ಭಾವಲೋಕಕ್ಕೆ ಸೆಳೆದೊಯ್ಯುವ
‘ಅಂತರಂಗದ ಧ್ಯಾನ’
ಕನ್ನಡ ಸಾಹಿತ್ಯದಲ್ಲಿ ಗಜಲ್‌ಗಳು ಸ್ವಲ್ಪ ಕಡಿಮೆ ಎನ್ನಬಹುದು. ಅಪರೂಪಕ್ಕೆ ಇದು ಕಂಡುಬರುತ್ತಿದೆ. ಇಂತಹ ಗಜಲ್ ಮೂಲಕ ಕೃತಿ ರಚಿಸಿದವರು ವಿ. ನಾರಾಯಣಸ್ವಾಮಿ (ನಾನಿ). ಅದರ ಸಂಗ್ರಹವೇ ‘ಅಂತರಂಗದ ಧ್ಯಾನ’. ನಾರಾಯಣಸ್ವಾಮಿ ಕೋಲಾರ ಜಿಲ್ಲೆಯ ಮಾಸ್ತಿಯವರು. ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾರೆ. ವಕೀಲ ವೃತ್ತಿಗೂ ಸಾಹಿತ್ಯಕ್ಕ್ಕೂ ಅಜಗಜಾಂತರವಿದ್ದರೂ ಇವರ ಗಜಲ್‌ಗಳು ಅರ್ಥಪೂರ್ಣವಾಗಿವೆ, ಸ್ವ್ವಾದಭರಿತವಾಗಿವೆ. ನಮ್ಮನ್ನು ಭಾವಲೋಕಕ್ಕೆ ಸೆಳೆದೊಯ್ಯುವ ಶಕ್ತಿಯನ್ನು ಹೊಂದಿವೆ. ಕೃತಿಯಲ್ಲಿ ಒಟ್ಟು ೬೦ ಗಜಲ್‌ಗಳಿವೆ.
ಗಜಲ್ ಸಾಧಾರಣವಾಗಿ ಎಲ್ಲರಿಗೂ ದಕ್ಕುವಂತದ್ದಲ್ಲ. ಮೂಲತಃ ಅರಬ್ ನೆಲದಲ್ಲಿ ಜನಿಸಿ ಹಲವಾರು ಭಾಷೆಗಳಲ್ಲಿ, ನೂರಾರು ದೇಶಗಳನ್ನು ಸಂಚರಿಸಿ ಉರ್ದು ಮುಖಾಂತರ ಭಾರತದ ನೆಲಕ್ಕೆ ಕಾಲಿಟ್ಟಿರುವ ಸಾಹಿತ್ಯ ಪ್ರಕಾರ. ಪ್ರೇಮದ ಉತ್ಕಟತೆ ಹಾಗೂ ವಿರಹದ ತೀವ್ರತೆಯನ್ನು ತನ್ನ ಆತ್ಮದೊಳಗೆ ಗಜಲ್ ಇಟ್ಟುಕೊಂಡಿರುವುದನ್ನು ನಾವು ಕಾಣಬಹುದು. ಗಜಲ್ ಮೇಲ್ನೋಟಕ್ಕೆ ಎಷ್ಟು ಚಂದದ ರಚನೆಯೋ ಅಂತರಂಗದಲ್ಲಿ ಇದನ್ನು ರಚಿಸಲು ಅಷ್ಟೇ ಕಷ್ಟ. ಇದಕ್ಕೆ ಅದರದೇ ಆದ ನಿಯಮಗಳಿವೆ. ಇದರ ಸೂಕ್ಷ್ಮಗಳನ್ನು ಅರಿತು ನಾರಾಯಣಸ್ವಾಮಿ ರಚನೆ ಮಾಡಿದ್ದಾರೆ.
ನಾನಿಯವರ ಘಜಲ್‌ಗಳು ಪ್ರೀತಿ, ಪ್ರೇಮ, ಬಡತನ, ಅದರೊಳಗಿನ ಕಷ್ಟ, ನೋವು, ಯಾತನೆ, ಅಪ್ಪ- ಅಮ್ಮನ ಬವಣೆ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ವೈಚಾರಿಕ ಚಿಂತನೆ, ಸಂಬಂಧಗಳ ತೊಳಲಾಟ, ರಾಜಕೀಯದ ಅಧ:ಪತನ, ನಾಸ್ತಿಕ- ಆಸ್ತಿಕತೆಯ ಗೊಂದಲ ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ಮಾರ್ಮಿಕವಾಗಿ ಪ್ರಶ್ನೆ ಮಾಡುತ್ತಾ ಮಾನವೀಯ ಕಳಕಳಿಯನ್ನು ತುಂಬುವ ಜೀವಂತಿಕೆಯನ್ನು ಕಟ್ಟಿಕೊಟ್ಟಿದ್ದಾರೆ.
ಗಜಲ್‌ಗಳೆಲ್ಲ ಐದು ಸಾಲಿನವಾಗಿರಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಎಲ್ಲವೂ ಎರಡು ಸಾಲಿನವು ಎನ್ನುವುದು ವಿಶೇಷ. ಮೊದಲ ಗಜಲ್‌ನಲ್ಲಿ ಬಣ್ಣವೇ ಮಾಸಿಹೋದ ಅಂಗಿಯನ್ನು ಎಷ್ಟು ಬಾರಿ ಹೊಲೆಯುವೆ ಅಮ್ಮಾ/ ಹರಿದು ಕುಂಡಿಯು ಕಾಣುವ ಪ್ಯಾಂಟಿಗೆ ಎಷ್ಟು ಬಾರಿ ತೇಪೆ ಹಾಕುವೆ ಅಮ್ಮಾ/ ಎನ್ನುತ್ತಾ ಬಡತನದ ದಾರುಣ ಚಿತ್ರಣನ್ನು ನೀಡುತ್ತಾರೆ. ಇದು ನಿಜಕ್ಕೂ ಎದೆ ಕಲಕುತ್ತದೆ. ಹಾಗೆ ಅಮ್ಮನ ನೋವು, ಅವಳ ನಿಸ್ವಾರ್ಥ ಪ್ರೀತಿ ವಿವರಿಸುತ್ತಾ ‘ಹಗಲಿರುಳು ನಿನ್ನನ್ನೇ ಧ್ಯಾನಿಸುತ್ತಾ ದೇವರಂತೆ ಪೂಜಿಸುವೆ ಎನ್ನುತ್ತಾರೆ. ಪ್ರೀತಿ-ಪ್ರೇಮದ ಅರ್ಥ ಹುಡುಕಬೇಕಿದೆ. ಮಹನೀಯರ ಆದರ್ಶ ಕಾಣೆಯಾಗಿದೆ. ಆತ್ಮೀಯತೆಯ ಭಾವವಿಲ್ಲ, ನೋವು- ನಲಿವಿಗೆ ಸಂಬಂಧವಿಲ್ಲ ಎಂದು ಹಳಹಳಿಸುತ್ತಾ ನೋವಿಗೆ ಮುಲಾಮು ಬೇಕಾಗಿದೆ, ನನ್ನೂರ ಗುಡಿಸಲರಮನೆಗೆ ಮತ್ತೆ ಪಯಣ ಬೆಳೆಸುವೆ ಎನ್ನುತ್ತಾರೆ (ಗಜಲ್ ೨). ಮತ್ತೊಂದು ಗಜಲ್‌ನಲ್ಲಿ ಅಹಂಕಾರ ಎಂಬ ಕಾಡುವ ನೋವುಗಳೆಲ್ಲ ಸ್ಫೋಟವಾಗುವ ಮುನ್ನ ಸಂತೆಯಲ್ಲಿ ಹರಾಜು ಹಾಕಬೇಕೆಂದಿದ್ದೇನೆ. ಇವು ವೈರಸ್‌ಗಿಂತ ಮಾರಕ, ಎದೆಯ ಭಾರವಿಳಿಸಲು ನೀನು ಬಂದು ಖರೀದಿಸೆಂದು ಗೆಳತಿಗೆ ಹೇಳುತ್ತ್ತಾರೆ. ಇಲ್ಲಿ ಗೆಳತಿ ತನ್ನಲ್ಲಿ ಪ್ರೀತಿಯ ಜೇನು ತುಂಬಿದವಳೆನ್ನುವ ಅರ್ಥ ಗಮನಿಸಬಹುದು.
ನೀನಿಲ್ಲದ ರಾತ್ರಿಗಳನು ಹೇಗೆ ಕಳೆಯಲಿ ಸಖಿ/ ಆವರಿಸಿಕೊಂಡಿರುವ ನಿನ್ನ ನೆನಪುಗಳನು ಹೇಗೆ ಮರೆಯಲಿ ಸಖಿ/ ಎನ್ನುವ ಗಜಲ್‌ನಲ್ಲೂ ಪ್ರೇಯಸಿ ಇಲ್ಲದ ಬದುಕು ನರಕಕ್ಕೆ ಸಮಾನ. ಪ್ರಿಯತಮೆಯನ್ನು ಮರೆಯಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ. ಇನ್ನೊಂದೆಡೆ, ತನಗೊಲಿದವಳು ಇನ್ನೊಬ್ಬನೊಂದಿಗೆ ಇರುವುದನ ಚಿತ್ರಿಸುತ್ತಾ, ಅರಳಿದ ಹೂವುಗಳು ನಲುಗುತ್ತ ಅವರ ರಸಮಯ ಕ್ಷಣಗಳಿಗೆ ಸಾಕ್ಷಿಯಾಗಿವೆ. ಬಸವಳಿದ ಹೂಗಳನ್ನು ತನ್ನ ಗೋರಿಯ ಮೇಲೆ ತಂದಿಡು ಎನ್ನುವ ಮಾತು ಹೃದಯವ ಗಾಢವಾಗಿ ತಟ್ಟುತ್ತದೆ (ಗಜಲ್ ೩೦). ನನ್ನ ಕನಸುಗಳಿಗೆ ಘೋರಿಯನು ಕಟ್ಟುತಿರುವೆ ಮಸಣದಲಿ/ ನಿನ್ನ ನೆನಪುಗಳ ಮೂಟೆಯನು ಎಸೆಯುತ್ತಿರುವೆ ಸಮುದ್ರದಲಿ/ ಎಂಬ ಸಾಲಿನ ಮೂಲಕ ಗೆಳತಿಯಿಂದಾದ ವಿರಹವೇದನೆಯನ್ನು ತೆರೆದಿಟ್ಟಿದ್ದಾರೆ (ಗಜಲ್-೧೮)
ರೈತನ ಬದುಕನ್ನು ಸುಂದರವಾಗಿ ಗಜಲ್ -೨೫ರಲ್ಲಿ ಕಟ್ಟಿಕೊಟ್ಟಿದ್ದಾರೆ. ಅರೆಹೊಟ್ಟೆಯ ಗಂಜಿ, ಹರಿದ ಬಟ್ಟೆ, ಅನ್ನಕ್ಕಾಗಿ ಸದಾ ಹೊಲದಲ್ಲಿ ಬೆವರು ಸುರಿಸುತಿರುವುದು, ರಾಜಕಾರಣಿಗಳು ರೈತನ ಬಗ್ಗೆ ಟೊಳ್ಳು ಭಾಷಣ ಹೊಡೆದು ಮತವನ್ನು ಹಾಕಿಸಿಕೊಳ್ಳುವುದು, ಗೆದ್ದವನು ರಿಂಗ್ ರೋಡಿನಲ್ಲಿ ಕಾರಿನಲ್ಲಿ ಹೋಗುತ್ತಾನೆ. ಆದರೆ ಮತ ಹಾಕಿದವನು ಕಿತ್ತುಹೋದ ರಸ್ತೆಯಲ್ಲಿ ಬಿದ್ದಿದ್ದಾನೆ ಎಂಬ ಚಿತ್ರಣ ಸೊಗಸಾಗಿ ಮೂಡಿಬಂದಿದೆ.
ಮನಸೆಳೆಯುವ ಒಂದೆರಡು ಉಪಮೆಯ ಗಜಲ್ ಸಾಲುಗಳು:
ಬೆಳಂದಿಗಳ ಬೆಳಕನ್ನೇ ಸಂಭ್ರಮಿಸಿ ಖುಷಿಪಟ್ಟವನು ನಾನು
ಅಮಾವಾಸ್ಯೆಯ ಚಂದಿರನಂತೆ ಅವಳು ಮರೆಯಾಗಲಿ ಹೋಗಲಿ (ಗಜಲ್-೪೧)
ಕತ್ತಲಿನಲಿ ಸದ್ದು ಮಾಡದೆ ಎದ್ದು ಹೋದವನು ಬುದ್ಧ
ಗದ್ದಲವ ಮಾಡದೆ ಜಗದ ಮನವನು ಆವರಿಸಿದವನು ನೀನು ಬುದ್ಧ (ಗಜಲ್ ೫೩)
ಎಲ್ಲಾ ಗಜಲ್‌ಗಳನ್ನು ಓದಿದಾಗ ಪ್ರತಿಯೊಂದು ಸಾಲುಗಳೂ ಒಂದೊಂದು ಬಗೆಯ ಅನುಭವವನ್ನು ತೆರೆದಿಡುತ್ತವೆ. ಹೊಸ ಹೂಗಳಂತೆ ಪರಿಮಳ ಬೀರುತ್ತವೆ. ಕೆ ಲವು ಗಜಲ್‌ಗಳಂತೂ ‘ವಾವ್’ ಎನ್ನುವಂತಿವೆ. ಸಮಾಜದಲ್ಲಿ ತಲೆ ಎತ್ತಿ ನಿಲ್ಲುವ ಕಾಲದವರೆಗೆ ನಡೆದುಬಂದ ಹಾದಿಯ ಚಿತ್ರಣ ಇಲ್ಲಿದೆ ಎನ್ನಬಹುದು. ಜಾತಿ- ಧರ್ಮಗಳ ಅನೀತಿ, ಬಂಡಾಯದ ಮನೋಭಾವ ಕೃತಿಯಲ್ಲಿ ವ್ಯಕ್ತವಾಗಿದೆ. ಸಮಾಜದ ಸ್ಥಿತಿಗತಿಗಳನ್ನು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ನೈಜತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿವೆ, ಉದಾ- ೨೧ನೆಯ ಗಜಲ್. ಹೊಸಹೊಸ ಉಪಮೆಗಳು ತಮ್ಮ ವಿನೂತನತೆಯಿಂದ ಖುಷಿಗೊಳಿಸುತ್ತವೆ.
ಒಟ್ಟಿನಲ್ಲಿ, ಯುವ ಸಹಜ ಪ್ರೇಮಮಯ ಹೃದಯದ ಆರ್ದೃತೆ, ಹಾಗೂ ರೈತಾಪಿ ಮನದ ಕಠೋರ ತಪ, ಗಾಂಭೀರ್ಯ ಚೌಕಟ್ಟು ಈ ಗಜಲ್ ಕೃತಿಯನ್ನು ಸುಂದರಗೊಳಿಸಿದೆ. ಒಲವಿನೆದೆಯ ಮುಗ್ಧತೆ ಮತ್ತು ಬಂಡವಾಳಶಾಹಿಗಳ ಮೋಸ- ವಂಚನೆ ತೋರಿಸುತ್ತಲೇ ವಿವಿಧ ಗಜಲ್‌ಗಳನ್ನು ಸುಂದರವಾಗಿ ಹೆಣೆದಿದ್ದಾರೆ. ಸಶಕ್ತವಾಗಿ ಮೂಡಿಬಂದ ಈ ಗಜಲ್‌ಗಳು ಓದಿಸಿಕೊಂಡು ಹೋಗುವಲ್ಲಿ ಸಫಲವಾಗಿವೆ. ಲೇಖಕರು ಅಂತರಂಗದಲ್ಲಿ ಗಜಲ್‌ನ್ನು ಧ್ಯಾನಿಸಿದ್ದು ಇಲ್ಲಿ ಸ್ಪಷ್ಟವಾಗಿದೆ
Published by Dattareya Hegde on MArch 27, 2025

Comments
Post a Comment