡುತ್ತದೆ. ಇಂತಹ ಚಾರಿತ್ರಿಕ ನಾಟಕಗಳು ಇತಿಹಾಸದ ಸೂಕ್ಷ್ಮಗಳನ್ನು, ವರ್ತಮಾನದ ಅಗತ್ಯಗಳನ್ನು ಒತ್ತಿ ಹೇಳುತ್ತವೆ. ಇಲ್ಲಿ ಕೃತಿಕಾರ ಘಟನೆಗೆ ಅಪಚಾರವಾಗದ ಹಾಗೆ ನಾಟಕ ರಚಿಸಿರುವುದು ನಿಜಕ್ಕೂ ಮೆಚ್ಚುವಂತದ್ದು.

ಈಸೂರು ಮತ್ತು ಭಾರತ ಸದಾ ಈಸೂರಿನ ಶೂರರನ್ನು ನೆನಪಿಸುತ್ತವೆ.

- ದತ್ತಾತ್ರೇಯ ಹೆಗಡೆ

published by dattareya Hegde on April 2,2025

.............................

Comments

Popular posts from this blog