ಮೌಲ್ಯಗಳ ದರ್ಶನ ಮಾಡಿಸುವ
‘ಮಕ್ಕಳ ಕಥಾಲೋಕ’


 ‘ಮಕ್ಕಳ ಕಥಾಲೋಕ’ ಮತ್ತೂರು ಸುಬ್ಬಣ್ಣ ಅವರು ರಚಿಸಿದ ಕೃತಿಯಿದು.  ಇವರು ಶಿವಮೊಗ್ಗ  ಸಮೀಪದ ಮತ್ತೂರಿನವರು.  ಬಾಲಸುಬ್ರಹ್ಮಣ್ಯ ಎನ್ನುವ ಹೆಸರಿನ ‘ಮತ್ತೂರು ಸುಬ್ಬಣ್ಣ’ ಮಕ್ಕಳ ಕಥೆ ಹೇಳುವುದರಲ್ಲಿ ಮತ್ತು ಬರೆಯುವುದರಲ್ಲಿ ನಿಸ್ಸೀಮರು. ನಾಲ್ಕು ದಶಕಗಳ ಕಾಲ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕ, ಮುಖ್ಯಶಿಕ್ಷಕ  ವೃತ್ತಿಯಲ್ಲಿ ಕೆಲಸ ಮಾಡಿದವರು. ಮಕ್ಕಳಿಗೆ ಸಾವಿರಾರು ಕತೆ, ಕವನ ಬರೆದು ಪ್ರಕಟಿಸಿದ್ದಾರೆ. ಹಲವಾರು ರಾಜ್ಯ ಪ್ರಶಸ್ತಿಗಳು ಇವರ ಕಥಾಸಂಕಲನಕ್ಕೆ ಸಂದಿವೆ. 

‘ಮಕ್ಕಳ ಕಥಾಲೋಕ’ ದಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ, ಆಸಕ್ತಿಯನ್ನು ಕೆರಳಿಸುವ, ಪ್ರತಿಭೆಯ ಸಾಧ್ಯತೆಗಳ ಆಳವಾದ ಅರಿವಿದೆ. ಅರಳಿಸುವ, ಪ್ರೇರೇಪಿಸುವ ಕಲೆ ಲೇಖಕರಿಗೆ ತಿಳಿದಿದೆ. ಈ ಕೃತಿಯಲ್ಲಿ ಮಕ್ಕಳಲ್ಲಿ ಆಧುನಿಕತೆಯನ್ನು ತರುವ ವಿಶೇಷ ಪ್ರಯತ್ನ ಮಾಡಿದ್ದಾರೆ. ಇವು ಇಂದಿನ ಮಕ್ಕಳಿಗೆ ವಿಶೇಷವಾಗಿ ರುಚಿಸುತ್ತವೆ. ಮಕ್ಕಳಲ್ಲಿರುವ ಆದರ್ಶ ಪ್ರೇಮ, ಆದರ್ಶ ವೈಭವ, ಸುಲಭ ಪರಿಹಾರಗಳಲ್ಲಿ ನಂಬಿಕೆ, ಇವು ಅವರ ಎಲ್ಲಾ ಕಥೆಗಳಲ್ಲಿಯೂ ಎದ್ದು ಕಾಣುತ್ತವೆ. ಮಕ್ಕಳಲ್ಲಿ ಈ ಗುಣಗಳನ್ನು ಉದ್ದೀಪಿಸಿ ಪೋಷಿಸಲು ಇಲ್ಲಿ ಕಥಾಕಾರ ಸುಬ್ಬಣ್ಣನವರು ಸರಳ, ಸುಲಭ ಹರವಿನ ಭಾಷೆಯನ್ನು ಬಳಸಿರುವುದನ್ನು ಕಾಣಬಹುದು.

 ಮಕ್ಕಳ ಕಥಾಲೋಕದ ಈ ಸಂಕಲನದಲ್ಲಿ ಒಟ್ಟು ೩೦ ಕಥೆಗಳಿವೆ ಪ್ರತೀ ಕತೆಯು ನೀತಿಯುಕ್ತವಾಗಿದೆ. ಚಿಕ್ಕ ಕತೆಗಳಾದರೂ ಪುಸ್ತಕ ಹಿಡಿದರೆ ಎಲ್ಲವನ್ನೂ ಒಮ್ಮೆಲೆ ಓದಿಬಿಡುವಷ್ಟ್ಟು ಆಕರ್ಷಣೆ ಇದೆ.

‘ಬಿಡುಗಡೆ’ ಎಂಬ ಕತೆಯಲ್ಲಿ ಶಾಲೆಗೆ ಬಾರದೆ ವಿದ್ಯಾರ್ಥಿ ಪಟಾಕಿ ಕಾರ್ಖಾನೆಗೆ ಕೆಲಸಕ್ಕೆ ಹೋಗುವುದು, ಕಾರ್ಖಾನೆಯಲ್ಲಿ ಇವನಂತೆ ಹತ್ತಾರು ಬಾಲಕರು ದುಡಿಯುವುದು, ಸ್ಫೋಟವಾಗಿ ಕೆಲವು ಮಕ್ಕಳು ಸತ್ತು ಹೋಗುವುದನ್ನು ವಿವರಿಸುತ್ತಾ  ಈ ಮಕ್ಕಳು ಶಾಲೆಗೆ ಹೋಗಿದ್ದರೆ ಏನೂ ಆಗುತ್ತಿರಲಿಲ್ಲ. ಶಾಲೆಗೆ ಹೋಗುವ ಮಕ್ಕಳ ಕೈಯಲ್ಲಿ ಅರ್ಥಾತ್ ಬಾಲಕಾರ್ಮಿಕ ಕೆಲಸವನ್ನು ಮಾಡಿಸಬಾರದು, ಶಿಕ್ಷಣ ಮಕ್ಕಳಿಗೆ ಅಗತ್ಯ ಎನ್ನುವ ಎರಡು ಪ್ರಮುಖ ವಿಷಯವನ್ನು ಹೇಳುತ್ತಾರೆ.

 ‘ಮೊಸಳೆ ಬಂತು ಮೊಸಳೆ’ ಎಂಬ ಕತೆಯಲ್ಲಿ ತುಂಗಾ ನದಿಗೆ ಮೊಸಳೆ ಬಂದು ಸೇರಿಕೊಂಡಿರುವುದು  ಊರಿನಲ್ಲಿ ಸುದ್ದಿಯಾಗುತ್ತದೆ. ಮೊಸಳೆಯನ್ನು

ಕೊಲ್ಲಿಸಲು ತೀರ್ಥಹಳ್ಳಿಯಿಂದ ಗುರಿಗಾರನನ್ನು ಕರೆಯಿಸಲಾಗುತ್ತಿದೆ ಎಂಬ ಸುದ್ದಿ ಮಕ್ಕಳಲ್ಲಿ ಕೇಳಿಬರುತ್ತದೆ. ಆಗ  ಮೊಸಳೆಯನ್ನು ಹೇಗಾದರೂ ಕಾಪಾಡಲು ನಿರ್ಧರಿಸುವ ಮಕ್ಕಳು  ರಾತ್ರಿ ನದಿಗೆ ತೆರಳಿ ಮೊಸಳೆಯನ್ನು ಪತ್ತೆ ಮಾಡಿ ಅದಕ್ಕೆ ೨-೩ ದಿನ ಆಹಾರ ಕೊಟ್ಟು ರಾತ್ರಿ ಹೊರಬಾರದಂತೆ ಮಾಡುತ್ತಾರೆ. ಈ ಮೂಲಕ ಜೀವವನ್ನು ಉಳಿಸುವ ಕೆಲಸವನ್ನು ಮಕ್ಕಳು ಮಾಡುತ್ತಾರೆ. ಇಲ್ಲಿ ಮಕ್ಕಳ ಪ್ರ್ರಾಣಿ ಪ್ರೀತಿ, ಹಸಿದ ಪ್ರಾಣಿಗೆ ಆಹಾರ ಕೊಡುವ ಕಾಳಜಿ, ಮನಸ್ಸು ಗಮನಿಸಬಹುದು.

‘ಗ್ರಾಜುಯೇಟ್ ಗುಂಡಣ’ ಎಂಬ ಕತೆ ತುಂಬಾ ಸುಂದರವಾಗಿದೆ. ಎಷ್ಟು  ಪ್ರಯತ್ನಿಸಿದರೂ ಬಿ ಎ ಓದಿದ  ಗುಂಡಣ್ಣನಿಗೆ ಎಲ್ಲೂ ಕೆಲಸ ಸಿಕ್ಕುವುದಿಲ್ಲ್ಲ. ನಂತರ ಊರಿಗೆ ಬಂದ ಸರ್ಕಸ್ ಕಂಪನಿಗೆ ಅರ್ಜಿ ಹಾಕಿ ಕೆಲಸ ಪಡೆಯುತ್ತಾನೆ. ಆದರೆ ಅದು ವಿಚಿತ್ರ ಕೆಲಸ. ಪ್ರಾಣಿಯ ವೇಷ ಧರಿಸಿ ಜನರನ್ನು ಸರ್ಕಸ್‌ನಲ್ಲಿ ರಂಜಿಸುವುದು ಮತ್ತು ಅಲ್ಲಿಯೇ ವಾಸಿಸುವ ಮೂಲಕ ಗುಟ್ಟನ್ನು ಕಾಪಾಡುವುದು. ಗುಂಡಣ್ಣನಂತೆ ವಿವಿಧ ಡಿಗ್ರಿ, ಮಾಸ್ಟರ್ ಡಿಗ್ರಿ  ಮಾಡಿದವರೆಲ್ಲರಿಗೂ ಇದೇ ಕೆಲಸ. ನಿರುದ್ಯೋಗ ಸಮಸ್ಯೆಯನ್ನು ಒಂದೆಡೆ ಬಿಚ್ಚಿಡುವ ಕತೆ, ಹೊಟ್ಟೆಪಾಡು ಎಂತಹ ಕೆಲಸವನ್ನಾದರೂ ಮಾಡಿಸುತ್ತದೆ ಎನ್ನುವುದನ್ನು ಸಾರುತ್ತಾರೆ.

  ಅದೇ ರೀತಿ ನಿಸರ್ಗ ಪ್ರೀತಿಸಿ ಎಚ್ಚರಿಸುವ ‘ಪುಟ್ಟಿ ಎಂಬ ಒನ್ ಮ್ಯಾನ್ ಆರ್ಮಿ’, ‘ಭಾಗ್ಯವ್ವಳ ಅಳಲು’ ಕಥೆಗಳು ಮನಕಲಕದೆ ಇರಲಾರವು. ಮಾಲಕರ ಪ್ರೀತಿಯನ್ನು ಬಿಂಬಿಸುವ ಅತ್ಯುತ್ತಮ ಕಥೆಯಾಗಿ ‘ಕರಿಯನ ಟಾಮಿ’ ಮೂಡಿ ಬಂದಿದೆ. ಇಲ್ಲಿನ ಕತೆಗಳೆಲ್ಲ ಅದ್ಭುತ ನೀತಿಯ ಕತೆಗಳ ಸಾಗರ ಇದು ಎಂದರೆ ತಪ್ಪಾಗಲಾರದು. ಪಾರಿವಾಳಗಳ ಸಾಹಸ, ಉಡುಗೊರೆ, ರೈತನ ಸಾಲ, ಕೃಷ್ಣೇಗೌಡನ ಅಪ್ಪಯ್ಯನ ಭೂತದ ಕಥೆ, ಜೀವ ಬಂದಿತು, ನಾನೂ ಕಲಿಸಿದೆ, ಹೀಗೊಂದು ಜನ್ಮದಿನೋತ್ಸವ, ಕಾಣೆಯಾದ ಅರ್ಜುನ್ ಮೊದಲಾದ ಕಥೆಗಳು ತುಂಬಾ ಇಷ್ಟವಾಗುತ್ತವೆ.

 ಒಟ್ಟಿನಲ್ಲಿ ಮಕ್ಕಳಿಗೆ ತುಂಬಾ ಸುಲಭವಾಗಿ ಅರ್ಥವಾಗುವ, ಸರಳ- ಸುಲಭ ಭಾಷೆಯಲ್ಲಿ ಮಕ್ಕಳ ಮನದ ಕದ ತಟ್ಟುವ ರೀತಿಯಲ್ಲಿ ಇಲ್ಲಿನ ಕಥೆಗಳಿವೆ. ಹಾಗಾಗಿ ಕಥೆಯನ್ನು ಓದಲು ಆರಂಭಿಸಿದಾಗ ಮುಂದೇನಾಗುತ್ತದೆ ಎಂಬ ಕುತೂಹಲ ಎದುರಾಗುತ್ತದೆ. ಇದರಿಂದ ಆಸಕ್ತಿ ಮೂಡುತ್ತದೆ. ಇದು ನಿಜಕ್ಕೂ ಕಥಾಕಾರನ ಜಾಣ್ಮೆಯನ್ನು ಎತ್ತಿಹೇಳುತ್ತದೆ. ಈ ಕಥೆಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಸಾಹಸ ಇದೆ, ಹಿರಿಯರ ಮಾತುಗಳಿಗೆ ಗೌರವ ಕೊಡಬೇಕು ಎಂಬ ಉತ್ತಮ ಸಂದೇಶವಿದೆ, ಮಾನವೀಯ ಗುಣಗಳಿವೆ. ಸುಬ್ಬಣ್ಣನವರ ಈ ಸಣ್ಣ ಕಥೆಗಳ ಒಂದು ವಿಶಿಷ್ಟ ಲಕ್ಷಣ ಎಂದರೆ ಮಕ್ಕಳಲ್ಲಿ ಆಧುನಿಕತೆಯನ್ನು ತರುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಆದ್ದರಿಂದ ಇವು ಹೆಚ್ಚಾಗಿ ಮಕ್ಕಳಿಗೆ ರುಚಿಸುತ್ತವೆ. ಇಲ್ಲಿನ ಕಥೆಗಳಲ್ಲಿ ಮಕ್ಕಳೇ ಕಥೆಯ ನಾಯಕರು.

ಒಟ್ಟಿನಲ್ಲಿ, ಮಕ್ಕಳಿಗೆ ಇಷ್ಟವಾಗುವ ಎಲ್ಲಾ ಅಂಶಗಳು ಈ ಪುಸ್ತಕದಲ್ಲಿವೆ. ಇಂತಹ ಕೃತಿಗಳು ಹೆಚ್ಚು ಪ್ರಕಟವಾಗಿ ಮಕ್ಕಳಿಗೆ ಲಭಿಸಿದಲ್ಲಿ ಮಕ್ಕಳ ಕಥಾಲೋಕಕ್ಕೆ ಇನ್ನಷ್ಟು ಹೆಚ್ಚಿನ ಬಲ ಬರುತ್ತದೆ. ಕೇಳಿದ್ದನ್ನೆಲ್ಲ ಕೊಡಿಸುವ ಪಾಲಕರು ಮಕ್ಕಳಿಗೆ ಇಂತಹ ಕೃತಿಗಳನ್ನು ತಂದುಕೊಟ್ಟಲ್ಲ್ಲಿ ಮಕ್ಕಳಿಗೆ ಆಸಕ್ತಿ ಬೆಳೆಯಲು ಅನುಕೂಲವಾಗುತ್ತದೆ. ಸಾಹಿತ್ಯ ಪೋಷಿಸಿದಂತಾಗುತ್ತದೆ, ಮಕ್ಕಳಲ್ಲೂ ಸಾಹಿತ್ಯಿಕ ಪ್ರಜ್ಞೆ ಪರಿಚಯಿಸಿ, ಬರಹಗಾರರನ್ನಾಗಿ ಮಾಡಲು ನೆರವಾಗುತ್ತದೆ.


Published by dattareya Hegde on March 27,2025

....................................

Comments

Popular posts from this blog