ಸಂವೇದನೆ ತುಂಬಬಲ್ಲ
’ಪುಟ್ಟಿ ಮತ್ತು ಪಾಪು’
‘ಪುಟ್ಟಿ ಮತ್ತು ಪಾಪು’ ಇದು ಮಕ್ಕಳ ಕವನ ಸಂಕಲನ. ನಿಸರ್ಗ, ಬದುಕು, ಮಳೆ, ಬೆಳೆ, ಪ್ರಾಣಿ, ಅಪ್ಪ, ಅಮ್ಮ ಮೊದಲಾದವುಗಳ ಚಿತ್ರಣವನ್ನು ಮಗುವಿನ ದೃಷ್ಟಿಯಿಂದ ಕಂಡು ತೆರೆದಿಡುವ ಕೃತಿ ಇದಾಗಿದೆ. ಈ ಮೂಲಕ ಮಕ್ಕಳಲ್ಲಿ ಆದರ್ಶವನ್ನು ಬಿತ್ತುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಈ ಕೃತಿಯನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಎಂಜಿಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರ್ ಪಿ ಹೆಗಡೆ ಅವರು ರಚಿಸಿದ್ದಾರೆ.
ಮನಸ್ಸಿಗೆ ಸಂವೇದನೆಯನ್ನು ತುಂಬಬಲ್ಲ ಈ ಕೃತಿಯಲ್ಲಿ ಮುಂದಿನ ತಲೆಮಾರು (ಮಕ್ಕಳು) ಉದಾತ್ತವಾಗಿ ರೂಪುಗೊಳ್ಳಲು ಅವರಿಗೆ ಪ್ರಿಯವಾದ ಕವನಗಳನ್ನು ರಚಿಸಿದ್ದಾರೆ. ಉಪಯುಕ್ತವಾದ ಆಲೋಚನೆಗಳು ವಿಕಸಿತಗೊಳ್ಳಬೇಕು, ಅವರ ಚಿಂತನಾ ಕ್ರಮಕ್ಕೆ ಭದ್ರಬುನಾದಿ ಬೀಳಬೇಕು, ಪ್ರಕೃತಿ- ವಿಸ್ಮಯಗಳನ್ನು ಕಂಡು ಬೆರಗುಗೊಳ್ಳುವ ಕುತೂಹಲಕಾರಿ ಪ್ರಶ್ನೆಗಳು ಕುಡಿ ಒಡೆಯುವ ಸಂಬಂಧ ಅದಕ್ಕೆ ಆಹಾರ ಒದಗಿಸುವ ನಿಟ್ಟಿನಲ್ಲಿ ಅವರಲ್ಲಿ ವಿಚಾರ ಶಕ್ತಿ ಅರಳಿಸುವ ಜಿಜ್ಞಾಸೆಯನ್ನು ತಣಿಸುವ ಒಂದು ಆದರ್ಶ ಅಥವಾ ಮಾದರಿಯ ಕನಸನ್ನು ಕಟ್ಟಿಕೊಳ್ಳುವುದಕ್ಕೆ ಪ್ರೇರಣಾದಾಯಕವಾಗಿರುವ ಕವನಗಳನ್ನು ಇಲ್ಲಿ ರಚಿಸಿದ್ದಾರೆ. ಜಾಣತನದ ಜೊತೆಗೆ ಸದ್ಗುಣ, ಸಚ್ಚಾರಿತ್ರ್ಯ ಬೆಳೆಯುವ ರೀತಿಯಲ್ಲಿ ಮಕ್ಕಳ ಮನಸ್ಸನ್ನು ವಿಕಸಿತಗೊಳಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಇಲ್ಲಿನ ಕವಿತೆಗಳು ಹುಟ್ಟಿಕೊಂಡಿವೆ. ಈ ಕೃತಿಯಲ್ಲಿನ ಸಾಹಿತ್ಯವು ತೀರಾ ಸರಳವಾಗಿದೆ. ಒತ್ತಕ್ಷರಗಳು ತುಂಬಾ ಕಡಿಮೆ. ದ್ವಿರುಕ್ತಿ ಶಬ್ದಗಳು ಹೆಚ್ಚು ಬಳಕೆಯಾಗಿವೆ. ಪ್ರಾಸಬದ್ಧ ಸಾಲುಗಳು ಸಾಕಷ್ಟಿವೆ. ಒಟ್ಟಿನಲ್ಲಿ, ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಇಲ್ಲಿ ಕವನಗಳನ್ನು ಸುಂದರವಾಗಿ ಹೆಣೆಯಲಾಗಿದೆ.
ಈ ಕೃತಿಯಲ್ಲಿ ೩೧ ಚಿಕ್ಕ ಚಿಕ್ಕ ಕವನಗಳಿವೆ. ಅವೆಲ್ಲವೂ ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುವ ಮತ್ತು ಮನಸ್ಸನ್ನು ಆಕರ್ಷಿಸುವ ವಿಷಯಗಳ ಕುರಿತಾಗಿವೆ. ಕೋಗಿಲೆ, ಪ್ರಾಣಿ, ಪಕ್ಷಿ, ಹಸು-ಕರು, ಶಾಲೆ, ರಜೆ, ರೈಲು, ಗಿಡ-ಮರ, ಮೋಡ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ಕವನಗಳು ರಚಿತವಾಗಿವೆ ಸಂಕಲನದಲ್ಲಿನ ‘ಪುಟ್ಟ ಪುಟ್ಟ ಮಕ್ಕಳು’ ಎಂಬ ಕವನದಲ್ಲಿ ಪುಟ್ಟ ಪುಟ್ಟ ಮಕ್ಕಳು/ ನಾವು ಪುಟ್ಟ ಮಕ್ಕಳು/ ಈ ರೀತಿ ಒಂದೇ ಶಬ್ದಗಳು ಹಲವು ಬಾರಿ ಬಳಕೆಯಾಗಿ ಅತಿ ಸುಲಭದಲ್ಲಿ ಅರ್ಥವಾಗುವಂತೆ ಇವೆ. ಇವು ಮಕ್ಕಳಿಗೆ ಅತಿ ಬೇಗ ಹತ್ತಿರವಾಗುತ್ತದೆ ಇನ್ನೊಂದು ಕವನ ‘ಉತ್ತರ ಹೇಳಮ್ಮ’ ಎಂಬಲ್ಲಿ ಅಮ್ಮನನ್ನು ಮಗು ಪ್ರಶ್ನಿಸುವ ಪ್ರೀತಿ ಇದೆ. ಅಮ್ಮ ಅಮ್ಮ, ಸುಮ್ಮನೆ ಯಾಕೆ/ ಕುಳಿತಿಹೆ ಹೇಳಮ್ಮ / ನನ್ನನ್ನು ಕಾಡುವ ಪ್ರಶ್ನೆಗೆ ನೀನು/ ಉತ್ತರ ಹೇಳಮ್ಮ! ಇದರಲ್ಲಿ ಮಗು ತನಗೆ ಎದುರಾಗುವ ಪರಿಸರ ಹೂವು, ಬಣ್ಣ, ಮತ್ತು ಪ್ರಾಣಿ, ಪಕ್ಷಿಯ ಕುರಿತಾದ ವಿವಿಧ ಪ್ರಶ್ನೆಗಳನ್ನು ಅತ್ಯಂತ ಸರಳವಾಗಿ ಕೇಳುತ್ತಾಳೆ. ಗುಲಾಬಿಗೆ ಪರಿಮಳ ಇಟ್ಟವರಾರು, ಮಲ್ಲಿಗೆಗೆ ಬಿಳಿಯ ಬಣ್ಣ ಕೊಟ್ಟವರಾರು. ಮೋಡದಿಂದ ನೀರಿನ ಧಾರೆ ಸುರಿಯುವುದು ಹೇಗೆ, ಕೋಗಿಲೆಗೆ ಇಂಪಾದ ಕಂಠ ಬಂದಿದ್ದು ಹೇಗೆ ಎಂದು ಪ್ರಶ್ನಿಸುತ್ತದೆ. ಮಗುವಿಗೆ ಅಷ್ಟೇ ಸುಲಭದಲ್ಲಿ ಅರ್ಥವಾಗುವಂತೆ, ಅದೇ ಮಾದರಿಯಲ್ಲಿ ತಾಯಿ ಕೊಡುವ ಉತ್ತರವೇನೆಂದರೆ- ನೀನಿನ್ನು ಮಗು/
ನಿನಗೀಗ ಬೆರಗು/ ಓದುತ ಕಲಿಯುತ ದೊಡ್ಡವನಾದರೆ/ ತಿಳಿವುದ ಜಗದ ಸೊಬಗು ಎಂದು ಹೇಳುತ್ತಾಳೆ. ‘ಪುಟ್ಟಿಯ ದಿನಚರಿ’ ಎಂಬ ಕವನದಲ್ಲಿ ಅಜ್ಜಿಯ ಜೊತೆ ಆಟವಾಡುವುದು, ಮನೆಯಲ್ಲಿ ಸಿಕ್ಕ ವಸ್ತುಗಳನ್ನು ಎಸೆಯುವುದು, ಎದ್ದು -ಬಿದ್ದು ಓಡಾಡುವುದು, ಅಜ್ಜ -ಅಮ್ಮನನ್ನು ಪ್ರೀತಿಸುವುದು ಮೂಡಿಬಂದಿದೆ . ‘ಪುಟ್ಟಿ ಮತ್ತು ಪಾಪು’ (ಈ ಕೃತಿಯ ಹೆಸರೂ ಹೌದು) ಈ ಕವನದಲ್ಲಿ ಪುಟ್ಟಿಯು ತನಗೆ ಬೊಂಬೆ ತಂದು ಕೊಡು ಎಂದು ಪಾಲಕರನ್ನು ಕೇಳುವುದು, ಅದರ ಜೊತೆ ಸದಾ ಆಡುವುದು, ಅದನ್ನು ಅಪ್ಪಿಕೊಂಡು ಮಲಗುವುದು, ಬೇರೆಯವರು ಅದನ್ನು ಎತ್ತಿಕೊಳ್ಳಲು ಬಂದರೆ ಕೊಡಲಾರೆ ಎಂದು ಕಿರುಚುವುದು ಮೊದಲಾದವುಗಳನ್ನು ಸುಂದರವಾಗಿ ನಿರೂಪಿಸಿದ್ದಾರೆ.
ಮೊಲದ ಜಾಣತನ, ವಿಚಿತ್ರ ವಿಸ್ಮಯ, ನಾನೂ ಶಾಲೆಗೆ ಹೋಗುವೆನು, ನಮ್ಮ ಮನೆಯ ಹಸು, ರೈಲು ಮೊದಲಾದ ಕವನಗಳು ಸಹ ಮಕ್ಕಳ ವಿವಿಧ ಪ್ರಶ್ನೆಗಳಿಗೆ, ಅವರ ಮನದಲ್ಲಿ ಮೂಡುವ ವಿಚಾರಗಳಿಗೆ ಸಾಕ್ಷಿಯಾಗಿವೆ.
ಇಂತಹ ಕವಿತೆಗಳು ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗುತ್ತದೆ. ಇಲ್ಲಿ ಕವಿಯ ನಿರೂಪಣಾ ಶೈಲಿಯು ಅತ್ಯಂತ ಸೊಗಸಾಗಿದೆ ಮಕ್ಕಳ ಹೃದಯಕ್ಕೆ ತಟ್ಟುವ ರೀತಿಯಲ್ಲಿ ಕವಿತೆಯನ್ನು ರಚಿಸಿದ್ದಾರೆ. ಇಲ್ಲಿನ ಕವಿತೆಯ ವಸ್ತುಗಳು ಮಕ್ಕಳನ್ನು ರಂಜಿಸುತ್ತವೆ. ಇವುಗಳ ನೀತಿಯೂ ಸಹ ಅತ್ಯಂತ ಸುಲಭವಾಗಿ ಅರ್ಥವಾಗುತ್ತದೆ. ಇಲ್ಲಿ ನೀತಿಗಿಂತ ವರ್ಣನೆ ಅತಿ ಮುಖ್ಯವಾಗಿ ಕಾಣಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚನೆ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಚಿಂತನೆ ಬೆಳೆಸಲು ಚಿಕ್ಕಂದಿನಿಂದಲೇ ನಾಂದಿ ಹಾಡಬೇಕು. ಇದರಿಂದ ಅವರಲ್ಲಿ ಸಾಹಿತ್ಯ ಆಸಕ್ತಿಯನ್ನು ಅಥವಾ ಓದಿನ ಕೇಳುವಿಕೆಯ ಭಾವನೆ ಬಲಿಯುವಂತೆ ಮಾಡಬಹುದು. ಅವರ ಬುದ್ಧಿಶಕ್ತಿಯನ್ನು ಬೆಳೆಸಲು, ಪ್ರತಿಭೆಯನ್ನು ಅರಳಿಸಲು ಇಂತಹ ಶಿಕ್ಷಣವನ್ನು ಕೊಡಬೇಕು. ಆದರ್ಶ, ಮೌಲ್ಯ ಎಂದರೇನು ಎಂದು ಗೊತ್ತಿಲ್ಲದ ಮಕ್ಕಳನ್ನು ಅನುಕರಣಶೀಲವಾಗಿ ಕವನದ ಮೂಲಕ ಜಗತ್ತನ್ನು ಮತ್ತು ಜನರನ್ನು ತೋರಿಸುವ ಕೆಲಸ ನಡೆಯಬೇಕಿದೆ. ಮಕ್ಕಳಿಗೆ ಬೇಗ ಆಸಕ್ತಿ ಮೂಡಿಸುವ ಪ್ರಾಸಗಳು, ವಿಸ್ಮಯಗಳು ಹೆಚ್ಚು ಬರಬೇಕಿದೆ. ಈ ನಿಟ್ಟಿನಲ್ಲಿ ‘ಪುಟ್ಟಿ ಮತ್ತು ಪಾಪು’ ಅತ್ಯಂತ ಉತ್ತಮ ಮಕ್ಕಳ ಕವನ ಸಂಕಲನವಾಗಿ ಹೊರಹೊಮ್ಮಿದೆ.
ನಮ್ಮಲ್ಲಿ ಮಕ್ಕಳ ಸಾಹಿತ್ಯದ ಕುರಿತಾಗಿ ಇರುವ ಅವಜ್ಞೆ, ನಿರ್ಲಕ್ಷ್ಯ ಕಡಿಮೆಯಾಗಬೇಕು. ಅವರ ಬುದ್ಧಿಶಕ್ತಿ, ಪ್ರತಿಭೆ ಅರಳಿಸುವ ಶಿಕ್ಷಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಮ್ಮ ಯೋಚನೆ, ಪ್ರಯತ್ನ ಸಾಗಬೇಕು. ಬದುಕನ್ನು ಕಟ್ಟಿಕೊಳ್ಳಲು ನೆರವಾಗುವಂತಹ ಶಿಕ್ಷಣ ಕೊಡಿಸುವುದರ ಜೊತೆಗೆ ಸಾಹಿತ್ಯವನ್ನು ಮಕ್ಕಳಿಗೆ ಓದಲು ಕೊಡಬೇಕು, ಓದಿಸಬೇಕು, ಓದಿಹೇಳಬೇಕು. ಇದರಿಂದ ಅವರಲ್ಲಿ ಆದರ್ಶ, ಮೌಲ್ಯ ಬಿತ್ತಬಹುದು.
Published by Dattarey Hegde on MArch 27,2025
,,,,,,,,,,,,,,,,,,,,,

Comments
Post a Comment