ಲವಲವಿಕೆಯ ಕಥೆಯ
‘ಎತ್ತಿನಗಾಡಿ ಎಕ್ಸ್‌ಪ್ರೆಸ್’
ಕೃತಿಯ ಹೆಸರು -‘ಎತ್ತಿನಗಾಡಿ ಎಕ್ಸ್‌ಪ್ರೆಸ್’
ಪ್ರಕಾರ- ಹಾಸ್ಯಕಥಾ ಸಂಕಲನ
ಲೇಖಕಿ- ವಿನಿಶಾ ರಿನಿ
ಪುಟಗಳು- ೧೬೮
ಬೆಲೆ- ೧೨೦-/-
ಪ್ರಕಾಶಕರು- ಗೀತಾಂಜಲಿ ಪುಸ್ತಕ ಪ್ರಕಾಶನ,
ರಾಜೇಂದ್ರನಗರ, ಶಿವಮೊಗ್ಗ -೦೧
ಪ್ರೀತಿ ಹಾಗೂ ತುಂಟತನಗಳಿಂದ ಕೂಡಿದ, ಕುತೂಹಲ ಮತ್ತು ಎಡವಟ್ಟುಗಳ ಜೊತೆ ಬದುಕನ್ನು ಸಂಭ್ರಮಿಸುವ, ಮನುಷ್ಯನ ಅಂಕುಡೊಂಕುಗಳ ಕುರಿತು ಮತ್ತು ಫಜೀತಿಯ ಪ್ರಸಂಗಗಳನ್ನು ವಿವರಿಸುವ ಹಾಸ್ಯಮಯ ಕೃತಿಯೇ ‘ಎತ್ತಿನಗಾಡಿ ಎಕ್ಸ್‌ಪ್ರೆಸ್’. ಕೃತಿಯ ಹೆಸರೇ ಹೇಳುವಂತೆ ಇದು ಹಾಸ್ಯದ ಕುರಿತಾದದ್ದು. ತಿಳಿನಗೆಯನ್ನು, ಜೀವನ ಉಲ್ಲಾಸವನ್ನು, ಖುಷಿ ಕೊಡುವ ಸಂದರ್ಭಗಳನ್ನು ಇಲ್ಲಿ ಲೇಖಕಿ ಇಲ್ಲಿ ಸೆರೆಹಿಡಿದಿದ್ದಾರೆ. ಓದುಗರನ್ನು ಸೆಳೆಯುವ ಜೊತೆಗೆ ಎಡೆಬಿಡದೆ ಓದಿಸಿಕೊಂಡು ಹೋಗುವ ಗುಣದ ಕಿರುಕಥೆಗಳು ಇಲ್ಲಿವೆ. ಇದರಿಂದಾಗಿ ಪುಸ್ತಕವನ್ನು ಕೈಗೆತ್ತಿಕೊಂಡರೆ ಏಕಕಂತಿನಲ್ಲಿ ಓದಿ ಮುಗಿಸುವ ಆಸಕ್ತಿ ಮೂಡುತ್ತದೆ.
ಈ ಕೃತಿಯ ಲೇಖಕಿ ವಿನಿಶಾ ರಿನಿ. ಇವರು ತೀರ್ಥಹಳ್ಳಿಯವರು. ಇದು ಅವರ ಚೊಚ್ಚಲ ಕೃತಿಯೂ ಹೌದು.
ಕೃತಿಯ ವಿಶೇಷತೆ ಎಂದರೆ, ಇಲ್ಲಿನ ಬರಹಗಳು ಪ್ರಾದೇಶಿಕ ಭಾಷೆ ಮತ್ತು ಆಡುಮಾತಿನಲ್ಲಿವೆ. ಇದು ನಮ್ಮ ಮನೆ, ಹಿತ್ತಲಿನ ಭಾಷೆ ಎನ್ನಬಹುದು. ಮಲೆನಾಡು ಭಾಗದವರಿಗೆ ಇದು ಅಷ್ಟೇನು ಕಷ್ಟವಾಗಲಾರದು. ಆದರೆ ಇತರೆ ಭಾಗದವರಿಗೆ ಕಷ್ಟವಾಗುತ್ತದೆ. ಜೊತೆಗೆ ಇಲ್ಲಿ ಬಳಸಲಾದ ಶಬ್ದಗಳೂ ಸಹ ಅರ್ಥವಾಗುವುದು ಕಷ್ಟ. ಇಲ್ಲಿಯ ಪದಗಳು ಬಳಕೆ, ಧ್ವನಿಯ ಏರಿಳಿತದಿಂದ ವಿಶಿಷ್ಟವೆನಿಸುತ್ತವೆ. ವಿಶಿಷ್ಟ ಶೈಲಿಯಿಂದ ಕೂಡಿರುವ ಈ ಕೃತಿಯಲ್ಲಿ ಉದ್ದಕ್ಕೂ ಗಮನಸೆಳೆಯುವುದು ಲೇಖಕಿಯು ಸುತ್ತಲಿನ ಜಗತ್ತಿಗೆ ತೆರೆದುಕೊಂಡಿರುವುದು. ಬರಹಗಳಲ್ಲಿ ಪ್ರೀತಿ, ರೋಮಾನ್ಸ್, ಮೊಬೈಲ್, ಅಜ್ಜ -ಅಜ್ಜಿಯರು, ಸಂಬಂಧಿಗಳು, ಮೇಷ್ಟ್ರು, ಹುಡುಗಾಟದ ವಿದ್ಯಾರ್ಥಿಗಳು, ಹಳ್ಳಿಯ ಜೀವನ ಮೊದಲಾದವು ಬರುತ್ತವೆ.
ಇಲ್ಲಿನ ಕಥೆಗಳೆಲ್ಲ ತುಂಬಾ ಕುತೂಹಲಕಾರಿಯಾಗಿವೆ, ರೋಚಕವಾಗಿವೆ. ಏಕೆಂದರೆ ಹಳ್ಳಿಗರ ನೋವು, ನಲಿವು, ಜೀವನ ವಿಧಾನಗಳಿಗೆ ಲೇಖಕಿ ಸ್ಪಂದಿಸಿದ್ದಾರೆ. ಜೊತೆಗೆ ಬರಹ ಹಾಸ್ಯಮಯವಾಗಿ ಕಚಗುಳಿ ಇಡುತ್ತದೆ. ಕೆಲವು ಇಂಗ್ಲಿಷ್ ಶಬ್ದಗಳನ್ನು ಹಳ್ಳಿಯವರು ಮಾತನಾಡುವಾಗ ಅವು ಅಪಾರ್ಥವಾಗುವುದನ್ನು ಸುಂದರವಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಅವು ಎಂತಹವರನ್ನೂ ನಗುವಿನಲ್ಲಿ ಮುಳುಗಿಸುತ್ತವೆ. ಗ್ರಾಮ್ಯ ಭಾಷೆಯ ಸೊಗಡಲ್ಲಿ ಸುಂದರವಾಗಿ ಕತೆ ಹೆಣೆಯುವ ಕೌಶಲ್ಯ ಲೇಖಕಿಯಲ್ಲಿ ಕಂಡುಬರುತ್ತದೆ. ಜೊತೆಗೆ ಈ ಕಥಯಲ್ಲಿ ಬರುವ ಸಂದರ್ಭವನ್ನು ಬಹುತೇಕರು ಅನುಭವಿಸಿರುವುದರಿಂದ, ಕಂಡಿರುವುದರಿಂದ ಅಥವಾ ಕೇಳಿರುವುದರಿಂದ ಇನ್ನಷ್ಟು ಆಪ್ತವಾಗುತ್ತದೆ.
ಒಟ್ಟು ೫೦ ಕಥೆಗಳನ್ನು ಒಳಗೊಂಡಿರುವ ಈ ಕೃತಿಯ ಬಹುತೇಕ ಕಥೆಗಳು ಲಘುಹಾಸ್ಯದಲ್ಲಿವೆ. ಅವರ ಹುಟ್ಟಿದ ಊರಿನ, ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಈ ಕಥೆಗಳು ಜನ್ಮ ಕಳೆದಿವೆ. ಇಲ್ಲಿ ಬರುವ ಊರುಗಳು ಮತ್ತು ಪಾತ್ರದ ಹೆಸರುಗಳು ಆ ಭಾಗದವೇ ಆಗಿವೆ. ಇದರ ಜೊತೆಗೆ ಮುಸಲ್ಮಾನರ ಉರ್ದು, ಮಲಯಾಳಿ ಭಾಷೆ ಸಹ ಕಥೆಯಲ್ಲಿ ತೂರಿಕೊಂಡಿದೆ. ಒಟ್ಟಿನಲ್ಲಿ, ಈ ಕೃತಿಯು ಒಂದು ಹೊಸ ಲೋಕವನ್ನು ತೆರೆದಿಟ್ಟಿದೆ. ಸಮಾಜದಲ್ಲಿನ ಡೊಂಕುಗಳು ನಮ್ಮ ಕಣ್ಣೆದುರು ಬರುತ್ತವೆ.
‘ಅನಾಮಿಕ ಪ್ರೇಮ’ ಎಂಬ ಕಥೆಯಲ್ಲಿ ಈಗಿನ ತಲೆಮಾರಿನ ಹುಡುಗನಿರಲಿ- ಹುಡುಗಿ ಇರಲಿ ಮೊಬೈಲ್‌ನಲ್ಲಿ ಲವ್ ಮಾಡುವುದು, ಒಬ್ಬರಿಗೊಬ್ಬರು ಮುಖವನ್ನು ನೋಡದೆ, ಅವರ ಗುಣ- ವರ್ತನೆಗಳಿಗೆ ಬೆಲೆ ಕೊಡದೆ ಪ್ರೀತಿ ಮಾಡಿ ಮದುವೆಯಾದ ಮೇಲೆ ಎರಡು ದಿನಕ್ಕೆ ವಿಚ್ಛೇದನ ಮಾಡಿಕೊಳ್ಳುತ್ತಾರೆ. ಇಡಿ ದಿನ ಮೊಬೈಲ್ನಲ್ಲಿ ಬಿದ್ದಿರುತ್ತಾರೆ. ಯಾವುದನ್ನೂ ಯೋಚನೆ ಮಾಡದೆ ಹಳ್ಳಕ್ಕೆ ಬೀಳುತ್ತಿದ್ದಾರೆ ಎನ್ನುವ ಸಂದೇಶವನ್ನು ಸಾರಿದ್ದಾರೆ. ‘ಮಲೆನಾಡಾಗೆ ಮಂಗನ
ಕಾಟ’ ದಲ್ಲಿ ರಸ್ತೆ, ಶಾಲೆ, ಕಾಲೇಜು, ಎಲ್ಲೆಡೆ ಮಂಗನ ಕಾಟ ಮಿತಿಮೀರಿದೆ. ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಹೋಗುತ್ತಿರುವ ಸತ್ಯವನ್ನು ಬಿಚ್ಚಿಡುತ್ತಾ, ಕಥೆಯ ಅಂತ್ಯದಲ್ಲಿ ಪ್ರವಾಸಿ ಸ್ಥಳದಲ್ಲಿ, ನದಿಯಲ್ಲಿ ಸ್ನಾನ ಮಾಡುವಾಗ ಬಿಚ್ಚಿಟ್ಟ ಬಟ್ಟೆಯನ್ನೂ ಬಿಡದೆ ಒಯ್ಯುತ್ತಿವೆ. ಇದರಿಂದ ಸ್ನಾನಕ್ಕಿಳಿದವರು ಬರೇ ಚಡ್ಡಿಯಲ್ಲಿ ಊರಿಗೆ ಮರಳಬೇಕಾದ ಸ್ಥಿತಿ ಇದೆ ಎಂಬ ನೈಜತೆಗೆ ಹಾಸ್ಯ ಲೇಪಿಸಿದ್ದಾರೆ.
ಇಂಗ್ಲಿಷ್ ಶಬ್ದಗಳು ಹೇಗೆ ಅನಕ್ಷರಸ್ಥ ಗ್ರಾಮಸ್ಥರ ಬಾಯಲ್ಲಿ ವಿವಿಧ ಅನರ್ಥಗಳಿಗೆ ಕಾರಣವಾಗುತ್ತವೆ ಎನ್ನುವುದನ್ನು ‘೩೦ ರೂಪೈ ಕರೆಂಟ್’ ಎಂಬ ಕಥೆಯಲ್ಲಿ ಕರೆನ್ಸಿ ಎನ್ನುವ ಬದಲು ಅಜ್ಜಿ ಕರೆಂಟ್ ಎನ್ನುವುದು, ‘ಮುನೀರನ ಪೋಲಿಟೇಷನ್ ಪ್ರಸಂಗ’ದಲ್ಲೂ, ‘ಪುಟ್ ಮುದುಕಿಯ ಲವ್ ಪೀಪಿ’ಯಲ್ಲೂ ಸೊಗಸಾಗಿ ವರ್ಣಿಸಿದ್ದಾರೆ. ಪೊಲೀಸ್ ಸ್ಟೇಶನ್ನನ್ನು ಪೋಲಿಟೇಶನ್ ಎಂದೂ, ಲೋ ಬಿಪಿಯನ್ನು ಲವ್ ಪೀಪಿ , ಐಸಿಯುಗೆ ದಾಖಲಿಸಿದ್ದರು ಎನ್ನುವುದನ್ನು ಐಸ್‌ಗೆ ಹಾಕಿದ್ದರು ಎಂದು ಹೇಳುವ ಮೂಲಕ ನಗೆಯುಕ್ಕಿ ಬರುವಂತೆ ಮಾಡಿದ್ದಾರೆ.
‘ಗಂಗಿ ಚಿಗವ್ವಳ ಹಾತ್ಮಅತ್ಯೆ’ ಯಲ್ಲಿ ಉಂಡು ಹೋದ ಕೊಂಡು ಹೋದ ಎಂಬ ಗಾದೆ ಮಾತನ್ನು ನೆನಪಿಸುತ್ತ, ಮನೆಗೆ ಬಂದು ಹೊರಗಡೆ ಮಲಗಿದ್ದ ಚಿಗವ್ವ ರಾತ್ರಿ ಹೊತ್ತು ಹೊರಗಿದ್ದ ಎರಡು ಚೀಲ ರಾಗಿ, ಚಪ್ಪಲಿ, ಬಟ್ಟೆ ಮತ್ತು ಇತರ ವಸ್ತುಗಳನ್ನು ರಾತ್ರಿ ಆಟೊದಲ್ಲಿ ಹಾಕಿಕೊಂಡು ಪರಾರಿಯಾದುದನ್ನು ವಿವರಿಸಿದ್ದಾರೆ. ‘ಹಫೀಜ ಎಂಬ ಗೆಳೆಯ’ ನ ಕಥೆ ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬಂದು ತಲೆಹರಟೆ ಮಾಡುವ ಬಾಲಕನ ಬಗ್ಗೆ ಇದೆ. ‘ಥಾಮಸಣ್ಣನ ಮರ್ಡರ್ ಮಿಸ್ಟ್ರಿ’ಯಲ್ಲಿ ಸತ್ತುಹೋದ ಮುದುಕಿಯನ್ನು ಹೂಳಲು ಜೀಪ್‌ನಲ್ಲಿ ಒಯ್ಯುವಾಗ ಆಕೆಯ ಶವ ಬಿದ್ದು ಹೋಗುತ್ತದೆ. ಮತ್ತೆ ಎತ್ತಿಕೊಂಡು ಹೋಗಿ ಹೂತು ಬರುತ್ತಾರೆ. ಆದರೆ ವಾಪಸ್ ಮನೆಗೆ ಬಂದಾಗ ಅದೇ ಮುದುಕಿ ಕಂಡುಬರುತ್ತಾಳೆ. ಇದು ಹೇಗೆ ಸಾಧ್ಯ ಎನ್ನುತ್ತಾ ಇದೊಂದು ನಿಗೂಢ ರಹಸ್ಯ ಎಂದು ಲೇಖಕಿ ವಿವರಿಸುತ್ತಾರೆ.
‘ಅತಿಥಿ ಸತ್ಕಾರ’ದಲ್ಲಿ ಗೆಳೆಯರು ಬೇಡವೆಂದರೂ ಅತಿಥಿ ಬಿಲ್ ಕೊಡುವುದು, ಆ ಹಣವನ್ನು ವಾಪಸ್ ಕೊಡಲು ಹೋದಾಗ ಆತ ಪಡೆಯದೆ ಓಡಿಹೋಗುವುದು, ಆತನನ್ನು ಹಿಡಿಯಿರಿ ಎಂದು ದಾರಿಹೋಕರಿಗೆ ಹೇಳಿದಾಗ ಹಿಡಿದು ಕಳ್ಳ ಎಂದು ಭಾವಿಸಿ ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಎಡವಟ್ಟುತನದ ಘಟನೆ ಚಂದವಾಗಿ ನಿರೂಪಿತವಾಗಿದೆ. ‘ಚಪ್ಪಲಿ ಖರೀದಿ’ ಯಲ್ಲಿ ಅಂಗಡಿಗೆಯಲ್ಲಿ ಖರೀದಿಸಿದ ಬಾಕ್ಸನಲ್ಲಿದ್ದುದು ಒಂದೇ ಕಾಲಿನ ಚಪ್ಪಲಿಗಳಾಗಿರುವುದು, ‘ಮೇಷ್ಟ್ರ ಕ್ಯಟ್ ಕ್ಯಟ್ ವಿಚಾರ’ದಲ್ಲಿ ವಿದ್ಯಾರ್ಥಿಗಳ ಹುಡುಗಾಟ, ಮೇಷ್ಟ್ರನ್ನು ಅವರದೇ ಮಾತಿನಿಂದ ಚುಡಾಯಿಸುವುದನ್ನು ಸೊಗಸಾಗಿ ವರ್ಣಿಸಿದ್ದಾರೆ.
ಬುಡ ಬಿಡ್ಸ ಮೆಸೀನ್ ತಂದಿದೀವಿ, ಕೋಳಿ ರೇಟು ಕುಸಿತ, ಅಪರಾಧ ತಡೆ ಮಾಸಾಚರಣೆ, ಬೀಗ ಪುರಾಣ, ಹಂದಿ ಜ್ವರ ಬಂದಿದೆಯಂತೆ, ಗೌರಕ್ಕ ಕೊಟ್ಟ ಬಾಸೆ, ಸದ್ದಾಮನ ಟಿಂಗ್ ಟಂಗ್ ಟಿಂಗ ಪ್ರಸಂಗ, ಉಲ್ಟಾ ಪಲ್ಟಾ ಮೊದಲಾದ ಕತೆಗಳು ಮನಸೆಳೆಯುತ್ತವೆ.
ಈ ಕೃತಿಯ ಶೀರ್ಷಿಕೆ ‘ಎತ್ತಿನಗಾಡಿ ಎಕ್ಸ್‌ಪ್ರೆಸ್’ ಎಂಬ ಕಥೆಯಲ್ಲಿ ಪಾರ್ಸೆಲ್ ಆಫೀಸಿನವರಿಗೆ ಗಾಡಿಯಲ್ಲಿ ಪಾರ್ಸೆಲ್ ಹಾಕಿ ಮನೆಗೆ ಕಳಿಸಿ ಎಂದದ್ದನ್ನು ತಪ್ಪಾಗಿ ತಿಳಿದುಕೊಂಡು ಎತ್ತಿನ ಗಾಡಿ ಹುಡುಕಿ ಪಾರ್ಸೆಲ್ ಕಳುಹಿಸಿದ್ದು, ಪಾರ್ಸೆಲ್‌ನಲ್ಲಿದ್ದ ಪಿಂಗಾಣಿ ಪಾತ್ರೆಗಳೆಲ್ಲ ಒಡೆದು ಚೂರಾಗಿದ್ದು, ಮದುವೆಗೆ ಉಡುಗೊರೆ ಕೊಡುವ ಪಾರ್ಸೆಲ್ ಮದುವೆ ಮುಗಿದ ನಂತರ ಬಂದ ಬಗ್ಗೆ ರೋಚಕವಾಗಿ ಬರೆದಿದ್ದಾರೆ. ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ’ ಎನ್ನುವಲ್ಲಿ ಉಚಿತವಾಗಿ ಕಂಪನಿಗಳು ಕೊಡುವ ವಸ್ತುವನ್ನು ಸಂಬಂಧಿತರಿಗೆ ತಲುಪಿಸದೆ ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ವಿವರಿಸಿದ್ದಾರೆ.
ಈ ಕಥೆಗಳನ್ನು ಓದುವುದಕ್ಕಿಂತ ಕಿವಿಯಿಂದ ಕೇಳುವುದಕ್ಕೆ ಇಷ್ಟವಾಗುತ್ತದೆ. ಆಗ ಅದರ ಸೊಲ್ಲು, ಸಜೀವ ಮೂರ್ತತೆ ಅನುಭವಕ್ಕೆ ಬರುತ್ತದೆ ಎಂದು ಕೃತಿಗೆ ಬೆನ್ನುಡಿ ಬರೆದ ಪ್ರೊ. ರಾಜೇಂದ್ರ ಚೆನ್ನಿ ಹೇಳಿದ್ದಾರೆ.
ಒಟ್ಟಿನಲ್ಲಿ, ಕೃತಿಯು ಲವಲವಿಕೆಯಿಂದ ಕೂಡಿದೆ. ಭಾಷೆಯ ವಿಶಿಷ್ಟ ಸೊಗಡು ಇಲ್ಲಿ ಘಮಘಮಿಸಿದೆ. ಕಥೆಯ ಮೂಲಕ ಅದರ ಸೌಂದರ್ಯ ತೋರಿಸಿದೆ.
Published by DATTATREYA M. HEGDe on 17 -3-2025
.........................

Comments
Post a Comment