ಬಹುರಾಷ್ಟ್ರೀಯ ಉದ್ಯಮ ಕಟ್ಟಿ ಬೆಳೆಸಿದವರ ಯಶೋಗಾಥೆ
‘ಬ್ರ್ಯಾಂಡ್ ಬಿಲ್ಡರ್ಸ್’
ಕೃತಿಯ ಹೆಸರು- ಬ್ರ್ಯಾಂಡ್ ಬಿಲ್ಡರ್ಸ್
ಪ್ರಕಾರ- ಲೇಖನ
ಲೇಖಕಿ- ದೀಪಾ ಹಿರೇಗುತ್ತಿ
ಪುಟಗಳು-೧೬೪
ಬೆಲೆ- ೧೬೦
ಪ್ರಕಾಶಕರು- ಸಾವಣ್ಣ ಎಂಟರ್ ಪ್ರೈಸಸ್.
ಜಯನಗರ ಮೊದಲ ಬ್ಲಾಕ್, ಪೂರ್ವ, ಬೆಂಗಳೂರು-೧೧
ಬೆವರ ಹನಿಹನಿಗಳಿಂದ ಮೇಲೆದ್ದು ಬಂದು ದೇಶ -ವಿದೇಶಗಳಲ್ಲಷ್ಟೆ ಅಲ್ಲದೆ ಜಗತ್ತಿನಲ್ಲಿಯೇ ಪ್ರಖ್ಯಾತವಾದ ಕಂಪನಿಗಳನ್ನು ಕಟ್ಟಿ ಬೆಳೆಸಿದವರ ಯಶೋಗಾಥೆಯ ಕಥಾಗುಚ್ಛವಿದು. ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಸರ್ಕಾರಿ ಪಿಯು ಕಾಲೇಜ್ ನ ಉಪನ್ಯಾಸಕಿ ಆಗಿರುವ ದೀಪಾ ಹಿರೇಗುತ್ತಿ ಮಾಹಿತಿಗಳನ್ನು ಕಲೆಹಾಕಿ, ಸಾಧಕರ ಯಶೋಗಾಥೆಯನ್ನು ಹೆಣೆದಿದ್ದಾರೆ. ಅದೇ ‘ಬ್ರ್ಯಾಂಡ್ ಬಿಲ್ಡರ್ಸ್’ ಕೃತಿ ವಿಷಯ.
ಬಹುರಾಷ್ಟ್ರೀಯ ಕಂಪನಿಗಳು ಶೂನ್ಯದಿಂದ ಶುರು ಮಾಡಿ ಯಶಸ್ಸಿನ ತುತ್ತತುದಿಯನ್ನು ಏರಿದ ಅಪೂರ್ವ ಕಥೆಗಳನ್ನು ನಾವಿಲ್ಲಿ ಕಾಣಬಹುದು. ಇದು ನಿಜಕ್ಕೂ ಉದ್ಯಮವನ್ನು ನಡೆಸುವವರಿಗೆ ಅಥವಾ ಆರಂಭಿಸುವವರಿಗೆ ಸ್ಫೂರ್ತಿ ಮತ್ತು ಭರವಸೆ ನೀಡುವ, ಹೊಸ ಪ್ರಯತ್ನದಿಂದ ಅಭೂತಪೂರ್ವ ಯಶಸ್ಸನ್ನು ಸಾಧಿಸುವ, ಎಷ್ಟೇ ಕಷ್ಟ ಬಂದರೂ ಎದೆಗುಂದದೆ, ತಲೆಯೆತ್ತಿ ನಿಲ್ಲಲು ಹುರಿದುಂಬಿಸುವ ಕೃತಿಯಾಗಿದೆ.
ಮಹಾನ್ ಉದ್ಯಮಿಗಳ ಕುರಿತ ಕೃತಿ ‘ಬ್ರ್ಯಾಂಡ್ ಬಿಲ್ಡರ್ಸ್’ನಲ್ಲಿ ೩೦ ಅಪೂರ್ವ ಸಾಧಕರ ಮಾಹಿತಿಗಳ ಸಂಗ್ರಹವಿದೆ. ಜಗದಗಲ ತಮ್ಮ ಹೆಸರನ್ನು ಪಸರಿಸಿದ ಆ ವ್ಯಕ್ತಿಗಳು ಸತತ ಪ್ರಯತ್ನದಿಂದ ಹೇಗೆ ನಡೆದು ಬಂದರು, ಬೆಳೆದು ನಿಂದರು, ಕಿರಿ ವಯಸ್ಸಿನಲ್ಲೇ ಅಷ್ಟೊಂದು ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು, ಋಣಾತ್ಮಕ ಮಾತುಗಳನ್ನೇ ಹೇಗೆ ಧನಾತ್ಮಕವಾಗಿ ಸ್ವೀಕರಿಸಿ ಯಶಸ್ಸು ಕಂಡರು, ಸೋಲು ಮತ್ತು ಭವಿಷ್ಯದ ಬಗೆಗೆ ಭಯಬೀಳದೆ ಕಂಪನಿಗಳನ್ನು ಕಟ್ಟಿ ಹೇಗೆ ಬೆಳೆಸಿದರು, ತಾವೇ ಕಟ್ಟಿ ಬೆಳೆಸಿದ ಸಾಮ್ರಾಜ್ಯಕ್ಕೆ ಅಧಿಪತಿಗಳಾಗಿ ಹೇಗೆ ಮೆರೆದರು, ಕಷ್ಟ ಮತ್ತು ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮವಿದ್ದರೆ ಹೇಗೆ ಯಶಸ್ಸು ಗಳಿಸಬಹುದು ಎನ್ನುವುದಕ್ಕೆಲ್ಲ ಇಲ್ಲಿನ ಲೇಖನಗಳು ಸಾಕ್ಷಿಯಾಗಿವೆ.
ಈ ಕೃತಿಯಲ್ಲಿ ಅಮೆಜಾನ್, ಆಪಲ್, ಫೇಸ್‌ಬುಕ್, ಗೂಗಲ್, ಟಾಟಾ, ವಿಪ್ರೋ, ಹೀರೋ, ಇಸ್ಫೋಸಿಸ್, ಬಯೋಕಾನ್, ವಿಆರ್‌ಎಲ್, ನೈಕಿ, ಬಾಟಾ, ಆಡಿಡಾಸ್, ಪಾರ್ಲೆ, ಬಿಸ್ಲೇರಿ, ಡಿಸ್ನಿ, ವಾಲ್‌ಮಾರ್ಟ್, ಲಿಜ್ಜತ್ ಪಪ್ಪಡ್, ಫೋರ್ಡ್ ಮೊದಲಾದ ಬೃಹತ್ ಉದ್ಯಮ ಕಟ್ಟಿ ಬೆಳೆಸಿದವರ ಮಾಹಿತಿಗಳಿವೆ .
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮುಂದಾಲೋಚನೆ, ತಾಳ್ಮೆ ಮತ್ತು ಅವಕಾಶವನ್ನು ಬಳಸಿಕೊಂಡು ಮೇಲೆ ಬಂದವರು. ಬೆಳೆಯುತ್ತ, ಅಮೆಜಾನ್ ನದಿಯಂತೆ ಹರಿದು ವಿಶ್ವಪ್ರಸಿದ್ಧರಾದವರು. ಆಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಉತ್ಕೃಷ್ಟತೆಯ ಬೆನ್ನೇರಿ ಇತಿಹಾಸವನ್ನು ನಿರ್ಮಿಸಿದವರು. ಗುಣಮಟ್ಟದೊಂದಿಗೆ ಅತ್ಯುತ್ತಮವಾದುದನ್ನು ಜನರಿಗೆ ನೀಡಿದರೆ ಖಂಡಿತವಾಗಿ ಮಾರುಕಟ್ಟೆಯಲ್ಲಿ ನಿಲ್ಲಬಹುದು ಎನ್ನುವುದಕ್ಕೆ ಸಾಕ್ಷಿಯಾದವರು. ಫೇಸ್ಬುಕ್ ಎಂಬ ಪರ್ಯಾಯ ಜಗತ್ತನ್ನು ನಿರ್ಮಾಣ ಮಾಡಿದ ಮಾರ್ಕ್ ಜುಕರ್‌ಬರ್ಗ್ ೨೦೦೪ರಲ್ಲಿ ಫೇಸ್‌ಬುಕ್ ಎನ್ನುವ ವೆಬ್ ಸೈಟ್ ಸೃಷ್ಟಿಸಿ ಜನರು ಪರಸ್ಪರ ಸಂಪರ್ಕಿಸಲು ದಾರಿ ಮಾಡಿಕೊಟ್ಟವರು. ಅನಂತರ ಅದರ ಹೆಸರು ಬದಲಿಸಿ, ವೆಬ್‌ಸೈಟ್‌ಗೆ ಫೇಸ್‌ಬುಕ್ ಎಂದು ಕರೆಯಲಾಯಿತು. ಆಗ ಅವರಿಗೆ ೧೯ ವರ್ಷ. ನೂರಕ್ಕೂ ಹೆಚ್ಚು ಭಾಷೆಯಲ್ಲಿ ಲಭ್ಯವಿರುವ ಫೇಸ್ಬುಕ್ ಗೆ ಮರುಳಾಗದಿರುವ ಜನರೇ ಇಲ್ಲ. ಜನರಿಗೆ ಏನು ಬೇಕೆನ್ನುವುದನ್ನು, ಜನರ ನಾಡಿಮಿಡಿತವನ್ನು, ಹೃದಯ ಬಡಿತವನ್ನರಿತು ನೀಡಿ ೨೩ನೆಯ ವಯಸ್ಸಿನಲ್ಲಿಯೇ ಬಿಲಿಯನೇರ್ ಆದ ಕಥೆಯನ್ನು ವಿವರಿಸಿದ್ದಾರೆ.
ಅದೇ ರೀತಿ ಮೈಕ್ರೋಸಾಫ್ಟ್ ತಾಂತ್ರಿಕತೆ ಕ್ರಾಂತಿಯ ಆದ್ಯ ಪ್ರವರ್ತಕ ಬಿಲ್ ಗೇಟ್ಸ್ ಬದುಕಿರುವಾಗಲೇ ದಂತಕಥೆಯಾದ ಅಪೂರ್ವ ವ್ಯಕ್ತಿ. ಸಮಾಜದಿಂದ ಬಂದ ಹಣ ಸಮಾಜಕ್ಕೆ ಸೇರಬೇಕೇ ಹೊರತು, ಹೆತ್ತ ಮಕ್ಕಳಿಗೆ ಕೊಟ್ಟು ಅವರನ್ನು ಹಾಳು ಮಾಡಬಾರದೆಂಬುದು ಅವರ ಅಭಿಪ್ರಾಯವಾಗಿತ್ತು. ಅಸಾಮಾನ್ಯ ಬುದ್ಧಿಮತ್ತೆ, ಹೊಸತನದ ಆವಿಷ್ಕಾರದ ಆಸಕ್ತಿ, ಜಗತ್ತಿನ ತಂತ್ರಜ್ಞಾನದ ದಿಕ್ಕನ್ನೇ ಹೇಗೆ ಬದಲಾಯಿಸಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.
ಇಂದಿನ ಅತಿ ದೊಡ್ಡ ಸರ್ಚ್ ಇಂಜಿನ್ ಗೂಗಲ್ ಎಂಬ ಮಾಯಾಗನ್ನಡಿಯ ಸ್ಥಾಪಕ ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್ ಇವರು ಜಗತ್ತಿಗೆ ಉಪಕಾರ ಮಾಡಿದರೆ- ಉಪಕಾರಿಗಳಿಗೂ ಉಪಕಾರ ಮರಳಿ ದೊರೆಯುತ್ತದೆ ಎನ್ನುವುದರಲ್ಲಿ ನಂಬಿಕೆ ಇಟ್ಟವರು. ಪುಟ್ಟ ಉಪಕರಣದಲ್ಲಿ ಜಗತ್ತನ್ನೇ ತೆರೆದಿಡುವ ಅದ್ಭುತ ಪರಿಕಲ್ಪನೆಯನ್ನು ಮಾಡಿದವರು. ದೂರಾಲೋಚನೆ, ಪ್ರತಿಭೆ ಮತ್ತು ಭರವಸೆ ಇವೆಲ್ಲ ಸೇರಿದರೆ ಉತ್ಕೃಷ್ಟತೆ ಲಭಿಸುತ್ತದೆ ಎನ್ನುವುದಕ್ಕೆ ಇವರು ಉಪಮೆಯಾಗುತ್ತಾರೆ.
ಕರ್ನಾಟಕದವರಾದ ಇನ್ಫೋಸಿಸ್ ನಾರಾಯಣಮೂರ್ತಿ ಮಧ್ಯಮವರ್ಗದ ಕುಟುಂಬದಿಂದ ಬಂದವರು. ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತೇ ತಿರುಗಿ ನೋಡುವಂತಹ ಸಾಧನೆಗೈದವರು. ತಾಳ್ಮೆ ಮತ್ತು ಸಹನೆಯ ಹಾದಿಯಲ್ಲಿ ಸಾಗಿ, ಕೈಯಲ್ಲಿ ಹಣವಿರದಿದ್ದರೂ ಪುಟ್ಟ ಕಂಪನಿಯೊಂದನ್ನು ಸ್ಥಾಪಿಸಿ, ಇಂದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಮತ್ತು ಕಷ್ಟದಲ್ಲಿರುವವರಿಗೆ ಸೇವೆ ಮಾಡುತ್ತಿರುವ ಉದಾತ್ತ ವ್ಯಕ್ತಿ. ಕಠಿಣ ಪರಿಶ್ರಮ, ಮೌಲ್ಯಾಧಾರಿತ ವ್ಯವಹಾರ, ಪಾರದರ್ಶಕ ಸೇವೆ, ಉತ್ಕೃಷ್ಟತೆ, ಸಮಗ್ರತೆಯಂತಹ ಮೌಲ್ಯಗಳನ್ನು ಹೊಂದಿರುವ ಇನ್ಫೋಸಿಸ್ ಭಾರತದ ಆಸ್ತಿ. ಪತ್ನಿ ಸುಧಾಮೂರ್ತಿ ಕೊಟ್ಟ ೧೦,೦೦೦ ಮತ್ತು ಏಳು ಜನರ ಅಸಾಧಾರಣ ಬುದ್ಧಿಮತ್ತೆಯನ್ನು ಬಂಡವಾಳ ಮಾಡಿಕೊಂಡು ಇನ್ಫೋಸಿಸ್ ಸುಮಾರು ೧೩ ಬಿಲಿಯನ್ ಡಾಲರ್ ಆದಾಯವನ್ನು ಹೊಂದಿದೆ. ಅದೇ ರೀತಿ ವಿ ಆರ್ ಎಲ್ ಎಂಬ ಸಾಮ್ರಾಜ್ಯವನ್ನು ಕಟ್ಟಿದ ವಿಜಯ ಸಂಕೇಶ್ವರರ ವಿಜಯ ಯಾತ್ರೆ. ಸಾರಿಗೆ ಕ್ಷೇತ್ರದ ಗಂಧಗಾಳಿಯೂ ಇಲ್ಲದೆ ಅದನ್ನು ಆರಂಭಿಸಿ ಯಶಸ್ಸನ್ನು ಕಂಡಂಥವರು. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದರೆ ಯಶಸ್ಸು ಗಳಿಸಲು ಸಾಧ್ಯ ಎನ್ನುವುದಕ್ಕೆ ಅವರು ಅತ್ಯುತ್ತಮ ಉದಾಹರಣೆ. ಉತ್ಕೃಷ್ಟತೆಯ ಹಿಂದೆ ಬಿದ್ದ ಅವರನ್ನು ಹಣ ಹಿಂಬಾಲಿಸಿ ಬಂತೇ ಹೊರತು, ಹಣದ ಹಿಂದೆ ವಿಜಯ ಸಂಕೇಶ್ವರ್ ಎಂದೂ ಬಿದ್ದವರಲ್ಲ. ಸಾರಿಗೆ ಕ್ಷೇತ್ರದ ಜೊತೆಗೆ ಮುದ್ರಣ ಮಾಧ್ಯಮದಲ್ಲಿ ಸಹ ಅವರ ಸಾಧನೆ ಮೆಚ್ಚುವಂಥಾದ್ದು. ಬೆಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ಕಿರಣ್ ಮಜುಮ್ದಾರ್ ಶಾ ಸ್ಥಾಪಿಸಿರುವ ಬಯೋಕಾನ್ ಇಂದು ವಿಶ್ವದ ಪ್ರಮುಖ ಸಂಸ್ಥೆಯಾಗಿ ನಿಂತಿದೆ. ವೈದ್ಯೆ ಆಗಬೇಕೆಂದು ಕನಸು ಕಂಡಿದ್ದ ಕಿರಣ್, ಮೆಡಿಸಿನ್ ಕ್ಷೇತ್ರಕ್ಕೆ ಕಾಲಿಟ್ಟು ವೇಗವಾಗಿ ಬಿಲಿಯನೇರ್ ಗುಂಪಿಗೆ ಸೇರಿದವರು . ೧೨,೦೦೦ಕ್ಕೂ ಹೆಚ್ಚು ಉದ್ಯೋಗಿಗಳ ಬಯೋಕಾನ್ ಕಂಪನಿಯನ್ನು ಏಕಾಂಗಿಯಾಗಿ ಕಟ್ಟಿ ಬೆಳೆಸಿದ ಮಹಿಳೆ. ಜೈವಿಕ ತಂತ್ರಜ್ಞಾನದಲ್ಲಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಹೆಗ್ಗಳಿಕೆ ಇವರದ್ದು.
ವಿಪ್ರೋ ಸ್ಥಾಪಕ ಅಜೀಮ್ ಪ್ರೇಮ್‌ಜಿ ಕಠಿಣ ಶ್ರಮ, ಸಮಯೋಚಿತವಾದ ನಿರ್ಧಾರ, ವಿಶ್ವಾಸವಿದ್ದರೆ ಏನನ್ನೂ ಸಾಧಿಸಬಹುದೆನ್ನುವುದಕ್ಕೆ ಜ್ವಲಂತೆ ನಿದರ್ಶನ. ೨೦೧೩ರಲ್ಲಿ ತಮ್ಮ ಆಸ್ತಿಯ ಕಾಲುಭಾಗವನ್ನು ಸಮಾಜ ಸೇವೆಗೆಂದೇ ದಾನ ಮಾಡಿದವರು. ಆರು ವರ್ಷಗಳ ಕಾಲ ಭಾರತದ ನಂ. ೧ ಶ್ರೀಮಂತರಾಗಿ ಮೆರೆದವರು. ಕೊರೊನಾ ವೇಳೆ ೫೨, ೭೫೦ ಕೋಟಿ ರೂ. ದಾನ ಮಾಡಿದ ಉದಾರರು. ಈ ಸಮಾಜಕ್ಕೆ ತಾನು ಮಾಡಬೇಕಾದ ಕರ್ತವ್ಯ ಎನ್ನುವುದು ಅವರ ವಿನಯದ ನುಡಿ. ೨೦೦೧ಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಓದುವ ಕನಸಿಗೆ ನಿರಂತರವಾಗಿ ನೀರೆರೆಯುತ್ತಿದ್ದಾರೆ. ಇಂದಿಗೂ ತಮ್ಮ ಆದಾಯದ ದೊಡ್ಡ ಭಾಗವನ್ನು ದಾನ ಮಾಡುವ ವ್ಯಕ್ತಿ ಇವರು. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿರುವ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೇ ರೀತಿ ಸಾಧನೆ ಮಾಡಿದವರು ಉಳಿದ ಬ್ರ್ಯಾಂಡ್ ಬಿಲ್ಡರ್ಸ್.
ಈ ಕೃತಿಯ ಅಡಿಬರೆಹ ಬಿತ್ತಿ, ಬೆಳೆಸಿ, ಬೆಳೆದವರು ಎಂದಿದೆ. ಕೃತಿಯಲ್ಲಿರುವ ಸಾಧಕರೆಲ್ಲರೂ ಇದನ್ನೇ ಮಾಡಿದವರು. ತಾವು ಯಶಸ್ವಿಯಾಗಬೇಕೆಂದು ತೀರ್ಮಾನಿಸಿದ್ದರಿಂದ ಎಷ್ಟೇ ಸಂಕಷ್ಟ ಬಂದರೂ- ಛಲ, ದೃಢ ಮನಸ್ಸು, ಸತತ ಪರಿಶ್ರಮ, ಹೊಸತನ್ನು ಕಲಿಯುವ ಹಂಬಲ ಮತ್ತು ದಣಿವರಿಯದ ಸ್ಫೂರ್ತಿಯಿಂದ ಸಾಧನೆ ಮಾಡಿದವರು. ಬ್ರಾಂಡ್ ಬಿಲ್ಡರ್ಸ್ ಆಗಿ ವಿಭಿನ್ನ, ವಿಶಿಷ್ಟ ಸಾಧನೆ ಮಾಡಿದವರು. ಇಂದು ಆಲದ ಮರದಂತೆ ವಿಶಾಲವಾಗಿ ಈ ಎಲ್ಲ ಕಂಪನಿಗಳು ಬೆಳೆದು ನಿಂತಿವೆ. ಸಂಕಟ, ಸೋಲು, ಭವಿಷ್ಯದ ಆತಂಕ, ಸಮಾಜದ ವ್ಯಂಗ್ಯ ಮೊದಲಾದ ಏರಿಳಿತಗಳಿಂದ ಕೂಡಿದ ಸವಾಲಿನ ಮಧ್ಯೆ ಬೆಳೆದು ನಿಂತವರು ಎನ್ನುವುದನ್ನು ಇಲ್ಲಿ ಹೃದಯಸ್ಪರ್ಶಿಯಾಗಿ ಲೇಖಕಿ ನಿರೂಪಿಸಿದ್ದಾರೆ.
ಈ ಸಾಧಕರ ಕಥನಗಳು ಅಸಾಧ್ಯವನ್ನು ಸಾಧ್ಯವಾಗಿಸಲು ನಮಗೆ ಸ್ಫೂರ್ತಿಯಾಗುತ್ತವೆ, ನಮ್ಮ ಬದುಕನ್ನು ಹಸನಾಗಿ ಬದಲಾಯಿಸಿಕೊಳ್ಳಲು ಪ್ರೇರಕ ಶಕ್ತಿಯಾಗುತ್ತದೆ, ಪ್ರಯತ್ನ, ತಾಳ್ಮೆ, ಇದ್ದರೆ ಯಾವ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸಬಹುದು ಎಂದು ಉತ್ತೇಜಿಸುತ್ತದೆ, ಸಂಕಷ್ಟಗಳ ನಡುವೆಯೂ ಅವಕಾಶಗಳನ್ನು ಬಳಸಿಕೊಂಡು ಇವರೆಲ್ಲ ಧೈರ್ಯದಿಂದ ಮುನ್ನಡೆದವರು ಎನ್ನುವುದನ್ನು ಲೇಖಕಿ ಅಭಿಮಾನದಿಂದ ಉಲ್ಲೇಖಿಸುತ್ತಾರೆ.
ಇಂತಹ ಸಾಧಕರ ಮಾಹಿತಿಯನ್ನು ವಿವಿಧ ಮೂಲಗಳಿಂದ ಕಲೆಹಾಕಿ, ಅದನ್ನು ಓದುಗರಿಗೆ ಉಣಬಡಿಸುವ ಮೂಲಕ, ವಿಶೇಷವಾಗಿ ಇಂದಿನ ಯುವಜನಾಂಗಕ್ಕೆ ಇದು ಅವಶ್ಯ ಎಂದರಿತು ಲೇಖಕಿ ಮಾಡಿರುವ ಕಾರ್ಯ ನಿಜಕ್ಕೂ ಸ್ತುತ್ಯರ್ಹ. ಇದು ಯುವಜನತೆಗೆ ಮಾರ್ಗದರ್ಶಿಯಾಗಬಲ್ಲ, ಸಾಧನೆಗೆ ಪ್ರೇರಣೆಯಾಗಬಲ್ಲ, ಸಂಶೋಧನೆ ಮಾಡುವವರಿಗೆ ನೆರವಾಗಬಲ್ಲ ಅತ್ಯುತ್ತಮ ಕೃತಿ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.
Published by Dattareya Hegde on March 20, 2025
........................

Comments
Post a Comment