ಬದುಕಿನ ಸವಾಲುಗಳನ್ನು ಬಿಂಬಿಸುವ
‘ಇಲ್ಲಗಳ ನಡುವೆ’
ಕೃತಿಯ ಹೆಸರು- ಇಲ್ಲಗಳ ನಡುವೆ
ಲೇಖಕರು- ಶ್ರೀ ಮುದ್ರಾಡಿ
ಪ್ರಕಾರ- ಕವನ ಸಂಕಲನ
ಪ್ರಕಾಶಕರು- ಹೊಸಸಂಜೆ ಪ್ರಕಾಶನ, ಕಾರ್ಕಳ
ಪುಟಗಳು- ೧೧೬
ಬೆಲೆ-೧೫೦/-
ಜೀವನಾನುಭವಗಳ ಜೊತೆಗೆ ಬದುಕಿನ ಸವಾಲು, ಸಂಕಟಗಳನ್ನು ಪರಿಚಯ ಮಾಡಿಕೊಡುತ್ತ- ಶೋಷಣೆ, ಅಸಮಾನತೆ, ಪ್ರೀತಿಯ ಸಂಬಂಧಗಳ ಧ್ವನಿಯನ್ನು ಗಟ್ಟಿಯಾಗಿ ಪ್ರತಿಧ್ವನಿಸುವ ಕವನ ಸಂಕಲನ ‘ಇಲ್ಲಗಳ ನಡುವೆ’. ಇಲ್ಲಿ ಸಮಾಜದ ನಿರ್ಲಕ್ಷಿತರ, ಪರಿತ್ಯಕ್ತರ ಮತ್ತು ಅನಾಥರ ಕುರಿತ ಕಾಳಜಿ ಹೆಚ್ಚಿನದಾಗಿ ಕಂಡುಬರುತ್ತದೆ. ವಿಶೇಷವಾಗಿ ಪ್ರಕೃತಿ, ತಾಯಿ, ಗುರು, ಕುಟುಂಬ ಮೊದಲಾದವುಗಳಿಗೆ ಪ್ರಾಧಾನ್ಯ ನೀಡಿರುವುದು ಗಮನಾರ್ಹವಾದುದು. ಭಾಷೆಯೊಂದಿಗೆ ಆಕರ್ಷಕ ಪದ ಪ್ರಯೋಗದ ಮೂಲಕ ತನ್ನ ಕವಿತಾ ಸಾಮರ್ಥ್ಯವನ್ನು ಕವಯತ್ರಿ ಇಲ್ಲಿ ತೋರ್ಪಡಿಸಿದ್ದಾರೆ.
ನಿಟ್ಟೆಯ ಎನ್. ಎಸ್. ಎ. ಎಂ. ಪಿ.ಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಶ್ರೀ ಮುದ್ರಾಡಿ ಈ ಕೃತಿಯ ಕರ್ತೃ. ವಿದ್ವಾಂಸರಾಗಿದ್ದ ದಿ. ಅಂಬಾತನಯ ಮುದ್ರಾಡಿಯವರ ಪುತ್ರಿ. ಪ್ರಸ್ತುತ ಸಂಕಲನ ಅವರ ಚೊಚ್ಚಲ ಕೃತಿಯಾಗಿದೆ. ತಮ್ಮ ತಂದೆಯವರ ಸಾಹಿತ್ಯ ಸಂಸರ್ಗದಲ್ಲಿ ಬೆಳೆದುಬಂದ ಹಿನ್ನೆಲೆಯಲ್ಲಿ ಇವರಲ್ಲೂ ಸಹ ಕಾವ್ಯಸುಧೆ ಹರಿದು ಬಂದಿರುವುದನ್ನು, ಅಧ್ಯಾಪನದ ಜೊತೆಗೆ ತಾನೂ ವಿದ್ಯಾರ್ಥಿಯಾಗಿ ಕಂಡುಂಡ ಅನುಭವಗಳನ್ನು ಸೊಗಸಾಗಿ, ಮನಸೆಳೆಯುವ ರೀತಿಯಲ್ಲಿ ಸೃಜನಶೀಲವಾಗಿ ಕಟ್ಟಿಕೊಟ್ಟಿರುವುದನ್ನು ನಾವಿಲ್ಲಿ
ಗಮನಿಸಬಹುದು. ಹೀಗಾಗಿ ಕೃತಿಯು ಓದುಗರ ಹೃದಯ ಮುಟ್ಟುವಲ್ಲಿ ಯಶಸ್ವಿಯಾಗಿದೆ.
ಈ ಕೃತಿಯಲ್ಲಿ ೭೩ ಕವಿತೆಗಳ ಗರಿಯನ್ನು ಬಿಚ್ಚಿಟ್ಟಿದ್ದಾರೆ. ವಿವಿಧ ವಿಷಯಗಳ ಈ ಗರಿಯನ್ನು ಸಮರ್ಪಕವಾಗಿ, ಓರಣವಾಗಿ ಜೋಡಿಸುವುದರ ಜೊತೆಗೆ ನೋವು, ಸಂಕಟ ಮೊದಲಾದವುಗಳನ್ನು ತೆರೆದಿಟ್ಟಿದ್ದಾರೆ. ನಾವು ಸಾರ್ವಜನಿಕರಿಗೆ ಉಪಕಾರಿಯಾಗಬೇಕು ಎನ್ನುವುದನ್ನು ನೆರಳಾಗಿ, ಆಸರೆಯಾಗಿ, ರೋಗಕ್ಕೆ ಮದ್ದರೆಯುವ ರಸವಾಗಿ, ಊರುಗೋಲಾಗಿ ತೊಟ್ಟಿಲಾಗಿ, ಕಟ್ಟಿಗೆಯಾಗಿ, ಮಕ್ಕಳ ಜೋಕಾಲಿ ಜೀಕಿಗೆ ಆಸರೆಯಾಗಬೇಕು ಎನ್ನುವುದನ್ನು ‘ಬಯಕೆ’ ಮೂಲಕ ಚಿತ್ರಿಸಿದ್ದಾರೆ. ಸ್ವಂತಿಕೆ ಮತ್ತು ಸ್ವಾವಲಂಬನೆ ಇದ್ದರೆ ಮಾತ್ರ ಎಂತಹ ಸಮರವನ್ನಾದರೂ ಎದೆಯೊಡ್ಡಿ ಗೆಲ್ಲಬಹುದು ಎನ್ನುವುದನ್ನು ಮಳೆ-ಗಾಳಿಯೊಡನೆ ಸಮರ ಸಾರಿ ಗೆಲ್ಲುವ ಹಕ್ಕಿ (ಹಕ್ಕಿ ಮತ್ತು ನಾನು ಕವನ) ಯ ಮೂಲಕ ಚಿತ್ರಿಸಿದ್ದಾರೆ.
ಕಹಿ ನೆನಪುಗಳು ಹೇಗೆ ಮತ್ತೆ ಮತ್ತೆ ಎದುರಾಗಿ ಮನದ ಶಾಂತಿಯನ್ನು ಕದಡುತ್ತವೆ ಎನ್ನುವುದನ್ನು ‘ಪೀಡೆ’ಯಲ್ಲಿ ತೋರಿಸಿದರೆ, ‘ಪ್ರಜ್ಞಾವಂತರಿಗೊಂದು ಪ್ರಶ್ನೆ’ಯಲ್ಲಿ ಅನ್ಯಾಯ, ಅಸೂಯೆ, ಸ್ವಾರ್ಥಲಾಲಸೆಗಳನ್ನು ಇಟ್ಟುಕೊಂಡು ಮುಖವಾಡ ಧರಿಸಿ ಪ್ರಜ್ಞಾವಂತನೆಂದು ಕರೆಸಿಕೊಳ್ಳಬಾರದು. ಮಾನವತೆಯಿಂದ ಬದುಕುವುದು ಮುಖ್ಯ ಎಂಬ ಸಂದೇಶವನ್ನು ಸಾರುತ್ತಾರೆ. ‘ಮತ್ಸರ’ ಎನ್ನುವುದು ಸತ್ತರೆ ನಮಗೆ ಕ್ಷೇಮ. ನಮಗಷ್ಟೇ ಅಲ್ಲ, ಎಲ್ಲರಿಗೂ ಆರಾಮ. ದೇಶ -ದೇಶಗಳ ನಡುವೆ ದ್ವೇಷ- ದಳ್ಳುರಿಯ ಹೊತ್ತಿಸುತ ಮಾನವೀಯತೆಯ ಹೊಸಕಿ ಹಾಕಿ ರಾಕ್ಷಸೀ ಕೃತ್ಯ ಕೆಲಸ ಮಾಡುತ್ತಿದೆ. ಮತ್ಸರ ಇಡೀ ಸಮಾಜವನ್ನು ಹೇಗೆ ಗುಡಿಸಿ, ಸಾರಿಸುತ್ತಿದೆ ಎನ್ನುವುದನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.
‘ಬಾಳ ದಾರಿ’ ಕವನದಲ್ಲಿ ನೀ ನಡೆಯಬೇಕು ಎಚ್ಚರದಿ/ ನಾ ಹರಸಬೇಕು ಸ್ವಚ್ಛ ಮನದಿ/ಅರ್ಥದ ಹುಡುಕಾಟದಲ್ಲೇ/ ಮೈಮರೆಯಲಾಗದು/ಎಚ್ಚರದಿಂದ ನಾವು ನಡೆಯಬೇಕು/ ಬಾಳಿನರ್ಥವ ಹುಡುಕಿ ಹೋಗಬೇಕೆನ್ನುತ್ತಾರೆ. ಪಕ್ಷಿಗಳು, ಇರುವೆಗಳು, ಪ್ರಾಣಿಗಳು ನಮಗೆ ಮಾದರಿ ಎನ್ನುವುದನ್ನು ಸುಂದರ ಹೋಲಿಕೆ ಮೂಲಕ ‘ಮಾದರಿ’ಯಾಗಿ ತೋರಿಸಿಕೊಟ್ಟಿದ್ದಾರೆ. ಸ್ವಾಭಿಮಾನ, ಸ್ವಾವಲಂಬನೆ, ಸ್ವಾತಂತ್ರ್ಯಕ್ಕೆ ಹಕ್ಕಿಗಳು ಮಾದರಿ. ಹಂಚಿ ತಿನ್ನಬೇಕೆಂಬ ಸಂತೃಪ್ತ ಬಾಳ್ವೆಗೆ ಕಾಗೆಗಳು ಮಾದರಿ. ಶಿಸ್ತು ಮತ್ತು ದೂರಲೋಚನೆಯ ಠೇವಣಿಗೆ ಇರುವೆಗಳು ಮಾದರಿ. ಪರಹಿತಕ್ಕೆ ಬದುಕುವ ಸಾರ್ಥಕತೆಗೆ ಗಿಡಮರಗಳು ಮಾದರಿ ಎನ್ನುತ್ತ- ಮನುಷ್ಯ ಕೂಡ ಇದೇ ಮಾದರಿಯ ಜೀವನವನ್ನು ನಡೆಸಬೇಕೆಂದು ಅಪೇಕ್ಷಿಸುತ್ತಾರೆ.
ಪ್ರಕೃತಿ ಎಂಬ ಮಾತೆಯನ್ನು ನಾವು ಎಷ್ಟು ಮಲಿನಗೊಳಿಸುತ್ತಿದ್ದೇವೆ, ಅವಳ ಉಸಿರು ಕಟ್ಟಿಸುತ್ತಿದ್ದೇವೆ ಎನ್ನುವುದನ್ನು ವಿವರಿಸುತ್ತ, ನನ್ನೊಮ್ಮೆ ಕ್ಷಮಿಸಿಬಿಡು/ ಮುನಿಯಬೇಡಮ್ಮ ಎಂದು ಪ್ರಾರ್ಥಿಸುತ್ತಾರೆ. ‘ಇಲ್ಲಗಳ ನಡುವೆ’ ಕವನ ಹೆಚ್ಚು ಗಮನ ಸೆಳೆಯುವಂಥಾದ್ದು. ಸಮಾಜದಿಂದ ಪರಿತ್ಯಕ್ತರಾದ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ತ್ರಿಲಿಂಗಿಗಳ ಕುರಿತಾಗಿ ಸೊಗಸಾದ ವರ್ಣನೆಯನ್ನು ಮತ್ತು ಅವರ ಸಂಕಟವನ್ನು ಹೆಣೆದಿದ್ದಾರೆ. ಅವರು ಇದ್ದೂ ಇಲ್ಲದಂತಾಗಿದ್ದಾರೆ, ಬಾಡಿಗೆ ಮನೆಯೂ ಸಿಗದೆ, ರಸ್ತೆಬದಿಯ ಬೀದಿ ಕಾಮಣ್ಣರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಭಿಕ್ಷೆ ಬೇಡಿ ದಿನಗಳೆಯುವಂತಾಗಿದೆ. ಪ್ರೀತಿ, ಅಕ್ಕರೆ ಇಲ್ಲ. ಅವಮಾನ, ದೌರ್ಜನ್ಯ ಕಿರುಕುಳವ ಸಹಿಸಿ ಜೀವ ಸವೆಸಬೇಕಾಗಿದೆ. ನಾವೂ ನಿಮ್ಮಂತೆ/ ಮನುಷ್ಯರೆಂದು ನೋಡುವವರಿಲ್ಲ/ಮಲ-ಮೂತ್ರ, ವಿಸರ್ಜಿಸಲೂ ಜಾಗವಿಲ್ಲ/ ಮಂಗಳಮುಖಿಯಾಗಿ ಹುಟ್ಟಿದ್ದು ನಮ್ಮ ತಪ್ಪೇ?/ ಎಂದು ನೋವನ್ನು ತೋಡಿಕೊಳ್ಳುವ ರೀತಿ ಹೃದಯವನ್ನು ಹಿಂಡುವಂತಿದೆ.
ಉಳಿದಂತೆ ಪರಿಸರ ಪ್ರಜ್ಞೆಯನ್ನು ಬಿತ್ತುವ, ಬಾಲ್ಯದಾಟವನ್ನು ನೆನಪಿಸುವ, ಹಿರಿಯರನ್ನು ಕಿರಿಯರು ದೂರಮಾಡುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿರುವುದನ್ನು, ಮೊಬೈಲ್ ಗೆ ಜೋತುಬಿದ್ದು ನಮ್ಮ ಸಂಸ್ಕೃತಿ ಮರೆತು, ಕ್ರಿಯಾಶೀಲ ಚಿಂತನೆಗಳನ್ನು ಮೂಲೆಗೊತ್ತಿ ಯಾಂತ್ರಿಕತೆಗೆ ಮಾರು ಹೋಗುತ್ತಿರುವುದನ್ನು, ಮನದ ಕೊಳೆ ತೊಳೆಯಬೇಕೆಂಬ ನೀತಿ ಸಾರುವ ‘ಮೊಬೈಲ್ ಸ್ನಾನ’ ಅತ್ಯುತ್ತಮ ಸಂದೇಶಗಳನ್ನು ನೀಡುವ ಕವಿತೆಗಳಾಗಿವೆ.
ಒಂದೇ ಮಾತಿನಲ್ಲಿ ಹೇಳುವುದಾದರೆ, ಬದುಕಿನ ಸವಾಲು ಮತ್ತು ಸಂಕಟಗಳನ್ನು ಎದುರಿಸುವ ಧೈರ್ಯ ಬೆಳಸಿಕೊಳ್ಳಬೇಕು. ಶೋಷಣೆ, ಅಸಮಾನತೆ, ಉಪೇಕ್ಷೆಗಳ ವಿರುದ್ಧ ಧ್ವನಿ ಎತ್ತಬೇಕು. ಸಮಾಜದಲ್ಲಿ ಉಪಕಾರಿಯಾಗಿ ಬದುಕಬೇಕೆನ್ನುವ ಸಂದೇಶಗಳನ್ನು ಈ ಕವನ ಸಂಕಲನ ಸಾರಿ ಹೇಳುತ್ತದೆ.
Published by DATTATREYA M HEGDE on 17-03.2025

Comments
Post a Comment