ಬಾಲ್ಯ ಸಹಜ ಮುಗ್ಧ ಭಾಷೆಯ

 ‘ಗುಬ್ಬಚ್ಚಿ’
 


‘ಗುಬ್ಬಚ್ಚಿ’ ಇದು ಎಳೆಯ ಮಕ್ಕಳ ಮನಸೆಳೆಯುವ ಶಿಶು ಗೀತೆಗಳ ಸಚಿತ್ರ ಸಂಕಲನ. ಇದನ್ನು ರಚಿಸಿದವರು ಎಚ್. ವಿಧಾತ್ರಿ ರವಿಶಂಕರ್. ಇವರು ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದವರು. ಇದು ಅವರ ಚೊಚ್ಚಲ ಕೃತಿ.

ಇಲ್ಲಿನ ಪದ್ಯಗಳಲ್ಲಿ ಬಾಲ್ಯ ಸಹಜ ಮುಗ್ಧ ಭಾಷೆ ಕಂಡುಬರುತ್ತದೆ.  ಇದು ಮನಸ್ಸಿಗೆ ಮುದ ಕೊಡುತ್ತದೆ. ಇಲ್ಲಿನ ಗೀತೆಗಳು ನಮ್ಮನ್ನು ಕುಣಿತಕ್ಕೊಳಪಡಿಸುತ್ತವೆ, ತಾಳ ಹಾಕಿಸುತ್ತವೆ, ಕುತೂಹಲಗಳ ಪರಿಸರವಿದೆ, ಮಕ್ಕಳ ಮೆಚ್ಚಿನ ಪ್ರಾಣಿಗಳಿವೆ, ಪರಿಸರವಿದೆ, ದೇಶಭಕ್ತಿ ಇದೆ, ವಸ್ತುಗಳ ಆಯ್ಕೆ ಚೆನ್ನಾಗಿದೆ. ಕವಯತ್ರಿ ಕೃತಕತೆಯ ಸುಳಿವಿಲ್ಲದೆ ಬರೆದಿದ್ದಾರೆ. ಇಲ್ಲಿನ ಪದ್ಯಗಳ ಕಂಪು ಮಕ್ಕಳ ಮನಸ್ಸನ್ನು ತಟ್ಟುವಂತಿದೆ. ಅವರಿಗೆ ಯಾವುದನ್ನು.

 ಈ ಸಂಕಲನದಲ್ಲಿ ಸುತ್ತ ಕಾಡಿದೆ, ನವಿಲಿದೆ ಬೆಕ್ಕಿದೆ, ಮನೆ, ಶಾಲೆ, ಗೊಂಬೆ, ಗಾಳಿಪಟ, ಅಕ್ಕ, ಅಪ್ಪ, ಅಮ್ಮ, ಅಣ್ಣ, ಕಾಮನಬಿಲ್ಲು, ಬಗೆಬಗೆಯ ಹೂವುಗಳಿವೆ. ಸುತ್ತಲ ಪ್ರಕೃತಿಯನ್ನು ಕಂಡು ಅವುಗಳ ಕುರಿತು ಹಾಡು ಹೊಸೆದಿದ್ದಾರೆ. ವಿಶೇಷವಾಗಿ, ಅಂತ್ಯ ಪ್ರಾಸಕ್ಕೆ ಇಲ್ಲಿ ಆದ್ಯತೆ ಕೊಡಲಾಗಿದೆ. ಲಘು ವಿನ್ಯಾಸ ಇಲ್ಲಿ ವಿಶೇಷವೂ ಗಮನಾರ್ಹವೂ ಆಗಿದೆ. ಮಕ್ಕಳು ತಮ್ಮ ಸುತ್ತಲಿನ ಜಗತ್ತನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಈ ಕವನ ಸಂಕಲನದಲ್ಲಿ ಸುಲಭವಾಗಿ ವಿವರಿಸಲಾಗಿದೆ.

 ಬಾಲ್ಯ ಇಲ್ಲಿ ಕಂಡುಂಡು ಬೆಳೆದು, ವರ್ತಮಾನದಿಂದ ಪ್ರೇರಣೆಗೊಂಡಿದೆ. ಪದಗಳ ಜೊತೆಗೆ ಆಟವಾಡುವ ತುಂಟತನವಿದೆ. ಗೀತೆಗಳನ್ನು ಪ್ರಾಸಗಳ ಜೊತೆ ನೇಯಲಾಗಿದೆ. ತನ್ನ ಸುತ್ತಲಿನ ಜಗದ ಸೌಂದರ್ಯವನ್ನು ಮೆಚ್ಚುವ ಸಾಲುಗಳು ಇಲ್ಲಿವೆ. ಈ ಕೃತಿಯಲ್ಲಿ ಒಟ್ಟು ೨೬ ಪುಟ್ಟ ಪುಟ್ಟ ಆಕರ್ಷಕ ಗೀತೆಗಳು ಇವೆಲ್ಲವೂ ಸರಳವೂ, ಮುಗ್ಧವೂ ಆದ ಭಾಷೆಯಲ್ಲಿರುವುದು ವಿಶೇಷವಾಗಿದೆ. ಆದ್ದರಿಂದ ಮಕ್ಕಳಿಗೆ ಖುಷಿ ತರಬಲ್ಲವುಗಳಾಗಿವೆ.

 ಮೊದಲ ಕವಿತೆ ‘ನನ್ನ ಮನೆ’ ಇದರಲ್ಲಿ ನನ್ನ ಮನೆ ಚಂದ/ ಇಲ್ಲಿ ನಾನೇ ಕಂದ/ ಇದುವೇ ನನಗೆ ಇಷ್ಟ/ ಇಲ್ಲ ನನಗೆ ಕಷ್ಟ/ ಎಂಬ ಸಾಲನ್ನು ಗಮನಿಸಿದಾಗ ಸರಳ ಸುಲಭವಾದ ಪ್ರಾಸಬದ್ಧತೆ ಕಂಡುಬರುತ್ತದೆ. ಅದೇ ರೀತಿ ಮಳೆ ಬಂತು ಮಳೆ ಬಣ್ಣದ ಹಕ್ಕಿ, ನನ್ನ ಗೊಂಬೆ, ಚಂದದ ಕಾಡು, ನನ್ನ ಶಾಲೆ, ನವಿಲು, ಆನೆ ಬಂತು ಆನೆ ಮೊದಲಾದ ಸುಂದರ ಕವಿತೆಗಳನ್ನು ಗಮನಿಸಬಹುದು. ಇಲ್ಲಿನ ಗೀತೆಗಳು ಒಂದಕ್ಕಿಂತ ಒಂದು ಆಕರ್ಷವಾಗಿವೆ. ಏಕೆಂದರೆ ಪದ್ಯದ ವಸ್ತು  

ವಿನ ಸೆಳೆತ. ಮಕ್ಕಳಿಗೆ ಯಾವುದು ಇಷ್ಟವೋ ಅದನ್ನೇ ಹುಡುಕಿ ಇದನ್ನು ರಚಿಸಿದ್ದು ಗೊತ್ತಾಗುತ್ತದೆ.

‘ನನ್ನ ಬಳೆ’ ಎಂಬ ಕವಿತೆ ಗಮನಿಸಿದಾಗ ಅಂದ ಚಂದದ ಬಳೆ/ ನೀನು ನನ್ನನ್ನು ಸೆಳೆ/ ಬಿಳಿಯ ಬಣ್ಣದ ಬಳೆ/ ನನ್ನನ್ನು ಬಳಿಗೆ ಸೆಳೆ/ ಮಕ್ಕಳ ಮನಸ್ಸನ್ನು ಬಣ್ಣ ಹಾಗೂ ಬಳೆಯ ವರ್ಣನೆಯೊಂದಿಗೆ ಸುಲಭವಾಗಿ ಆಕರ್ಷಿಸುವಂತಹ ಕಲೆ ಲೇಖಕಿಯಲ್ಲಿ ಸಿದ್ಧಿಸಿರುವುದನ್ನು ಇಲ್ಲಿ ಕಾಣಬಹುದು. ‘ನನ್ನ ಪುಸ್ತಕ’ ಎಂಬ ಕವನದಲ್ಲಿ ಪುಸ್ತಕದಿಂದ ಏನೇನು ಲಾಭವಾಗುತ್ತದೆ ಎಂಬುದನ್ನು ಮನಸೆಳೆಯುವ ಭಾಷೆಯಲ್ಲಿ ವಿವರಿಸಿದ್ದಾರೆ. ಬುದ್ಧಿ ಹೇಳುವ, ತಿದ್ದುವ, ನೀತಿ ತಿಳಿಸುವ, ಪದ್ಯ ಹೇಳುವ, ಪಾಠ ಬರೆಸುವ, ಕಥೆ ಹೇಳುವ, ಭಾಷೆ ಕಲಿಸುವ,  ಪರೀಕ್ಷೆ ಬರೆಯುವ ಪುಸ್ತಕಕ್ಕೆ ನಾನು ನಮಿಸುವೆ ಎಂದು ಮುಗಿಸುತ್ತಾರೆ.

 ‘ನವಿಲು’ ಎಂಬ ಕವನದಲ್ಲಿ ಕಾಡಿನಲ್ಲಿ ಇರುವೆ/ ಚಂದವಾಗಿ ಕುಣಿವೆ/ ನಾನು ನೋಡ ಬರುವೆ/ ನಿನ್ನ ಜೊತೆಗೆ ನಲಿವೆ/ ಇಷ್ಟೊಂದು ಸುಂದರ ಪ್ರಾಸ ಬುದ್ಧವಾಗಿ ನವಿಲಿನ ವರ್ಣನೆ ಮಾಡಿರುವುದನ್ನು ಗಮನಿಸಬಹುದಾಗಿದೆ. ಈ ಸಂಕಲನದ ವಿಶೇಷತೆ ಎಂದರೆ, ಎಲ್ಲವೂ ನಾಲ್ಕು ಸಾಲಿನ ಐದಾರು ಪ್ಯಾರಾದವಾಗಿವೆ. ಪ್ರತಿ ಪದ್ಯವೂ ಚಿತ್ರದೊಂದಿಗೆ ಮೂಡಿಬಂದಿದೆ. ಇದು ಮಕ್ಕಳ ಮನಸ್ಸನ್ನು ಸೆಳೆಯಲು ಅತ್ಯುಪಯುಕ್ತ ಎನ್ನಬಹುದು.

ಸಾಮಾಜಿಕ ಜಾಲತಾಣಗಳು ಇಂದು ಮಕ್ಕಳನ್ನು ವಿಷಮ ಪರಿಸ್ಥಿತಿಗೆ ತಳ್ಳುತ್ತಿರುವ ಸಂದರ್ಭದಲ್ಲಿ ಅವರನ್ನು ಇಂತಹ ಶಿಶು ಗೀತೆಗಳು ಮೂಲಕ ಮತ್ತೆ ಸಾಹಿತ್ಯ ಲೋಕಕ್ಕೆ ಅಥವಾ ಅರಿವಿನ ಲೋಕಕ್ಕೆ ಕರೆತರಲು ಇದು ಸಾಧ್ಯವಾಗುತ್ತದೆ. ಮಕ್ಕಳೊಳಗೆ ತಿಳಿ ನೀರು ತುಂಬುವ ಕಾರ್ಯವನ್ನು ನಾವೆಲ್ಲ ಮಾಡಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಶಿಶು ಗೀತೆ ಕ್ಷೇತ್ರದಲ್ಲಿ ಹೆಚ್ಚಿನ ಕವಿತೆಗಳು ಬರುವಂತಾಗಬೇಕು. ಇದರಿಂದ ಅವರ ಶಬ್ದಭಂಡಾರದ ಜೊತೆ ಕಲ್ಪನಾಲೋಕವೂ ಇಮ್ಮಡಿಸುತ್ತದೆ. ಸರಳ ಭಾಷೆಯ ಕತೆ, ಕವನ ಪ್ರತಿ ಮಗುವಿಗೂ ಇಷ್ಟವಾಗುತ್ತದೆ. ಅದರಲ್ಲೂ ಕಥೆ, ಲೇಖನಗಳಿಗಿಂತ ಕವಿತೆ ಮಗುವಿನ ನೆನಪಿನಂಗಳದಲ್ಲಿ ಸದಾ ಉಳಿಯುತ್ತದೆ. ಕವಯತ್ರಿಯ ಗೀತೆಯ ಸೃಷ್ಟಿ ಕಲೆ ಇನ್ನಷ್ಟು ಹೆಚ್ಚಲಿ.


Published by Dattareya Hegde on March 27,2025

........................

Comments

Popular posts from this blog