ಬದುಕಿನ ಗಾಣದಿಂದ ಇಳಿದ ಮಾತುಗಳ
‘ಮಧ್ಯಮಾವತಿ’



ಪುಸ್ತಕದ ಹೆಸರು- ಮಧ್ಯಮಾವತಿ

ಲೇಖಕರು- ಪೂರ್ಣಿಮಾ ಸುರೇಶ್

ಪ್ರಕಾರ- ಕವನ ಸಂಕಲನ

ಪ್ರಕಾಶಕರು-  ವಿಕಾಸ ಪ್ರಕಾಶನ, ಎಂ ಸಿ ಲೇಔಟ್,

 ವಿಜಯನಗರ, ಬೆಂಗಳೂರು- ೪೦

ಮೊಬೈಲ್- ೯೯೦೦೦೯೫೨೦೪

ಪುಟಗಳು-೧೩೪

ಬೆಲೆ- ೧೨೦/-


  ಪ್ರೀತಿ, ಪ್ರೇಮ ಮತ್ತು ಯುಗಾಂತರದಿಂದಲೂ ಕೇಳಿ ಬರುತ್ತಿರುವ ಹೆಣ್ಣಿನ ಯಾತನೆಗಳನ್ನು ವಿಶೇಷವಾಗಿ ತೆರೆದಿಡುವ  ಕವನ ಸಂಕಲನ ‘ಮಧ್ಯಮಾವತಿ’. ಪ್ರೌಢವಾಗಿ ಮತ್ತು ಕಾವ್ಯಾತ್ಮಕವಾಗಿರುವ ಇಲ್ಲಿನ ಕವನಗಳೆಲ್ಲ  ಓದುಗರನ್ನು ಸೂಜಿಗಲ್ಲಿನಂತೆ  ಸೆಳೆಯುತ್ತವೆ. ೪೬ ಕವನಗಳ ಈ ಗುಚ್ಛದಲ್ಲಿ ನವಿರಾದ, ಹಿತವಾದ ಸಾಲುಗಳಿವೆ. ಇದರ ಕರ್ತೃ ಪೂರ್ಣಿಮಾ ಸುರೇಶ್.

ಈ ಸಂಕಲನ ಕವಯತ್ರಿಯ  ಅಂತರಂಗದ ತರಂಗಗಳ ತುಮುಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕವಯತ್ರಿಯ ಸಫಲತೆಗೆ ಸಾಕ್ಷಿಯಾಗಿವೆ. ಕೆಲವು ಕವನಗಳಲ್ಲಿ  ನಿಗೂಢತೆಯಿದೆ. ಇನ್ನು ಕೆಲವು ಕವನಗಳಲ್ಲಿ ಸಮರ್ಪಣಾ ಭಾವವಿದೆ. ಮತ್ತೆ  ಕೆಲವು ಕವನಗಳಲ್ಲಿ ಮುಚ್ಚುವಿಕೆ ಬಿಚ್ಚುವಿಕೆಗಳೆರಡೂ ಇವೆ.  ಜೊತೆಗೆ ದೇವರಿದ್ದಾನೆ, ಪ್ರೇಮವಿದೆ, ಅವನಿದ್ದಾನೆ, ಅವಳಿದ್ದಾಳೆ, ಇವೆಲ್ಲವನ್ನೂ ವಿಶಿಷ್ಟವಾಗಿ ಅನಾವರಣ ಗೊಳಿಸಿರುವ ಕವಿಪ್ರತಿಭೆ ಪೂರ್ಣಿಮಾ ಅವರದ್ದು.  ಒಟ್ಟಿನಲ್ಲಿ ಅನನ್ಯ ರೀತಿಯಲ್ಲಿ  ಕವನ ಸಂಕಲನದ ಬಹುತೇಕ ಕವನಗಳು ತೆರೆದುಕೊಳ್ಳುತ್ತವೆ.  ಹೊಸಹೊಸ  ರೂಪಕಗಳ ಮೂಲಕ ಇಲ್ಲಿನ ಸಾಲುಗಳು ಸೆಳೆಯುತ್ತವೆ.

 ಪೂರ್ಣಿಮಾ ಉಡುಪಿ ಜಿಲ್ಲೆಯ ಹಿರಿಯಡ್ಕದವರು. ಕನ್ನಡ ಮತ್ತು ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ನಾಟಕಗಾರ್ತಿ ಮತ್ತು ಕಲಾವಿದೆ. ಅನೇಕ ಕಿರುತೆರೆ ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಕವನಗಳು ಈಗಷ್ಟೇ ತೇಯ್ದ ಶ್ರೀಗಂಧದ ಘಮವನ್ನು ಹೊಂದಿವೆ ಎಂದು ಕೃತಿಯ ಹಿನ್ನೋಟದಲ್ಲಿ ಬರೆಹಗಾರ್ತಿ ವೈದೇಹಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ

ಹೆಣ್ಣಿನ  ಕುರಿತಾಗಿ, ಅವಳ ಸಂಕಟ, ಅವಳು ಅನುಭವಿಸುವ ವೇದನೆಗಳ ಕುರಿತು  ಹೆಚ್ಚಿನ ಕವನಗಳಿವೆ. ‘ಹರಿದ ಚಪ್ಪಲಿ’ ಎಂಬ ಕವನದಲ್ಲಿ ಹೆಣ್ಣಿನ ಹರಿದ ಚಪ್ಪಲಿಯೊಂದು ರಸ್ತೆಯಲ್ಲಿ ಬಿದ್ದಿದೆ. ಮಳೆಯಲ್ಲಿ ನೆನೆದು ಚರ್ಮದ ವಾಸನೆ ಬರುತ್ತಿದೆ. ಆ ವಾಸನೆ ಹಿಡಿದು ನಾಯಿಯ ಹಿಂಡು ಬೆನ್ನಟ್ಟಿ ಬರುತ್ತಿದೆ ಎನ್ನುತ್ತಾರೆ. ರಸ್ತೆಯಲ್ಲಿ ಸಾಗುವ ಅನಾಥ  ಒಂಟಿ ಮಹಿಳೆಯ ಅಸಹಾಯಕ  ಸ್ಥಿತಿಯನ್ನು ಧ್ವನಿಪೂರ್ಣವಾಗಿ ಸಾರುವ ಕವನವಿದು.  

  ಧ್ವನಿಯಿರದ,  ಒಂಟಿ ಹಚ್ಚಡ/ ಅನಾಥ, ನಡುರಸ್ತೆಯಲ್ಲಿ / ರಸ್ತೆಯ ಕೊನೆಯಲ್ಲಿ ಓಡುತ್ತಿದೆ ಬಾಯಲ್ಲಿ/ ಚಪ್ಪಲಿ ಕಚ್ಚಿ ಹಿಡಿದ  ನಾಯಿಯೊಂದು/ತೊಗಲ ವಾಸನೆ ಹಿಡಿದ ನಾಯಿಗಳು/  ಬೆನ್ನಟ್ಟಿ ಬೊಗಳುತ್ತ.

. ‘ಮಾಯೆ’ ಎಂಬ ಕವನದಲ್ಲಿ  ನರನಾಡಿ ತುಂಬಿಕೊಂಡ ದೇವದಾಸಿ ಹುಡುಗಿಯನ್ನು ಕಿರಾಣಿ ಅಂಗಡಿಯವ, ತರಕಾರಿ ಮಾರಾಟ ಮಾಡುವವ, ಅರ್ಚಕ,  ಊರಿನ ಯಜಮಾನ, ಮೇಸ್ತ್ರಿ, ಎಲ್ಲರೂ ಹಸಿದ ಕಣ್ಣಲ್ಲೇ ಆಸೆಯ ಚಪ್ಪರವನ್ನು ಹೇಗೆ ಕಟ್ಟುತ್ತಾರೆನ್ನುವುದನ್ನು ರೂಪಕದ ಮೂಲಕ ಸಶಕ್ತವಾಗಿ  ಕಟ್ಟಿಕೊಡುತ್ತಾರೆ ಕವಯತ್ರಿ. 

ಇವರೆಲ್ಲರಿಗೂ ಬಲು ಬಿಡದ ಮಮತೆ/ಯಾವ ಇರುಳು ಬಿಡುವು?/ಅವಳೆದೆಗೆ ಚುಚ್ಚುವವು ಸೂಜಿಗಳು..

 ‘ಓ ಅವನೇ’ ಎಂಬಲ್ಲಿ ಅವನನ್ನು ಇಷ್ಟಪಟ್ಟಿದ್ದೆ. ಅವನಿಗೆ ಪ್ರೀತಿ ಬೆಳೆಸುವ ಕಲೆ ಗೊತ್ತಿಲ್ಲ. ಗೊತ್ತಿದ್ದರೆ ಮಲ್ಲಿಗೆಯ ಚೆಂಡನ್ನೇ  ಬಾಲ್ಯದಿಂದಲೇ ಬಿಡಿಸುತ್ತಿದ್ದ.  ಯೋಗಿಯಂತಿದ್ದಾನೆ. ಕಣ್ಣು ಕೂಡಿಸದೆ ನನ್ನೊಳಗೆ ಆತ ತುಂಬಿಕೊಂಡಿದ್ದಾನೆ.  ನಾನು ಮಾತ್ರ ಪುಳಕಗೊಂಡಿದ್ದೇನೆ ಎಂದು ವಿವರಿಸುತ್ತಾರೆ

ಮಧ್ಯಮಾವತಿ’ ಯಲ್ಲಿ ಮಹಿಳೆಯನ್ನು ವೇಶ್ಯೆಯನ್ನಾಗಿ ಕಾಣುವ ಬಗೆಯನ್ನು ಚಿತ್ರಿಸಿದ್ದಾರೆ. ಒಬ್ಬನು ನನ್ನವಳು ಎನ್ನುತ್ತಾ ಅವಳಿಗೆ ಸಿಹಿ ಆಸೆ ತೋರಿಸಿ ಒಳಗೆ ಬಾ ಎನ್ನುವುದು, ಮತ್ತೊಬ್ಬ ನನ್ನವಳು ಎನ್ನುವುದು, ಇಬ್ಬರ ಜಗಳದಲ್ಲಿ ಸೋಲುತ್ತದೆ ಜೀವ. ಮುಟ್ಟುವುದು, ನೇವರಿಸುವುದು, ತಾ ಮೊದಲು- ನಾ ಮೊದಲು  ಎನ್ನುವುದು ಅವಳಿಗಾಗಿ ಕಾಯುವುದನ್ನು ಹೇಳುತ್ತ ಎರಡು ಧ್ರುವಗಳ ನಡುವೆ ಅವಳು ‘ಮಧ್ಯಮಾವತಿ’ ಯಾಗಿದ್ದಾಳೆ  ಎಂದು ವಿಷಾದದಿಂದ ಉಸುರುತ್ತಾರೆ.  

‘ಕಳ್ಳ ಬೆಕ್ಕು ಎನ್ನುವುದು ವಿಶಿಷ್ಟ ಕವಿತೆ. ಸಿಕ್ಕ ಮನೆಗೆ ನುಗ್ಗಿ ಪಟಾಯಿಸುವುದು, ಮನೆಯೊಡತಿಗೆ ಗಾಯ ಮಾಡುವುದು, ತಾನು ಎಲ್ಲಿಂದಲೋ ಗಾಯ ಮಾಡಿಕೊಂಡು ಬರುವುದು, ಹರಿತವಾದ ನಖಗಳು, ಹಾವಿನಂತಹ ಬಾಲ,  ಈ ರೀತಿಯ ಬೆಕ್ಕು ವಾರದ ನಂತರ ಕೆರೆಯ ದಂಡೆಯ ಮೇಲೆ ತಪಸ್ವಿಯಂತೆ ಕುಳಿತಿದೆ ಎಂದು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ. ಕಪಟ ಮಾರ್ಜಾಲವನ್ನು ನಿಷ್ಕಪಟಿಯನ್ನಾಗಿ ಇಲ್ಲಿ ರೂಪಿಸಿದ್ದಾರೆ. 

‘ಋತು’ ಎಂಬ ಇನ್ನೊಂದು ಕವನ ಗಂಭೀರ ಚಿಂತನೆಯದ್ದಾಗಿದೆ. ಇಲ್ಲಿ ಸ್ತ್ರೀಸಹಜವಾದ ಋತುಸ್ರಾವ, ಸನಾತನ ಕಾಲದಿಂದ ಅನುಭವಿಸಿಕೊಂಡು ಬಂದಿರುವ ಮೌನಕ್ಕೆ , ನೋವಿಗೆ ಧ್ವನಿ ನೀಡಿದ್ದಾರೆ. ಈ ನೋವನ್ನು ವಿವರಿಸುವುದು ಸುಲಭವಲ್ಲ. ಸೋಲಿನಲ್ಲಿ ಅದರ ಯಶಸ್ಸು ಇದೆ. ಕತ್ತಲು -ಬೆಳಕಿನ ಮಿಶ್ರ ಸ್ಥಿತಿ ಇದು ಎನ್ನುವುದನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ.

‘ಕೋಣೆಗೆ ನುಗ್ಗಿದ ನೊಣ’ ಎಂಬ ಕವನವೂ ವಿಶಿಷ್ಟ ಎನಿಸುತ್ತದೆ.  ಮನೆಯ ಮಲಗುವ ಕೋಣೆಗೆ ನೊಣವೊಂದು ನುಗ್ಗಿದೆ. ಒಂದು ಯಕಃಶ್ಚಿತ್ ನೊಣವದು.  ಅದರ ನಡೆಗೆ ಕವಯತ್ರಿ  ಸಿಡಿಮಿಡಿಗೊಳ್ಳುತ್ತಾರೆ. ಖಾಸಗಿತನಕ್ಕೆ  ಲಗ್ಗೆ ಇಟ್ಟಿದೆ,  ಮುಖ ಸುತ್ತಿ ಮುತ್ತಿಕ್ಕುತ್ತಿದೆ. ಪುರುಷರ ಸ್ವರವಿದೆ. ದಿಂಬಿನ ಕಂಪು ಮೂಸಿ ಹಾರಾಡುತ್ತಿದೆ ಎನ್ನುತ್ತಾ, ಗತಿ ಬದಲಿಸುವ ನೊಣವೊಂದು/ಕತ್ತಲಲ್ಲಿ ಕಣ್ಣುಮುಚ್ಚಾಲೆ/ ಆಡುತ್ತಿದೆ ಎನ್ನುತ್ತಾರೆ. ಇನ್ಯಾರದ್ದೋ ಕುರಿತು ತನ್ನಾಳದಲ್ಲಿ ನೆಲೆಯೂರಿರುವ ಕೆಟ್ಟವಿಚಾರದ ಪ್ರತೀಕವೇ ಈ ನೊಣ ಎಂದು ಕವಯತ್ರಿ ಮಾರ್ಮಿಕವಾಗಿ  ಯೋಚಿಸುತ್ತಾರೆ.

 ‘ಗೀಳು’ ಕವನದಲ್ಲಿ ಓದುಗರ ಮನದ ಬಾಗಿಲಲ್ಲಿ ಸಾಕಷ್ಟು ವಿಚಾರ ಬರುತ್ತದೆ, ಹೋಗುತ್ತದೆ. ಅದನ್ನು ತಡೆಯುವುದು ಹೇಗೆ ಎಂದು ಪ್ರಶ್ನಿಸುತ್ತ, ಬಾಗಿಲು ಭದ್ರವಾಗಿದ್ದರೂ ಮನಸ್ಸು ನಮ್ಮದಾಗಿದೆ. ಬಾಗಿಲು ಇದ್ದರೂ ಚಿಂತೆ, ಇಲ್ಲದಿದ್ದರೂ ಚಿಂತೆ. ತೆರೆದುಕೊಳ್ಳುವಿಕೆ ಮತ್ತು ಮುಚ್ಚುವಿಕೆಯಿಂದಲೇ ಮನುಷ್ಯನ ಜೀವನ ಎನ್ನುತ್ತಾರೆ.  ಯಾರೋ ಅಡಗಿರುವಂತೆ/ ಇಲ್ಲ ಹಾಗೆ ಹೊರಹೋದಂತೆ/ ಅವರು ಹೊರಹೋದರೇ/ ಒಳಗೆ ಇರುವರೇ/ ಮತ್ತೆ ಬಾಗಿಲನ್ನೇನು ಮಾಡಲಿ? ಎನ್ನುವುದೇ ದೊಡ್ಡ ಚಿಂತೆಯಾಗಿ ಕಾಡುತ್ತದೆ.

ಕಳೆದುಹೋದ ಮೊಬೈಲ್ ಅಚಾನಕ್ ಸಿಕ್ಕಿದಾಗ ಆಗುವ ಸಂತೋಷವನ್ನು ವರ್ಣಿಸುತ್ತಾ ಬದುಕಿಗೆ ಹೊಸತೊಂದು ಅರ್ಥ ದೊರಕಿದಂತಾಗಿದೆ, ಜಾತ್ರೆಯಲ್ಲಿ ಕಳೆದುಹೋದ ಹಸುಳೆ ಸಿಕ್ಕಂತಾಗಿದೆ ಎಂದು ‘ಮೊಬೈಲಾಯಣ’ ಎಂಬ ಕವಿತೆಯಲ್ಲಿ ಅದರ ಆಪ್ತತೆಯನ್ನು  ವರ್ಣಿಸುತ್ತಾರೆ.

ಹೀಗೆ ರೂಪಕಪ್ರಿಯೆ ಕವಯತ್ರಿ ಸರಳ, ಸುಲಭ ಭಾಷೆಯಿಂದ ಓದುಗರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Published on 20 march 20205 by Dattatreya Hegde


Comments

Popular posts from this blog