ಸಂಕಟಕ್ಕೊಳಗಾದ ಹೆಣ್ಣಿನ  ನೋವಿನ ಕಥೆ
‘ಕುಣಿಯೇ ಘುಮಾ’


ಕುಣಿಯೇ ಘುಮಾ  

ಪ್ರಕಾರ: ಆತ್ಮಕಥನ

ಮರಾಠಿ ಮೂಲ : ಮಾಧವಿ ದೇಸಾಯಿ

ಕನ್ನಡಕ್ಕೆ : ಚಂದ್ರಕಾಂತ ಪೋಕಳೆ

ಪ್ರಕಾಶಕರು- : ನವಕರ್ನಾಟಕ ಪಬ್ಲಿಕೇಶನ್ಸ್ ಬೆಂಗಳೂರು

ಪುಟಗಳು- ೧೯೨

ಬೆಲೆ-೧೯೦/-


‘ಕುಣಿಯೇ ಘುಮಾ’  ಇದೊಂದು ಮಹಾರಾಷ್ಟ್ರದ  ಪಾರಂಪರಿಕ  ನೃತ್ಯದ ಹೆಸರು. ಗೋಲಾಕಾರವಾಗಿ ನಿಂತ ಸುಮಂಗಲೆಯರು  ಓರ್ವ ಸುಮಂಗಲೆ (ಘುಮಾ)ಯನ್ನು  ಗೋಲಾಕಾರದ ಮಧ್ಯೆ ನಿಲ್ಲಿಸಿ ಕುಣಿಯುವಂತೆ ಪ್ರೇರೇಪಿಸುತ್ತಾರೆ. ಆದರೆ ಆಕೆ ಕುಣಿಯಲು ಒಪ್ಪುವುದಿಲ್ಲ. ಆಗ ಬಲವಂತದಿಂದ ಕುಣಿಸುತ್ತಾರೆ. ರೂಢಿ, ಪರಂಪರೆ, ಸಂಸ್ಕೃತಿ, ರೀತಿ-ನೀತಿ,  ಶೀಲ, ಮನೆಯ ಹೊಸ್ತಿಲು, ಮರ್ಯಾದೆಯ  ನಡುವೆ ಸಿಲುಕುವ ‘ಘುಮಾ’ ಈ ಸಂಕೋಲೆ ಮುರಿದು ಹೊರಬರುವುದು ಸಾಧ್ಯವಿಲ್ಲ. ಒಂದು ಹೆಣ್ಣನ್ನು ಸಮಾಜ ಎಷ್ಟು ಬಿಗಿಯಾಗಿ ಬಂಧಿಸಿದೆ ಎಂದರೆ  ಆಕೆ  ಆ ವೃತ್ತದಿಂದ ಹೊರಬರುವುದು ಕಷ್ಟ.

 ಪ್ರಸ್ತುತ ‘ಕುಣಿಯೇ ಘುಮಾ’  (ನಾಚ್  ಗ ಘುಮಾ) ಒಂದು ಆತ್ಮಕಥೆ.  ಮರಾಠಿಯ ಖ್ಯಾತ ಲೇಖಕಿ ಮಾಧವಿ ದೇಸಾಯಿ ಇದರ ಲೇಖಕರು. ಆತ್ಮಕಥೆಯೂ ಅವರದ್ದೇ ಆಗಿದೆ. ಸಂಕಟಕ್ಕೊಳಗಾದ ಓರ್ವ ಹೆಣ್ಣಿನ  ನೋವಿನ ಕಥೆಯಿದು. ಲೇಖಕಿ ತಾನು ಸಂಸಾರಾರ್ಥಿಯಾಗಿ  ಬೆಳಗಾವಿ, ಮಹಾರಾಷ್ಟ್ರದ  ಕೊಲ್ಲಾಪುರದ  ಕಲ್ಯಾಣ್, ಕೋವಡ್, ಮುಂಬೈ, ಗೋವಾ ಮೊದಲಾದೆಡೆ ವಾಸಿಸುವಾಗ  ಆದ ವಿವಿಧ ಕಷ್ಟ- ನಷ್ಟ- ಸಂಕಷ್ಟದ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಇನಾಂದಾರ್ ಮನೆತನದವರ ಪರಂಪರೆ, ಗ್ರಾಮೀಣ ಪರಂಪರೆ ಮತ್ತು ಆಧುನಿಕ ತಲೆಮಾರಿನ ಸ್ತ್ರೀಯರೆಲ್ಲ ‘ಕುಣಿಯೇ ಘುಮಾ’ದ ಪ್ರತೀಕ ಎನ್ನುವುದನ್ನು ವಿವರಿಸಿದ್ದಾರೆ. ಮೂಲ ಮರಾಠಿಯಲ್ಲಿರುವ ಈ ಕೃತಿಯನ್ನು ಕನ್ನಡಕ್ಕೆ ಬೆಳಗಾವಿಯ ಉಪನ್ಯಾಸಕ ಚಂದ್ರಕಾಂತ ಪೋಕಳೆ ಅನುವಾದಿಸಿದ್ದಾರೆ.

 ಕೃತಿಯಲ್ಲಿ ಲೇಖಕಿಯು ಸಾಮಾಜಿಕವಾದ ಈ ವಿಷವರ್ತುಲವನ್ನು ಮುರಿದು ಹೊರಬಂದು  ಸಂಘರ್ಷವನ್ನು ಎದುರಿಸಿದವಳಾಗಿ ನಿಲ್ಲುತ್ತಾಳೆ.  ಈಗ ಅವಳು ಘುಮಾ ಆಗದೆ ತನ್ನದೇ ಆದ ಅಸ್ತಿತ್ವ,  ವ್ಯಕ್ತಿತ್ವ,  ಮನಸ್ಸು  ಪಡೆದವಳಾಗಿದ್ದಾಳೆ. ಈ ಆತ್ಮಕಥನದಲ್ಲಿ ಮಹಿಳೆಯನ್ನು ಶೋಷಣೆಯ  ಪ್ರತೀಕವಾಗಿ ಬಳಸಲಾಗಿದೆ.  ಇಲ್ಲಿನ ಕಥೆಯು ಫ್ಲ್ಯಾಶ್ ಬ್ಯಾಕ್‌ನಂತೆ ರಚಿತವಾಗಿದೆ. ಬಣ್ಣದ ಬದುಕಿನ, ಬೆಳ್ಳಿ ಪರದೆಯ ಜನರ ನಡುವೆ ಜನಿಸಿ, ತಬ್ಬಲಿ ಭಾವ ಹೊತ್ತು  ಬೆಳೆದ ಲೇಖಕಿ  ಫ್ಲಾರೆನ್ಸ್ ನೈಟಿಂಗೇಲ್‌ಳಂತೆ ಆಗಬೇಕೆಂಬ ಕನಸು ಕಾಣುತ್ತಾಳೆ. ಆದರೆ ಪತ್ನಿ, ತಾಯಿ, ವಿಧವೆಯಾಗಿ ನೂರೆಂಟು ಕೌಟುಂಬಿಕ ಸಮಸ್ಯೆಯ ಅನುಭವಗಳನ್ನು ಎದುರಿಸುತ್ತಾಳೆ.

ಲೇಖಕಿಯ ಎರಡನೆಯ ಪತಿ ರಣಜಿತ್ ದೇಸಾಯಿ ಮರಾಠಿಯ ಪದ್ಮಶ್ರೀ ಪುರಸ್ಕೃತ ಲೇಖಕರಾದರೂ,  ಮಹಿಳಾಪರ ಕೃತಿ ರಚಿಸಿದ್ದರೂ,  ಪತ್ನಿಗೆ ನಿಜ ಜೀವನದಲ್ಲಿ ತೋರಿಸಿದ ಕ್ರೌರ್ಯದ ಮುಖವನ್ನು ಈ ಕೃತಿಯಲ್ಲಿ ಮಾಧವಿ ಅಭಿವ್ಯಕ್ತಿಸಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ನರ್ತಿಸುವ ಹೆಣ್ಣಿನ ಭಾವನಾತ್ಮಕ  ಸಂಬಂಧಗಳು  ಲೂಟಿಯಾಗುವುದರ ಚಿತ್ರಣ ಇಲ್ಲಿದೆ. ಕಾವ್ಯಮಯವಾದ ಮತ್ತು ಅಂತಃಕರಣ ಮುಟ್ಟುವ ಭಾಷೆ ಹಾಗೂ ಅನುಭವವನ್ನು ಶೋಧಿಸಿಕೊಳ್ಳುವ ವಿಶಿಷ್ಟ ರೀತಿ, ಓದುಗರಿಗೆ ಹೊಸ ಅನುಭವವನ್ನು ಕೃತಿ ಕಟ್ಟಿಕೊಡುತ್ತದೆ.

   ಕುಣಿಯೇ ಘುಮಾದ ನೃತ್ಯದ  ಸನ್ನಿವೇಶಗಳಲ್ಲಿ ಹೇಗೆ ಎಲ್ಲರೂ ಕುಣಿಯುತ್ತಲೇ ವೃತ್ತದ ಪರೀಧಿಯನ್ನು ದಾಟುವ ಪ್ರಯತ್ನ ಮಾಡುತ್ತಾರೋ, ಹಾಗೆ ದಾಟಲಾರದವರು ವೃತ್ತದ  ಸುತ್ತಲೂ  ಕುಣಿತ ಮುಂದುವರೆಸುವುದನ್ನು ಕಲಾತ್ಮಕವಾಗಿ ನಿರೂಪಿಸಿರುವ ಲೇಖಕಿ ಮಾಧವಿ ದೇಸಾಯಿಯವರೇ ಕುಣಿತದಲ್ಲಿನ ಅವಿಭಾಜ್ಯ ಪಾತ್ರವಾಗಿರುವುದನ್ನು ಓದುಗರು ಸುಲಭವಾಗಿ ಗುರುತಿಸಬಹುದು. ಎಲ್ಲರೂ ಆಕೆಯನ್ನು ತಮಗೆ ಬೇಕಾದಂತೆ ಕುಣಿಸುವವರೇ ಆಗಿದ್ದಾರೆ. ಆಕೆಯ ಶ್ರಮ-ನೋವು-ಒತ್ತಡ ವೈಫಲ್ಯ ಎಲ್ಲವೂ ಅರಣ್ಯರೋದನ. ಈ ಕೃತಿಯಲ್ಲಿ ಪಿತೃಪ್ರಧಾನ ವ್ಯವಸ್ಥೆಯ ಅತಿಭಯಂಕರ ಹಾಗೂ ಅಸಮಂಜಸವೆನಿಸುವ ಚಿತ್ರಣವಿದೆ. ಬಹುಗೊಂದಲದಿಂದ ಕೂಡಿದ ಸಾಂಸಾರಿಕ ಚಿತ್ರಣವೊಂದು ಎಲ್ಲ ವ್ಯವಸ್ಥೆಯನ್ನು ಪಲ್ಲಟಗೊಳಿಸುತ್ತಾ ಸಾಗುತ್ತಿದೆ. ಹಲವಾರು ಪಾತ್ರಗಳು ಒಂದಕ್ಕೊಂದು ಹೊಂದಿಕೆಯಾಗದೆ ವ್ಯವಸ್ಥೆಯ ಕರಾಳತೆಯನ್ನು ಕಾಣಿಸುತ್ತವೆ. ಕೆಲವೊಮ್ಮೆ ಹಾಸ್ಯ ಪ್ರಸಂಗಗಳು ನಗಿಸುವ ಬದಲು ಅಳಿಸಿಬಿಡುತ್ತವೆ.  

ಈ ಕೃತಿಯು ಮೂರು ಭಾಗಗಳಲ್ಲಿದೆ. ಮೊದಲನೆಯದು ‘ಜೀವನ - ಒಂದು ತಪೋವನ’. ಇದರಲ್ಲಿ ೧೧ ಅಧ್ಯಾಯವಿದೆ. ಎರಡನೆಯದು ‘ನಮ್ಮ ಗೋವಾ’. ಇದರಲ್ಲಿ ೭ ಅಧ್ಯಾಯವಿದೆ. ಮೂರನೆಯದು  ‘ಈ ಬಂಧ ರೇಶಿಮೆಯದು’. ಇದರಲ್ಲಿ ೧೬ ಅಧ್ಯಾಯಗಳಿವೆ. ಈ ಮೂರು ಭಾಗಗಳಲ್ಲಿ  ಬಾಲ್ಯ, ಯೌವ್ವನ ಮತ್ತು ನಡುಹರಯದಲ್ಲಿ ಲೇಖಕಿ ಅನುಭವಿಸಿದ  ನೋವು-ಸಾಧನೆ-ಅಪಮಾನ- ಸೋಲು-ಗೆಲುವು- ಹತಾಶೆ-ನೆಮ್ಮದಿ-ಸೆಣೆಸಾಟ ಹೀಗೆ ಹತ್ತು ಹಲವು ಸಂಗತಿಗಳನ್ನು ಅಚ್ಚುಕಟ್ಟಾಗಿ ಕಥಾರೂಪದಲ್ಲಿ ಹಿಡಿದಿಟ್ಟಿದ್ದಾರೆ.  ನಿರೂಪಣಾ ಶೈಲಿಯಿಂದಲೇ ಓದುಗರನ್ನು ಕೃತಿ ಆಕರ್ಷಿಸುವಂತೆ ಮಾಡಿದೆ.

ಮಾಧವಿಯವರ ಜೀವನದ ಆರಂಭದ ದಿನಗಳ ಕಷ್ಟ-ಸುಖಗಳ ನಿರೂಪಣೆಯಲ್ಲಿಯೇ ಭಾರತದ ಸ್ವಾತಂತ್ರ್ಯ ಗಳಿಸಿದ ಸಂದರ್ಭದ ಕಥೆಯೂ ಇದೆ. ನರೇಂದ್ರ ಕಾಟಕರ ಅವರೊಂದಿಗಿನ ಮದುವೆಯ ಆರಂಭದ ದಿನಗಳಲ್ಲಿ ಗೋವಾ ವಿಮೋಚನೆಗಾಗಿ ಹೋರಾಡಿ ಜೈಲಿಗೆ ಹೋದ ಘಟನೆಯೂ ಇದರಲ್ಲಿದೆ. ಅಯಾಚಿತ ಪ್ರೀತಿಯ ದರ್ಶನವೂ, ಮುಂದೆ ಮರಾಠಿಯ ಲೇಖಕ ಪದ್ಮಶ್ರೀ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ರಣಜಿತ ದೇಸಾಯಿಯವರೊಂದಿಗಿನ ಎರಡನೇ ಮದುವೆಯ ನಂತರದ ವರ್ಷಗಳಲ್ಲಿ ಮಾಧವಿ ಕೈಗೊಂಡ ಸಮಾಜ ಸುಧಾರಣಾ ಕಾರ್ಯ, ಸಾಹಿತ್ಯ ಸಮ್ಮೇಳನಗಳ ಸಂಘಟನೆ, ಕನಸಿನ ರಣಜಿತ ನಗರಿಯನ್ನು ಕಟ್ಟುವ ಪ್ರಯತ್ನ, ಗಂಡನಿಗಿಂತ ತುಸು ಹೆಚ್ಚು ಹೆಸರು ಮಾಡಿದ ಒಂದೇ ಕಾರಣಕ್ಕಾಗಿ ತಿರಸ್ಕಾರಕ್ಕೊಳಗಾಗಿ, ವಿಚ್ಛೇದನಗೊಂಡು ಮನೆಸೇರುವವರೆಗಿನ ಹಲವು ಸಂಕೀರ್ಣ ಸಂಬಂಧಗಳು ಮತ್ತು ಘಟನಾವಳಿಗಳ ನಿರರ್ಗಳ ನಿರೂಪಣೆ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.  

ಮಾಧವಿಯವರ ತಂದೆ ಭಾಲಾಜಿ ಪೆಂಡಾರಕರ ಚಿತ್ರರಂಗದ ಆರಂಭದ ದಿನಗಳಲ್ಲಿ ಸ್ಟುಡಿಯೋ ಕಟ್ಟಿ, ಚಿತ್ರ ನಿರ್ಮಾಣ ಮಾಡಿ, ರಂಗಭೂಮಿಯಲ್ಲಿ ದುಡಿದು ಮುಂದೆ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದವರು. ಅವರ  ಸ್ಟುಡಿಯೋದಲ್ಲಿಯೇ ಚಿತ್ರರಂಗದ ಹಲವು ದಿಗ್ಗಜರ ನಟನೆಯ ಚಿತ್ರೀಕರಣ ನಡೆದಿದ್ದನ್ನು ಮಾಧವಿ ಬಾಲ್ಯದಲ್ಲಿ ನೋಡಿದ್ದನ್ನು ವಿವರಿಸಿದ್ದಾರೆ.  ಮೊದಲ ಪತಿ ನರೇಂದ್ರ ಕಾಟಕರ್, ೧೪ ವರ್ಷ ಸಂಸಾರ ನಡೆಸಿದ ಎರಡನೆಯ ಪತಿ ರಣಜಿತ್ ದೇಸಾಯಿ ಇವರೆಲ್ಲರ ವಾಸ್ತವದ ಚಿತ್ರಣ ಇಲ್ಲಿದೆ.

 ಮೂವತ್ತೈದು ವರ್ಷಗಳ ಹಿಂದೆ ಪ್ರಕಟವಾಗಿ ಹಲವು ಪುರಸ್ಕಾರಗಳನ್ನು ಪಡೆದ ‘ಕುಣಿಯೇ ಘುಮಾ’ ದಲ್ಲಿ ನಿರೂಪಿತವಾಗಿರುವ ಮಹಿಳೆಯ ಪರಿಸ್ಥಿತಿ ಇಂದಿಗೂ ಈ ಸಮಾಜದಲ್ಲಿ ಮುಂದುವರೆಯುತ್ತಲೇ ಇದೆ. ಇಲ್ಲಿ ಘಟನೆಗಿಂತಲೂ ಸ್ತ್ರೀ ಜೀವನದ ನೋವು ಎಲ್ಲರನ್ನೂ ತಲುಪುವಂತಿದೆ.   

ಮರಾಠಿ ಸಾಹಿತ್ಯದಲ್ಲಿ ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಕೃತಿ ಜನ-ಮನ  ಗೆದ್ದಿದೆ.. ಕುವೆಂಪು ವಿಶ್ವವಿದ್ಯಾಲಯ ಬಿ ಎ ಮತ್ತು ಬಿಎಸ್ ಸಿಗೆ ಇದನ್ನು ಪಠ್ಯವನ್ನಾಗಿ ಮಾಡಿತ್ತು.  ಒಟ್ಟಿನಲ್ಲಿ ಅತ್ಯಂತ ಜನಪ್ರಿಯ ಆತ್ಮಕತೆಯ ಕೃತಿ ಇದು. 

Published by Dattatreya Hegde on march 21 2025

 ...........................


Comments

Popular posts from this blog