ಮಕ್ಕಳ ಹೃದಯಕ್ಕೆ ನಾಟುವ

‘ಮುತ್ತಳ್ಳಿಯ ಅಜ್ಜಿ ಕಥೆಗಳು’


ಪುಸ್ತಕದ ಹೆಸರು-  ಮುತ್ತಳ್ಳಿಯ ಅಜ್ಜಿ ಕಥೆಗಳು

ಲೇಖಕರು- ಮತ್ತ್ತೂರು ಸುಬ್ಬಣ್ಣ

ಪ್ರಕಾರ- ಮಕ್ಕಳ ಕಥೆ

ಪ್ರಕಾಶಕರು- ಅನು ಪ್ರಕಾಶನ, ಸಹಕಾರನಗರ,

ಬೆಂಗಳೂರು- ೯೨

ಪುಟಗಳು- ೧೧೩

ಬೆಲೆ- ೧೦೦/-


ಅನೇಕ ಮುತ್ತುಗಳನ್ನು ಸೇರಿಸಿ ಹೆಣೆದ ಸುಂದರವಾದ ಮಕ್ಕಳ ಕಥಾ ಸಂಕಲನ ‘ಮುತ್ತಳ್ಳಿಯ ಅಜ್ಜಿ ಕಥೆಗಳು’.  ಮತ್ತೂರು ಸುಬ್ಬಣ್ಣ ಎಂದೇ ಖ್ಯಾತರಾದ ಮತ್ತೂರು ಬಾಲಸುಬ್ರಹ್ಮಣ್ಯ ಇದರ ಕರ್ತೃ. ಬೆಂಗಳೂರಿನಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದ ಮತ್ತೂರು ಸುಬ್ಬಣ್ಣ ಮಕ್ಕಳ ಕಥೆಗಾರರು ಎಂದೇ ಪ್ರಸಿದ್ಧಿ.  ಮಕ್ಕಳ ಅನೇಕ ಕಥಾ ಸಂಕಲನವನ್ನು ಇವರು ಪ್ರಕಟಿಸಿದ್ದಾರೆ.

ಮಕ್ಕಳ  ಜ್ಞಾನ, ಕಲ್ಪನಾ ಶಕ್ತಿ, ಮನರಂಜನೆ,  ನೀತಿ ಬೋಧನೆ ಹೀಗೆ ಹತ್ತಾರು ಆಯಾಮದಿಂದ ಮಕ್ಕಳ ಕಥೆ ರಚಿಸಬೇಕಾಗುತ್ತದೆ. ಇದರಲ್ಲಿ ಸಿದ್ಧಹಸ್ತರಾಗಿರುವ ಲೇಖಕರು, ಸ್ವಸ್ಥ ಸಮಾಜದ ಅಡಿಪಾಯವಾಗುವ ವ್ಯಕ್ತಿತ್ವ ನಿರ್ಮಾಣ ಮತ್ತು  ಅನೇಕ ಮೌಲ್ಯಗಳನ್ನು ಕಾಪಾಡುವ ಬಗೆಯನ್ನು ಗಮನಿಸಿ  ಗ್ರಾಮೀಣ ಭಾಗದ ವಿಷಯಗಳನ್ನು ಮಕ್ಕಳು ಅರಿಯಲು ಅನುಕೂಲವಾಗುವಂತೆ ನವಿರಾದ ಹಾಸ್ಯ ಲೇಪನೊಂದಿಗೆ ಇಲ್ಲಿ ಕಥೆ ನೇಯ್ದಿದ್ದಾರೆ.    

  ‘ಮುತ್ತಳ್ಳಿಯ ಅಜ್ಜಿ ಕಥೆಗಳು’ ಕೃತಿಯು ಮಕ್ಕಳಿಗೆ ಸಹಜವಾಗಿ ಇಷ್ಟವಾಗುವ ಸಾಹಸ, ಸ್ನೇಹ, ರಂಜನೆ, ಬಾಂಧವ್ಯ ಎಲ್ಲವನ್ನೂ ಸಮಪ್ರಮಾಣದಲ್ಲಿ ಹೊಂದಿದೆ. ಹಳ್ಳಿಯ ಚರಿತ್ರೆಯನ್ನು, ಪೌರುಷದ ಸಂಗತಿಗಳನ್ನು, ನಕ್ಕು ನಗಿಸುವ ಹಾಸ್ಯ ಪ್ರಸಂಗಗಳನ್ನು ಈಗಿನ ಕಾಲದ ಮಕ್ಕಳಿಗೆ ತಿಳಿಸುವುದು ಮತ್ತು ಕೇಳಿಸುವುದು ಅನಿವಾರ್ಯವಾಗಿದೆ. ಈ ಹೊತ್ತಿನಲ್ಲಿ ಇಂತಹ ಮಹತ್ವದ ಕೃತಿ ಬೆಳಕು ಕಂಡಿರುವುದು ಮಕ್ಕಳ ಹಿತದೃಷ್ಟಿಯಿಂದ ಅನುಕೂಲವಾಗಿದೆ.

 ಈ ಕೃತಿ ನಮ್ಮನ್ನು ಓದಿಸಿಕೊಂಡು ಮಧುರ ಅನುಭವದಲ್ಲಿ ಮುಳುಗಿಸಿ ಬಿಡುತ್ತದೆ. ಇಲ್ಲಿನ ಕಥೆಗಳು ಎಷ್ಟು ಹೃದಯಂಗಮವಾಗಿವೆಯೋ ಅಷ್ಟೇ ಹೃದಯ ಸಾಮಿಪ್ಯವೂ ಆಗಿವೆ. ಪ್ರೀತಿ, ಕರುಣೆ, ವಾತ್ಸಲ್ಯ, ಕಾಳಜಿ, ಬುದ್ಧಿವಂತಿಕೆ ಎಲ್ಲಕ್ಕೂ ಮಿಗಿಲಾಗಿ ಸ್ನೇಹ ಮಕ್ಕಳಲ್ಲಿ ಅಗತ್ಯ. ಈ ಎಲ್ಲಾ ಮುತ್ತುಗಳನ್ನು ಸೇರಿಸಿದ ಮಾಲೆ ಈ ಕೃತಿಯಾಗಿದೆ. ಪ್ರಾಣಿ- ಪಕ್ಷಿ, ಕ್ರಿಮಿ-ಕೀಟಗಳ ವಿಸ್ಮಯಕಾರಿ ವಿಷಯಗಳನ್ನೂ ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಮಕ್ಕಳ ಕಥೆ ರಚಿಸುವಲ್ಲಿನ ಅವರ ನೈಪುಣ್ಯಕ್ಕೆ ಮಿತಿಯೇ ಇಲ್ಲ. ಬರವಣಿಗೆ ಅವರ ದಣಿವಿಲ್ಲದ ದುಡಿಮೆ. ‘ಸುಲಿದ ಬಾಳೆಯ ಹಣ್ಣಿನಂದದಿ’ ಎಂಬ ನುಡಿಯಂತೆ ಈ ಕೃತಿಯಲ್ಲಿನ ಕಥೆಗಳನ್ನು ತುಂಬಾ ಸುಲಭವಾಗಿ ಮಕ್ಕಳಿಗೆ ಅರ್ಥವಾಗುವಂತೆ ಅಷ್ಟೇ ರಂಜನೀಯವಾಗಿ ಕಟ್ಟಿಕೊಟ್ಟಿದ್ದಾರೆ.

ಇಲ್ಲಿನ  ಮಕ್ಕಳ ಕಥೆಗಳು ಆಗಸದಲ್ಲಿ ಮಿನುಗುವ ತಾರೆಗಳಂತೆ ಹೃದಯಕ್ಕೆ ತಮ್ಮ ಛಾಪನ್ನು ಸುಂದರವಾಗಿ ಒತ್ತಿ ಅರಳಿಸುತ್ತವೆ. ಗುಲಾಬಿ ಹೂವಿನಂತೆ   ಮುದ ಕೊಡುತ್ತವೆ. ಮನಸ್ಸಿಗೆ ನಾಟುವ ರೀತಿಯಲ್ಲಿ ಸುಲಭವಾಗಿ ಅರ್ಥವಾಗುವಂತೆ, ಜೊತೆಗೆ ಅಷ್ಟೇ ಕುತೂಹಲವನ್ನು ಉಂಟುಮಾಡುವಂತಿವೆ. ಈ ಪುಸ್ತಕವನ್ನು ಓದುತ್ತ ಹೋದಂತೆ ಹಳ್ಳಿಯ ಜೀವನ, ರಸಭರಿತ ಅನುಭವಗಳು, ರೋಮಾಂಚನ, ರಹಸ್ಯಗಳು, ರಹಸ್ಯಗಳ ಹಿಂದಿನ ಕಥೆಗಳ ಅನುಭವವಾಗುತ್ತದೆ. ರಜೆಯ ದಿನಗಳನ್ನು ಕಳೆಯಲು ಮಕ್ಕಳಿಗೆ ಇಂತಹ ಅತ್ಯುತ್ತಮ ಕಥಾ ಪುಸ್ತಕಗಳನ್ನು ಕೊಡಬೇಕು. ಆಗ ಮಾತ್ರ ಕೃತಿಯ ಉದ್ದೇಶ ಈಡೇರುತ್ತದೆ.

 ಈ ಕೃತಿಯಲ್ಲಿ ಒಟ್ಟು ೧೫ ಕಥೆಗಳಿವೆ. ವಿಶೇಷವೆಂದರೆ, ಮುತ್ತಳ್ಳಿ ಎಂಬ ಕಾಲ್ಪನಿಕ ಊರಿನ ನೈಜ ಘಟನೆಗಳನ್ನೇ ಕಥಾ ವಸ್ತುವಾಗಿರಿಸಿರುವುದು. ಊರಿನವರೇ ಆಗಿ ಪೇಟೆಯಲ್ಲಿ ವಾಸಿಸುವ, ರಜೆಯಲ್ಲಿ ಮಾತ್ರ ಊರಿಗೆ ಬರುವ ಮಕ್ಕಳಿಗೆ ಮುತ್ತಳ್ಳಿಯ ೧೧೧ ವರ್ಷದ ನಾಗಮ್ಮಜ್ಜಿ ಊರಿನ ಶ್ರೇಷ್ಠತೆ, ಹಿರಿಮೆ-ಗರಿಮೆ, ಸಾಹಸ, ಇತಿಹಾಸ  ಕುರಿತು ಹೇಳುವ ಕಥೆಗಳು ಇವು.

ಇಲ್ಲಿನ ಕೆಲವು ಕಥೆಗಳನ್ನು ಗಮನಿಸುವುದಾದರೆ, ಸಕಲ ಪ್ರಾಣಿಗಳಲ್ಲೂ ದಯೆ ಬೇಕು ಎನ್ನುವ ಮೌಲ್ಯವನ್ನು ಬಿತ್ತರಿಸುವ  ‘ಮುಳ್ಳು ಚುಚ್ಚಿದ ಹಾವಿನ ಕಥೆ’ ಮಾನವೀಯತೆಯ ಪಾಠವನ್ನು ಹೇಳುತ್ತದೆ. ಹೆದರದೆ, ಮಾನವೀಯತೆ ಮೆರೆದ ನಂಜಣ್ಣ  ಎಂಬಾತ ಪ್ರಾಣಿ ಪ್ರೇಮದ ಮೂಲಕ ಹಾವನ್ನು ಉಳಿಸಿದ ಕಥೆ ಇದಾಗಿದೆ. ಇದೇ ರೀತಿ ‘ಕೆಂಚನ ಸಂಸಾರದ ಕಥೆ’ ಯಲ್ಲಿ ಅಮಾಯಕ ಮುಗ್ಧ ಕೆಂಚ ಆಡಿದ ಒಂದೊಂದು ಮಾತು ಮನದಾಳಕ್ಕಿಳಿಯುತ್ತದೆ. ಓದುವಾಗ ನಮಗರಿವಿಲ್ಲದಂತೆ ಅಶ್ರುಧಾರೆ ಇಳಿಯುತ್ತದೆ.  ಮಲೆನಾಡಿನ ಜನರು ಹುಲಿಗಳಿಂದ ಪಡುವ ಪಾಡಿನ ಕಥೆ  ‘ಎಂಟಡಿ ಖಡ್ಗ’. ಹುಲಿಕಂಡು ಹೆದರಿದ ತಿಪ್ಪ ಎನ್ನುವ ಹುಡುಗ ತಾನು ಹುಲಿ ಕೊಲ್ಲಬೇಕು ಎನ್ನುತ್ತಲೇ ಜ್ವರದಿಂದ ಸತ್ತು ಹೋಗುತ್ತಾನೆ. ನಂತರ ಆತನ ಆಸೆ ಈಡೇರಿಸಲು ಎಂಟು ಅಡಿಯ ಖಡ್ಗ ಮಾಡಿಸುತ್ತಾಳೆ. ಖಡ್ಗ ಇಂದಿಗೂ ಆತನ ಮನೆಯ ಅಟ್ಟದಲ್ಲಿದೆ. ಊರಿನ ಮಕ್ಕಳು ಖಡ್ಗ ನೋಡಿ ಬಂದಾಗ  ಈ ಕಥೆಯನ್ನು ಅಜ್ಜಿ ಹೇಳುತ್ತಾಳೆ.

  ‘ಸಾಬಕ್ಕನ ಹಿಡಿದ ಹುಲಿ’ ಕತೆಯಲ್ಲಿ ಸಂಜೆ ನೀರು ಸೆಳೆಯುವಾಗ ಹುಲಿ ಒಂದು ಸಾಬಕ್ಕನನ್ನು ಎತ್ತಿಕೊಂಡು ಹೋಗಿ ಅವಳ ತೊಡೆಯನ್ನು ತಿನ್ನುತ್ತದೆ. ತಪ್ಪಿಸಿಕೊಂಡು ಮನೆಗೆ ಬಂದಾಗ ಮತ್ತೆ ಹುಲಿ ಮನೆಯೊಳಕ್ಕೆ ಸೇರುತ್ತದೆ. ಗ್ರಾಮಸ್ಥರು ಉಪಾಯದಿಂದ ಸಾಬಕ್ಕಳನ್ನು ನಿಧಾನವಾಗಿ ಹೊರಕರೆದು ನಂತರ ಹುಲಿಯನ್ನು ಗುರಿಕಾರನಿಂದ ಕೊಲ್ಲಿಸುತ್ತಾರೆ. ‘ಹನುಮಕ್ಕನ ಗುಡಿಯ ತಕ್ಕಡಿಯ ಕಥೆ’ ಯಲ್ಲಿ ಇಂದಿನ ಸ್ವಾರ್ಥ ಪ್ರಪಂಚದಲ್ಲಿ ಪ್ರಾಮಾಣಿಕತೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ದಾರಿಯಲ್ಲಿ ಸಿಕ್ಕ ತರಕಾರಿ ಮೂಟೆಯನ್ನು ಊರಿನವರು ಹಂಚಿಕೊಂಡು ಅದರ ಹಣವನ್ನು ಹನುಮಪ್ಪನ ಹುಂಡಿಗೆ ಹಾಕುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿರುವುದನ್ನು ತೋರಿಸಲಾಗಿದೆ.

 ‘ಸಾಕ್ಷಿ ಬಸವನ ಕಥೆ’ ಮನಸೆಳೆಯುವಂತದ್ದು. ನ್ಯಾಯ, ನೀತಿ, ಧರ್ಮವಿದ್ದರೆ ಯಾವ ರೂಪದಲ್ಲಾದರೂ ಅದು ನಮ್ಮನ್ನು ಕೈ ಹಿಡಿಯುತ್ತದೆ ಎಂಬುದನ್ನು ಇಲ್ಲಿ ಬಿಂಬಿಸಲಾಗಿದೆ. ತನ್ನ ಪ್ರಾಮಾಣಿಕತೆಯ ಮೂಲಕ ಬಚಾವಾದ ಮಲ್ಲಿ ಎಂಬ ಸುಂದರ ಹುಡುಗಿಯ ಕಥೆ ಇದು. ಮಲ್ಲಿಯ ಪ್ರಾಮಾಣಿಕತೆಯನ್ನು ಕಂಡ  ಬಸವ (ಎತ್ತು)  ಮಾಲಕ ಬಂಗಾರಸೆಟ್ಟಿಯ   ಹುಡುಗಿಯ ಚಪಲವನ್ನು ವಿರೋಧಿಸುತ್ತದೆ. ಸತ್ಯವನ್ನು ಹೇಳುವ ಮೂಲಕ ಮಲ್ಲಿಯನ್ನು ಕಾಪಾಡುತ್ತದೆ. ನಂತರ  ಸೆಟ್ಟಿ ತನ್ನ ತಪ್ಪಿಗಾಗಿ ಊರ ಗುಡಿಯ ಮುಂದೆ ಕಲ್ಲಿನ ಸಾಕ್ಷಿ ಬಸವನ ವಿಗ್ರಹ ಸ್ಥಾಪಿಸುವ ಶಿಕ್ಷೆ ಕೊಡಲಾಗುತ್ತದೆ.

ಇದೇ ರೀತಿ  ಹಾವಿಗೆ ಪತ್ರ ಬರೆದು ತಮ್ಮ ಭಾವನೆ, ಬೇಡಿಕೆಗಳನ್ನು ಪ್ರಾರ್ಥನೆ ರೂಪದಲ್ಲಿ ಈಡೇರಿಸಿಕೊಂಡು ಜನರ ಕಷ್ಟಕ್ಕೆ ಸ್ಪಂದಿಸಬಹುದು ಎನ್ನುವ ನೀತಿ ಪಾಠವನ್ನು ‘ಗುಡಿಯ ‘ನಾಗರಹಾವು’,  ಗರ್ಭಿಣಿ ಹೆಂಗಸಿನ ಮೊರೆಗೆ ಕಿವಿ ಕೊಟ್ಟು ದೇವರು ಬೀದಿಗೆ ಬಂದು ಪೂಜೆ ಸ್ವೀಕರಿಸಿದ ಮಾನವೀಯತೆಯನ್ನು ಸಾ ರುವ ‘ಬಿಳಿಕಲ್ ಗುಡ್ಡದ ಕಥೆ’, ಬುಗುರಿಯನ್ನು ತರಲು ಹೋದ ಸುಬ್ಬ ನೀರಿನಲ್ಲಿ ಸಿಲುಕಿದಾಗ ವೆಂಕಟಯ್ಯ ಆತನನ್ನು ರಕ್ಷಿಸಿ ಮನುಷ್ಯತ್ವ ಮೆರೆದಿದ್ದನ್ನು ‘ಬುಗುರಿ ತರಲು ಹೋದ ಸುಬ್ಬ’, ಅನ್ಯಾಯದ ವಿರುದ್ಧ ಸಿಡಿದೇಳಬೇಕು. ಮಕ್ಕಳು ಧೈರ್ಯ, ಸಾಹಸ ಹೊಂದಬೇಕು. ಕಳ್ಳರನ್ನು ಹೆಡೆಮುರಿ ಕಟ್ಟಬೇಕು ಎನ್ನುವ ನೀತಿ ಹೊಂದಿರುವ ‘ಗಿಡ್ಡ ರಾಮನ ಸಾಹಸ’, ಬುದ್ಧಿವಂತಿಕೆಯಿಂದ, ಹೆದರದೆ ಚಿಂತಿಸಿದರೆ ಎಂತಹ ಸಮಸ್ಯೆಯನ್ನೂ ಪರಿಹರಿಸಬಹುದು ಎನ್ನುವ ನೀತಿಯನ್ನು ಮಂಜುನಾಥ ಮೂಲಕ ‘ಹಲಸಿನ ಹಣ್ಣಿನ ಮಂಜ’ ನ ಕಥೆಯಲ್ಲಿ ಚಿತ್ರ್ರಿಸಲಾಗಿದೆ.

  ಈ ರೀತಿಯಾಗಿ, ಕೃತಿಯು ಮಕ್ಕಳಲ್ಲಿ ಧೈರ್ಯ, ಸಾಹಸ, ಒಳ್ಳೆಯತನ, ಒಗ್ಗಟ್ಟು ಮೊದಲಾದವುಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ. ನೈತಿಕ ಮೌಲ್ಯವನ್ನು ಜಗತ್ತಿಗೆ ಪರಿಚಯಿಸುವ ಜೊತೆಗೆ ನೈತಿಕ ಪ್ರಜ್ಞೆಯನ್ನು ಅನಾವರಣಗೊಳಿಸುತ್ತದೆ. ಲೇಖಕರ ಚಿಂತನಾಶೀಲತೆಯನ್ನು ಇಲ್ಲಿ ನಿಜವಾಗಿ ಮೆಚ್ಚಲೇಬೇಕು.  ಈ ಕೃತಿ ಮಕ್ಕಳಲ್ಲಿ ಆಸಕ್ತಿ ಮತ್ತು ಕಲ್ಪನಾ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ. ಕೃತಿಯನ್ನು ಮಕ್ಕಳು ಕೊಂಡು ಓದಿದರೆ ಅವರಲ್ಲಿ ಇನ್ನಷ್ಟು ಉತ್ತಮ ಗುಣಗಳು, ವಿಶೇಷ ಅನುಭವಗಳು ಆಗುವುದು ನಿಶ್ಚಿತ.

Published by Dattatreya Hegde  on 17.3.2025

,,,,,,,,,,,,,,,,,,,,


Comments

Popular posts from this blog