ಶುದ್ಧ ಪ್ರೀತಿ- ಪ್ರೇಮದ ಹುಡುಕಾಟದ 
“ಕಿಲಿಗ್”

ಪ್ರಕಾರ- ಮಿನಿಕಾದಂಬರಿ

ಲೇಖಕರು- ಜಯರಾಮಾಚಾರಿ


ಪ್ರಕಾಶಕರು- ಸಸಿ ಪ್ರಕಾಶನ, ನಾಗರಬಾವಿ ಬೆಂಗಳೂರು.

ಪುಟಗಳು-೧೨೦.

ಬೆಲೆ- ೧೪೫/-



...........................


“ಕಿಲಿಗ್” ಇದು ಇಂಗ್ಲಿಷ್ ಹೆಸರಿನ ಕನ್ನಡ ಕಾದಂಬರಿ. ಈ ಶಬ್ದಕ್ಕೆ ಉಲ್ಲಾಸದ ಕ್ಷಣ, ರೊಮ್ಯಾಂಟಿಕ್ ಮೂಡ್, ಸಡಗರ ಎಂಬರ್ಥವಿದೆ. ಗಂಡ-ಹೆಂಡತಿ  ಮಧ್ಯೆಯ ಜೀವನದಲ್ಲಿ ಪ್ರೀತಿಯ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಸಾರುವ ಕಾದಂಬರಿ. ಬೆಂಗಳೂರಿನ ಮೆಟ್ರೋದಲ್ಲಿ ಸ್ಟೇಶನ್ ಸೂಪರಿಂಡೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ಜಯರಾಮಾಚಾರಿ ಅವರ ಚೊಚ್ಚಲ ಕೃತಿಯೂ ಹೌದು.  

೧೨ ಅಧ್ಯಾಯಗಳನ್ನು ಹೊಂದಿರುವ ಕಿರು ಕಾದಂಬರಿ ‘ಕಿಲಿಗ್’ನಲ್ಲಿ ನಾಯಕ ಪತ್ನಿ ಇದ್ದರೂ, ಶುದ್ಧ ಪ್ರೀತಿ, ಶುದ್ಧ ಪ್ರೇಮ ಇದ್ಯಾವುದಕ್ಕೂ ಬೆಲೆ ಕೊಡದೆ, ಇನ್ನೊಂದು ಹೆಣ್ಣಿನಲ್ಲಿ ಅನುರಕ್ತನಾಗಿ ಅವಳಲ್ಲಿ ಪ್ರೀತಿ, ಪ್ರೇಮ ಹುಡುಕುತ್ತಾನೆ. ನಂತರ ಅವಳೊಂದಿಗೆ ಅನುಭವಿಸುವ ಪ್ರೇಮ, ಕಾಮಗಳ ಕುರಿತಾಗಿದೆ.  ಸರಳ ಭಾಷೆಯ ಈ ಕೃತಿ  ಒಮ್ಮೆಲೆ ಓದಿಸಿಕೊಂಡು ಹೋಗುವಂತಿದೆ.

ಕಾದಂಬರಿಯ ನಾಯಕನಿಗೆ ಮಕ್ಕಳಾಗಿಲ್ಲವೆಂಬ ಚಿಂತೆಯಿಂದ ಆರಂಭವಾಗುವ ಕಥೆ ಮಗು ಹುಟ್ಟುವವರೆಗೆ ಸಾಗಿ ಅಲ್ಲಿಗೆ ಅಂತ್ಯಗೊಳ್ಳುತ್ತದೆ. ಈ ಮಧ್ಯದಲ್ಲಿ  ಬಾಲ್ಯದ ಸ್ನೇಹಿತೆಯ ಜೊತೆ  ಪ್ರೀತಿ, ಪ್ರೇಮ, ಕಾಮ, ಹೃದಯದಾಟ ವಿಷಯಗಳು ಈ ಕಾದಂಬರಿಯಲ್ಲಿ ಬರುತ್ತವೆ.

ನಾಯಕ ಕೊಲ್ಕತ್ತಾ ನಗರಕ್ಕೆ ಕಾರ್ಯನಿಮಿತ್ತ ತೆರಳಿದಾಗ ಅಲ್ಲಿ ಧೂಳು ಹಿಡಿದ ಬಟ್ಟೆಯ, ಕೆದರಿದ ಕೂದಲಿನವನೊಬ್ಬ ಫುಟ್‌ಪಾತ್‌ನಲ್ಲಿ ಗೋಡೆಗೊರಗಿ ಕೂತು ಕನ್ನಡ ಹಾಡು ಹಾಡುವುದನ್ನು ವೀಡಿಯೋ ಮಾಡಿ ತನ್ನ ಫೇಸ್‌ಬುಕ್‌ನಲ್ಲಿ ‘ಬಂಗಾಳಿ ನಾಡಿನಲ್ಲಿ ಕನ್ನಡ ಕೋಗಿಲೆ’ ಎಂದು ವಿಡಿಯೋ ಹಾಕುತ್ತಾನೆ. ಒಮ್ಮೆ  ಮೆಟ್ರೋ ಸ್ಟೇಶನ್‌ನಲ್ಲಿ ಮಗುವನ್ನು ಕಳೆದುಕೊಂಡು ಅಕ್ಷತಾ ಎಂಬ ಬಾಲ್ಯದ ಗೆಳತಿ ಮಗುವನ್ನು ಹುಡುಕಾಡುತ್ತ ನಾಯಕನಲ್ಲಿಗೆ ಆಕಸ್ಮಿಕವಾಗಿ ಬರುವುದು, ಎಷ್ಟೋ ದಿನದ ನಂತರ ನಾಯಕನ ಫೇಸ್‌ಬುಕ್‌ನಲ್ಲಿ ಸ್ನೇಹ ಕೋರುತ್ತಾಳೆ. ಅಲ್ಲಿಂದ ಆರಂಭವಾಗುವ ಗೆಳೆತನ ಮೆಸೇಜು, ಭೇಟಿಯವರೆಗೆ ಸಾಗುತ್ತದೆ. ಅಲ್ಲಿಂದ ಕಾದಂಬರಿ ತಿರುವು ಪಡೆಯುತ್ತದೆ.

 ಅಕ್ಷತಾ ತನಗೆ ಮೆಸೇಜ್ ಮಾಡಿದ್ದನ್ನು ನೋಡಿ ನಾಯಕನಿಗೆ ಏನೇನೋ ರೋಚಕ ಕಲ್ಪನೆಯಲ್ಲಿ ಭೇಟಿಯಾಗಲು ನಿರ್ದಿಷ್ಟ  ಕೆಫೆಗೆ ಹೋದರೆ ಅಲ್ಲಿ ಅವಳ ವರ್ತನೆ ಈತನಿಗೆ ನಿರಾಸೆ ಮೂಡಿಸುತ್ತದೆ. ಈತನ ಕಲ್ಪನೆಗಳೆಲ್ಲ ಠುಸ್ ಆಗುತ್ತವೆ. ‘ಬಂಗಾಳ ನಾಡಿನ ಕನ್ನಡ ಕೋಗಿಲೆ’ ಬಗ್ಗೆ ಮಾಹಿತಿ ಪಡೆಯಲು ಆಕೆ ಬಂದಿರುರುತ್ತಾಳೆ. ಈತ ತನ್ನ ಅತ್ತೆ ಮಗ ಸುಹಾಸ್ ಎನ್ನುವವನಾಗಿದ್ದು, ಉತ್ತಮ ಹಾಡುಗಾರ, ಆದರೆ ಕಾಣೆಯಾಗಿ ಹಲವು ವರ್ಷವಾಗಿದೆ. ಎಷ್ಟೇ ಹುಡುಕಿದರೂ ಸಿಗಲಿಲ್ಲ . ಅವನ ಪತ್ತೆಗೆ ಸಹಕರಿಸುವಂತೆ ಕೋರುತ್ತಾಳೆ. ಹುಡುಗಿಯರು ಅವಶ್ಯವಿದ್ದರೆ ಮಾತ್ರ ಹುಡುಕಿ ಬರುತ್ತಾರೆ ಎನ್ನುತ್ತಾ, ತನಗೆ ಟೈಮಿಲ್ಲ, ಫ್ರೆಂಡ್ ಅಲ್ಲಿದ್ದಾನೆ. ನಂಬರ್ ಶೇರ್ ಮಾಡುತ್ತೇನೆ. ಹುಡುಕಿ, ಸಿಗಬಹುದು ಎನ್ನುತ್ತಾ ಅಲ್ಲಿಂದ ಹೊರಡುತ್ತಾನೆ.  

ಕೆಲವು ದಿನಗಳ ನಂತರ ರಜೆ ಬಾಕಿ ಇದೆ ಕೊಲ್ಕೊತ್ತಾಗೆ ಹೋಗೋಣ ಎಂದು ಅಕ್ಷತಾಳನ್ನು ಒಪ್ಪಿಸಿ ಆಕೆಯೊಂದಿಗೆ ತೆರಳುತ್ತಾನೆ. ಅಲ್ಲಿ ವಾರವಿಡಿ ಆತನನ್ನು ಹುಡುಕಿದರೂ ಸಿಗುವುದಿಲ್ಲ.  ಸಾಕಾಗಿ ಇಬ್ಬರೂ ಪ್ರತ್ಯೇಕ ರೂಮ್‌ನಲ್ಲಿ ತಂಗಿದ್ದಾಗ ಅವಳು ಬೇಸರದಿಂದಿದ್ದ ಕಾರಣ  ಕರೆಮಾಡಿದಾಗ ಆಕೆ  ಜೋರಾಗಿ ಅಳಲಾರಂಭಿಸುತ್ತಾಳೆ. ಆಕೆಯನ್ನು ಸಮಾಧಾನಪಡಿಸಲು ತೆರಳುತ್ತಾನೆ. ಆತನಿಗೊರಗಿ ಇಲ್ಲಿಯೇ ಮಲಗೆಂದು ಹೇಳಿ ತಬ್ಬಿಕೊಳ್ಳುತ್ತಾಳೆ. ಕಾಮಜ್ವಾಲೆ ಧಗ್ ಎಂದು ಹೊತ್ತಿಕೊಂಡು ಆವರಿಸಿಬಿಡುತ್ತದೆ.

 ವಿಚ್ಚೇದನದ ನಂತರ ಬೆಂಗಳೂರಿನಲ್ಲಿ ಮನೆ ಮಾಡಲು ಅಕ್ಷತಾ ಬಂದಾಗ ಅವಳೊಡನೆ ಮನೆ ಹುಡುಕಲು ಒಂದು ದಿನ ತಿರುಗಾಡುತ್ತಾನೆ. ಆದರೆ ಇದೇ ವೇಳೆ ಆತನ ಪತ್ನಿ ರಂಜಿನಿಗೆ ಹೆಣ್ಣು ಮಗುವಾಗುತ್ತದೆ. ಇಲ್ಲಿಗೆ ಕಾದಂಬರಿ ಅಂತ್ಯವಾಗುತ್ತದೆ.

 ಪತ್ನಿಯ ಹಿತವನ್ನು ಮರೆತು ಇನ್ನೊಂದು ಹೆಣ್ಣಿನ ಜೊತೆ ಪ್ರೀತಿ-ಪ್ರೇಮ ಹಂಚಿಕೊಳ್ಳಲು ಮುಂದಾದಾಗ ಮಗು ಹುಟ್ಟುವ ಮೂಲಕ ಇಷ್ಟದ ಮಡದಿಯಲ್ಲೇ ಮತ್ತೆ  ಪ್ರೀತಿ-ಪ್ರೇಮ  ಉಂಟಾಗುತ್ತದೆ. ಶುದ್ಧ ಪ್ರೀತಿ- ಪ್ರೇಮ ಯಾವುದೆನ್ನುವ ಹುಡುಕಾಟ, ದಾಂಪತ್ಯದ ಸಂಕಿರ್ಣತೆ ಇವೇ ಕಾದಂಬರಿಯ ಕಥಾವಸ್ತು.  

 ಕಾದಂಬರಿಯಲ್ಲಿ ಪ್ರೀತಿ, ಪ್ರೇಮ, ಪೋಲಿತನದ ಸಾಲುಗಳು, ನಾಯಕ  ವಿಚಿತ್ರ ಕಲ್ಪನೆಗಳ ಕನಸು ಕಾಣುವುದು, ಪ್ರೀತಿಯ ಚಪಲತೆ ಸಾಕಷ್ಟಿದೆ.  ಕೆಲವು ಡೈಲಾಗ್‌ಗಳನ್ನು ಹೇಳುತ್ತಲೇ  ಹಸಿಬಿಸಿ ಕಾಮದ  ವರ್ಣನೆ ಓದುಗನನ್ನು ಮುಜುಗರಕ್ಕೆ ಈಡುಮಾಡುತ್ತವೆ.

Published by Dattareya Hegde on March 21-2025

...........................


Comments

Popular posts from this blog