ಕಿವಿ ನಿಮಿರಿಸುವ
ಇಲಿಗೆ ಅಂಜಿದ ಹುಲಿ‘ಇಲಿಗೆ ಅಂಜಿದ ಹುಲಿ’ ಈ ಕೃತಿ ಮಕ್ಕಳ ಕಥಾ ಸಾಹಿತ್ಯಕ್ಕೆ ಸಂಬಂಧಿಸಿದ್ದು. ‘ರಸಿಕ ಪುತ್ತಿಗೆ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಪುತ್ತೂರಿನ ಪಿ. ಸುಬ್ರಹ್ಮಣ್ಯ ಆಚಾರ್ ಬರೆದ ಕೃತಿ ಇದು. ಬಾಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿರುವ ರಸಿಕ ಪುತ್ತಿಗೆ ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು.
ಮಕ್ಕಳಿಗಾಗಿ ಕಿರು ಕಾದಂಬರಿ, ಅನೇಕ ಕಥೆ ಹಾಗೂ ನೂರಾರು ಶಿಶು ಗೀತೆಗನ್ನು ಅವರು ಬರೆದಿದ್ದಾರೆ. ಪ್ರಸ್ತುತ ‘ಇಲಿಗೆ ಅಂಜಿದ ಹುಲಿ’ ಎಂಬ ಬಾಲಕರ ಕಥಾನಕದಲ್ಲಿ ೧೭ ಕಥೆಗಳಿವೆ. ಇವೆಲ್ಲ ನೀತಿ ಬೋಧಕವೂ, ಮನೋರಂಜಕವೂ ಆದ ಸಾಹಿತ್ಯ ಭಾಗಗಳಾಗಿವೆ. ಶೈಶವ ವಿದ್ಯಾಭ್ಯಾಸಕ್ಕೆ ಸುಗಮದಾರಿ ಎಂದು ಹೇಳಲಾಗುವ ಈ ಬಾಲಕತೆಗಳು ಬಹಳ ಉಪಯುಕ್ತವಾದವು. ಕಥೆಗಳಲ್ಲಿ ಅಲ್ಲಲ್ಲಿ ವಿನೋದ, ಹಾಸ್ಯ, ಜಗಳ, ಕಾರ್ಯ, ಚಲನೆ, ಇತ್ಯಾದಿ ಇವೆ. ಈ ಕೃತಿಯನ್ನು ಓದಿದಾಗ ಅಲ್ಲಿನ ಪಾತ್ರಗಳು ಜೀವಕಳೆ ತುಂಬಿಕೊಂಡಿರುವುದು ಕಣ್ಣ ಮುಂದೆ ಕುಣಿಯುವುದು, ಒಂದಿಷ್ಟು ಅದ್ಭುತ ರಸವಿರುವ ಕಲ್ಪನಾಶಕ್ತಿ ಹೆಚ್ಚಿಸುವ ಕತೆಗಳಿರುವುದು ಕಂಡುಬರುತ್ತದೆ.
ಪುನರುಕ್ತಿಗಳು ಮಕ್ಕಳ ಕಥಾಲೋಕದ ಒಂದು ವೈಶಿಷ್ಟ್ಯವಾಗಿದೆ. ಮಕ್ಕಳಿಗೆ ಇಷ್ಟವಾಗುತ್ತದೆ ಎಂಬ ಕಾರಣಕ್ಕೆ ಮನೆ ಮಾತಿನ ಶಬ್ದ ಇಲ್ಲಿ ಪ್ರಯೋಗಿಸಲ್ಪಟ್ಟಿದೆ . ವಾಕ್ಯಗಳು ಅತಿ ಚಿಕ್ಕವಾಗಿವೆ. ಪಕ್ಷಿಗಳು, ಪ್ರಾಣಿಗಳು, ಕೀಟಗಳು ಎಂದರೆ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತವೆ. ಮಂಗ, ಆನೆಯ ಕಥೆ ಇನ್ನೂ ಹೆಚ್ಚು ಅರ್ಥವಾಗುತ್ತದೆ. ಇಂತಹ ವಸ್ತುಗಳನ್ನು ಇಟ್ಟುಕೊಂಡೇ ಈ ಕಥಾನಕವನ್ನು ಹೊಸೆಯುವ ಮೂಲಕ ಮಕ್ಕಳ ಮನಸ್ಸನ್ನು ಸೆಳೆಯುವ ಕೆಲಸವನ್ನು ಕಥೆಗಾರರು ಮಾಡಿದ್ದಾರೆ. ಇದರಿಂದ ಮಕ್ಕಳು ಆಸಕ್ತಿಯಿಂದ ಹಾಗೂ ಕಿವಿ ನಿಮಿರಿಸಿ ಕೇಳಲು ತುಂಬಾ ಅನುಕೂಲವಾಗಿವೆ. ಕಥಾವಸ್ತುಗಳು ಸಹ ಮಕ್ಕಳನ್ನು ಆಕರ್ಷಿಸುವಲ್ಲಿ ಸಫಲವಾಗಿವೆ.
ಇಲ್ಲಿನ ಮೊದಲ ಕಥೆಯ ಮತ್ತು ಕೃತಿಯ ಹೆಸರು ಒಂದೇ ಆಗಿದೆ. ‘ಇಲಿಗೆ ಅಂಜಿದ ಹುಲಿ’ಯಲ್ಲಿ ಉಪಾಯದಿಂದ ಏನನ್ನಾದರೂ ಸಾಧಿಸಬಹುದು ಎನ್ನುವ ನೀತಿ ಬೋಧಕವನ್ನು ಸಾರಲಾಗಿದೆ. ಮಡಿವಾಳನೊಬ್ಬ ಹುಲಿಯ ಅಪಾಯದಿಂದ ಪಾರಾದ ಸನ್ನಿವೇಶವನ್ನು ಇಲ್ಲಿ ಮನೋಹರವಾಗಿ ಚಿತ್ರಿಸಲಾಗಿದೆ. ಇನ್ನೊಂದು ಕಥೆ ‘ಕೊಂಬಿನ ಕಂಬಯ್ಯ’ದಲ್ಲಿ ಕೂಲಿ ಕೆಲಸ ಮಾಡುವವನನ್ನೂ ತಿರಸ್ಕರಿಸಬಾರದು. ಅವನೂ ಅರಸನಾಗಬಹುದು. ಕಾಲ ಒಂದೇ ರೀತಿ ಎಂದೂ ಇರುವುದಿಲ್ಲ ಎನ್ನುವ ನೀತಿಯನ್ನು ಕಂಬಯ್ಯ ಎಂಬ ಗೊಲ್ಲನ ಮೂಲಕ ಕಥಾಕಾರ ಸಾರಿದ್ದಾರೆ. ಕಂಬಯ್ಯ ಇಲ್ಲಿ ರಾಜನ ಮಗಳನ್ನು ಮದುವೆಯಾಗುವ ಮೂಲಕ ರಾಜನಾಗುವ ಸನ್ನಿವೇಶವನ್ನು ವಿವರಿಸಿದ್ದಾರೆ.
‘ ಡಬ್ಬ ಕದ್ದವರಿಗೆ ಇಕ್ಕು’ಎಂಬ ಕಥೆಯಲ್ಲಿ ತಪ್ಪು ಮಾಡಿದವನು ಅಥವಾ ಕಳ್ಳತನ ಮಾಡಿದವನಿಗೆ ಶಿಕ್ಷೆ ಆಗಲೇಬೇಕು ಎಂಬ ನೀತಿ ಇದ್ದರೆ, ‘ಒಂದೇ ವರ’ ಎಂಬ ಕತೆಯಲ್ಲಿ ಬುದ್ಧಿವಂತಿಕೆಯಿಂದ ಏನನ್ನಾದರೂ ಪಡೆಯಬಹುದು ಎನ್ನುವ ಮೂಲಕ ಗತಿ ಇಲ್ಲದ ಬ್ರಾಹ್ಮಣ ವರ ಪಡೆದುದನ್ನು , ‘ರಾಜಿ’ ಎಂಬ ಕತೆಯಲ್ಲಿ ದುರಾಸೆ ಮಾಡದೆ ಸಿಕ್ಕಿದಷ್ಟು ಉಳಿಸಿಕೊಳ್ಳಬೇಕು ಎನ್ನುವುದನ್ನು, ದುಷ್ಟ ವಿಚಾರಗಳನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಇದರಿಂದ ಸುಖವಾದ ಬದುಕು ಕಾಣಬಹುದು ಎನ್ನುವುದನ್ನು ಮನೋಹರವಾಗಿ ಚಿತ್ರಿಸಿದ್ದಾರೆ.
‘ಊಟ’ ಎಂಬ ಕಥೆಯಲ್ಲಿ ಅಡ್ಡ ಹೆಸರಿನ ಅವಾಂತರವನ್ನು ಬಿಚ್ಚಿಟ್ಟಿದ್ದಾರೆ. ‘ಎದ್ದು ನಿಂತು ಕುಂಟ ಎನ್ನಿಸಿಕೊಂಡ’ ಎಂಬ ಕತೆ ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಎಲ್ಲರನ್ನೂ ಯಾವಾಗಲೂ ಎಲ್ಲಾ ಕಾಲದಲ್ಲೂ ನಂಬಿಸಲು ಸಾಧ್ಯವಿಲ್ಲ. ಕೆಲವರನ್ನು ಕೆಲವು ದಿನ, ಹಲವರನ್ನು ಹಲವು ದಿನ ಮಾತ್ರ ವಂಚಿಸಬಹುದೆಂದು ಮಂಕು ಶೆಟ್ಟಿ ಎನ್ನುವವನ ಕಥೆಯ ಮೂಲಕ ತಿಳಿಸಿಕೊಡುತ್ತಾರೆ.
‘ಚಿಕ್ಕವ್ವ ಚಿಕ್ಕವ್ವ’ ಎಂಬ ಕಥೆಯಲ್ಲಿ ಸಿಟ್ಟಿನ ಭರದಲ್ಲಿ ಅನಾಹುತ ಮಾಡಬಾರದು ಎನ್ನುವುದನ್ನು ಚಿಕ್ಕವ್ವಳನ್ನು ಕೊಂದ ಕೋಗಿಲೆಯ ಮೂಲಕ ತೋರಿಸಿದ್ದಾರೆ. ‘ಗೌಡನ ಮಗಳು’ ಕಥೆ ಮನೋಜ್ಞವಾಗಿದ್ದು, ಇದರಲ್ಲಿ ಉಪಾಯದಿಂದ ಹೇಗೆ ರಕ್ಷಿಸಿಕೊಳ್ಳಬಹುದು ಅಥವಾ ಉಪಾಯದಿಂದ ಜನರನ್ನು ಹೇಗೆ ಕಾಪಾಡಬಹುದು ಎಂಬ ಬಗ್ಗೆ ಇದೆ. ‘ಕಳ್ಳನನ್ನು ಹಿಡಿಸಿದ ಕಥೆ’ಯಲ್ಲಿ ಯಾರೋ ಮಾಡಿದ ಸಾಹಸಕ್ಕೆ ಯಾರೋ ಬಹುಮಾನ ಪಡೆಯುವುದು, ಸನ್ಮಾನ ಪಡೆಯುವುದು ಹೇಗೆ ನಡೆಯುತ್ತಿದೆ ಎನ್ನುವುದನ್ನು ಉದಾಹರಣೆ ಮೂಲಕ ತೋರಿಸಿದ್ದಾರೆ. ‘ಮಂಗಪ್ಪಾಜಿಯ ಕಥೆ’ ಎನ್ನುವುದು ಈ ಕೃತಿಯ ಅತ್ಯಂತ ಮಹತ್ವದ ಕಥೆ. ಇಲ್ಲಿ ಮಂಗನ ಮಿತ್ರತ್ವ ಗಳಿಸಿದ ಹುಡುಗರ ತಂಡ ಒಂದು ಅದು ಸತ್ತ ಬಳಿಕ ಮನುಷ್ಯರಂತೆ ಅಂತ್ಯಕ್ರಿಯೆ ನಡೆಸುವ ಮೂಲಕ ಜನಮನ ಗೆಲ್ಲುತ್ತಾರೆ ಮತ್ತು ಅದಕ್ಕೊಂದು ಸಮಾಧಿ ಕಟ್ಟಿ ನಂತರ ಅಲ್ಲಿಯೇ ಕಟ್ಟೆ ಕಟ್ಟಿ ಮಂಗಪ್ಪಾಗಿ ಕಟ್ಟೆ ಎಂದು ಹೆಸರಿಡುತ್ತಾರೆ. ಪ್ರಾಣಿಗಳಲ್ಲೂ ಮನುಷ್ಯತ್ವವನ್ನು ಕಾಣಬೇಕು ಎನ್ನುವ ಅತ್ಯಂತ ಎತ್ತರದ ತತ್ವ ಸಾರುವ ಕಥೆ ಇದಾಗಿದೆ. ‘ದೂಜ ಈಜು ಕಲಿಯಲು ಹೋದ’ ಎಂಬ ಕಥೆಯಲ್ಲಿ ಗೊತ್ತಿಲ್ಲದೆ ಯಾವ ಕೆಲಸಕ್ಕೂ ಇಳಿಯಬಾರದು. ಇದರಿಂದ ಅಪಾಯ ಎದುರಾಗುತ್ತದೆ ಎನ್ನುವುದನ್ನು ಈಜು ಬಾರದ ದೂಜನ ಮೂಲಕ ಚಿತ್ರಿಸಿದ್ದಾರೆ.
ಹೀಗೆ ಇಲ್ಲಿನ ಕೃತಿಯಲ್ಲಿ ಬರುವ ಕಥೆಗಳೆಲ್ಲ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುವ, ನೀತಿಯನ್ನು, ರಂಜನೆಯ ಗುಣವನ್ನು, ಕೌಶಲ್ಯವನ್ನು, ವಿಸ್ಮಯಗೊಳಿಸುವಂತಹ ಅಂಶವನ್ನು ಒಳಗೊಂಡಿವೆ. ಮಕ್ಕಳಿಗೆ ಇಂತಹ ಕಥೆಗಳು ಬಹುಬೇಗ ಅರ್ಥವಾಗುತ್ತವೆ, ಪ್ರಿಯವಾಗುತ್ತವೆ ಎಂಬುದನ್ನು ಅರಿತಿರುವ ಲೇಖಕರು ಅತ್ಯಂತ ಲೀಲಾಜಾಲವಾಗಿ ಇವುಗಳನ್ನು ನಿರೂಪಿಸಿದ್ದಾರೆ, ಕಟ್ಟಿಕೊಟ್ಟಿದ್ದಾರೆ.
ಈಗಿನ ಮಕ್ಕಳ ಆಸಕ್ತಿ ಬಾಲಕಥೆಗಳ ಮೇಲಿಲ್ಲ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗುತ್ತದೆ. ಎಲ್ಲೋ ಶೇ. ೧೦ರಷ್ಟು ಮಕ್ಕಳು ಇಂತಹ ಕಥೆ ಓದಬಹುದು. ಉಳಿದವರೆಲ್ಲ ಆಧುನಿಕ ತಂತ್ರಜ್ಞಾನಕ್ಕೆ ಸಿಲುಕಿದ್ದಾರೆ. ಅಲ್ಲಿಯೇ ಕಾಮಿಕ್ಸ್ ನೋಡುವುದು, ರಿಲ್ಸ್ ನೋಡುವುದು, ಮಾಡುವುದು ಮೊದಲಾದವುಗಳ ಮೋಡಿಗೆ ಬಲಿಯಾಗುತ್ತಿದ್ದಾರೆ. ಜೊತೆಗೆ ಈ ಸಾಹಿತ್ಯಕ್ಕೆ ಪ್ರೋತ್ಸಾಹ ಕಡಿಮೆಯಾಗುತ್ತಿರುವುದರಿಂದಲೋ ಏನೋ, ಬಾಲಸಾಹಿತ್ಯ ಬರೆಯುವವ ಸಂಖ್ಯೆ ಸಹ ಇಳಿಮುಖದಲ್ಲಿದೆ. ಮಕ್ಕಳ ಕಥೆಗಳನ್ನು ಓದುವವರು ಈಗ ಕ್ಷೀಣಿಸುತ್ತಿದ್ದಾರೆ. ಇದಕ್ಕೆ ಶಿಕ್ಷಣ ಮಾಧ್ಯಮವೂ ಕಾರಣ ಎನ್ನಬಹುದು. ಇದರ ಪರಿಣಾಮ ಮುಂದೆ ಸಾಹಿತ್ಯ ಮೇಲೆ ಆಗುವ ಆತಂಕ ಎದುರಾಗಿದೆ.
ಬಾಲ ಸಾಹಿತ್ಯವನ್ನು ಮನೆಯಲ್ಲಿ, ಶಾಲೆಯಲ್ಲಿ ಓದಿಸುವ, ಮಕ್ಕಳನ್ನು ಇತ್ತ ಕರೆತರುವ ಕೆಲಸ ಆಗಬೇಕಿದೆ. ದಿನನಿತ್ಯ ಮಕ್ಕಳಿಗೆ ಕಥೆ ಹೇಳುವ ಪರಿಪಾಠ ಇಟ್ಟುಕೊಂಡರೆ ಅವರಿಗೆ ಈ ಕ್ಷೇತದ ಬಗ್ಗೆ ಆಸಕ್ತಿ ಮೂಡಿಸಿ ಮರಳಿ ಕರೆತರಬಹುದು.
Published on March 27,2025 by Dattatreya Hegde
,,,,,,,,,,,,,,,,,,,,,,,,

Comments
Post a Comment