ಮಣ್ಣಿನೊಂದಿಗಿನ ಭಾವನಾತ್ಮಕ ಸಂಬಂಧ ತೋರುವ 

‘ಮರಳಿ ಮಣ್ಣಿಗೆ’  



ಇದು ೧೯೪೧ರಲ್ಲಿ ಶಿವರಾಮ ಕಾರಂತರು ಬರೆದ ಕಾದಂಬರಿ. ಇದರ ನಂತರ ೧೦ ಬಾರಿ ಮರುಮುದ್ರಣವನ್ನು ಕಂಡಿದೆ ಎಂದರೆ ಇದು ಎಷ್ಟರ ಮಟ್ಟಿಗೆ ಓದುಗ ವಲಯವನ್ನು ಸೆಳೆದಿದೆ ಎನ್ನುವುದನ್ನು ಊಹಿಸಬಹುದು.

ಹೆತ್ತವರಿಗೆ ಮಕ್ಕಳ ಮೇಲೆ ಇರುವ ಪ್ರೀತಿ, ಅದನ್ನು ಮಕ್ಕಳು ದುರುಪಯೋಗಿಸಿಕೊಳ್ಳುವುದು, ಶಿಕ್ಷಣ ಕಲಿಯುವಾಗಲೇ ಕೆಟ್ಟ ಚಟಗಳಿಗೆ ಬಲಿಯಾಗಿ ಮನೆಯಿಂದ ಬರುವ ಹಣವನ್ನು ಅದಕ್ಕೆ ಬಸವುದು, ಶಿಕ್ಷಣ ಕಲಿಯದೆ, ಉದ್ಯೋಗಕ್ಕಾಗಿ ಎಷ್ಟು ಊರು ಅಲೆದಾಡಿದರೂ ಅದು ಸಿಗದೇ ಇದ್ದಾಗ  ಪಾಲಕರ ಆಶಯ, ಭರವಸೆಗಳು ನಾಶವಾಗುವುದು, ಅವರು ಪಡುವ ಯಾತನೆ, ಮಕ್ಕಳು ಜವಾಬ್ದಾರಿ ಮರೆತು, ಇನ್ನೊಬ್ಬರ ಮಾತಿಗೆ ಬಲಿಯಾಗಿ ಮನೆಯನ್ನೇ ಮರೆಯುವುದು, ಆಸ್ತಿ ಒತ್ತೆ ಇಡುವುದು, ಜೂಜಿಗೆ ಶರಣಾಗುವುದರಿಂದ  ಅದರ ಪರಿಣಾಮ ಅವರ ಕುಟುಂಬ ಹಾಗೂ ಮುಂದಿನ ಪೀಳಿಗೆಯ ಮೇಲೆ ಹೇಗಾಗುತ್ತದೆ ಎನ್ನುವುದು ಈ ಕಾದಂಬರಿಯಿಂದ ಮನದಟ್ಟಾಗುತ್ತದೆ.

 ‘ಮರಳಿ ಮಣ್ಣಿಗೆ’ ಹೆಸರೇ ಹೇಳುವಂತೆ  ಎಷ್ಟೇ ಹೋರಾಟ ಮಾಡಿದರೂ, ಊರು ಬಿಟ್ಟರೂ,  ಜೀವನದ ಸುಖ, ಸಂತೋಷ, ನೋವು, ಅವಮಾನ, ಸಾಧನೆ, ದ್ವೇಷ, ಅಸೂಯೆ ಎಲ್ಲವನ್ನು ಅನುಭವಿಸಿ ಕೊನೆಯಲ್ಲಿ  ಮಣ್ಣಿಗೆ ಬಂದು ಸೇರಬೇಕು ಎನ್ನುವುದನ್ನು ಇದು ಸಾರುತ್ತದೆ.  ಮೂರು ತಲೆಮಾರಿನ ಬದುಕು ಇದರಲ್ಲಿದೆ. ಮೊದಲನೆಯದು ಪಿತ್ರಾರ್ಜಿತ ಜಮೀನು ಸಾಗುವಳಿ ಮಾಡಿ ಕಟ್ಟಿಕೊಂಡ ಕುಟುಂಬ, ಕುಟುಂಬ, ಎಡಡನೆ ತಲೆಮಾರಿನ ಸುಖ ಲೋಲುಪ ಸ್ವಭಾವ, ಮೂರನೆಯ ತಲೆಮಾರಿಗೆ ಎದುರಾಗುವ ಕಷ್ಟ, ಕಳೆದು ಹೋದ ಜಮೀನು ಮರಳಿ ಪಡೆಯುವುದು ಇಲ್ಲಿ  ಸುಂದರವಾಗಿ ಚಿತ್ರಿತವಾಗಿದೆ.  

ಕಥಾ ಸಾರಾಂಶ: 

ಕೃಷಿ ಕುಟುಂಬದ, ಪುರೋಹಿತರಾಗಿದ್ದ, ಸಮುದ್ರ ತೀರದ ಹಳ್ಳಿಯಾದ ಐರೋಡಿಯ ರಾಮ ಐತಾಳರ ಕುಟುಂಬದ ಈ ಕಥೆಯಲ್ಲಿ  ಬರುವ ಪಾತ್ರಗಳೆಂದರೆ ಐತಾಳದ ಹೆಂಡತಿ ಪಾರ್ವತಿ (ಪಾರೋತಿ), ಅವರ ತಂಗಿ ಸರಸ್ವತಿ (ಸರಸೋತಿ), ಎರಡನೆಯ ಹೆಂಡತಿ ಸತ್ಯಭಾಮೆ, ಐತಾಳರ ಮಗ ಲಕ್ಷ್ಮೀನಾರಾಯಣ (ಲಚ್ಚಿ), ಆತನ ಮಗ ರಾಮ, ಅವನ ತಾಯಿ  ನಾಗವೇಣಿ,  ಬೀಗರು ವಾಸುದೇವಯ್ಯ.  ರಾಮ ಐತಾಳರಿಂದ ಅವರ ಮೊಮ್ಮಗನ ಕಾಲದವರೆಗಿನ ಕಥೆ ಇದರಲ್ಲಿದೆ. ರಾಮ ಐತಾಳರು ಕೃಷಿ ಮಾಡುತ್ತಾ , ಪೌರೋಹಿತ್ಯದೊಂದಿಗೆ ಜೀವನ ಮಾಡಿದವರು. ಅವರ ತಂಗಿ ಸರಸ್ವತಿ ವಿಧವೆ. ಪಾರ್ವತಿಗೆ ಮಕ್ಕಳಿರಲಿಲ್ಲ.  ‘ಪಿಂಡ ಬಿಡಲಾದರೂ ಗಂಡುಮಕ್ಕಳು ಬೇಕು’ ಎಂಬ ನಂಬಿಕೆಯ ಆ ಕಾಲದಲ್ಲಿ ಮಕ್ಕಳು ಆಗಲೆಂದು ಐತಾಳರು ತಂಗಿಯ ಒತ್ತಾಯದ ಮೇರೆಗೆ ಇನ್ನೊಂದು ಮದುವೆಂiiನ್ನು ಸತ್ಯಭಾಮೆ ಎನ್ನುವವಳೊಂದಿಗೆ ಆಗುತ್ತಾರೆ. ಅವರ ಇಚ್ಛೆಯಂತೆ ಗಂಡುಮಗು ಜನಿಸುತ್ತದೆ. ಆತನಿಗೆ ತಮ್ಮಿಷ್ಟದ ದೇವರಾದ  ಲಕ್ಷ್ಮೀನಾರಾಂiiಣನ ಹೆಸರಿಡುತ್ತಾರೆ. ನಂತರ ಇನ್ನೊಂದು ಹೆಣ್ಣುಮಗು ಸುಬ್ಬಿ ಜನಿಸುತ್ತಾಳೆ.  

ಶೀನ ಮಯ್ಯ ಎನ್ನುವವರ ಮನೆ ಇವರ ಮನೆಯ ಹತ್ತಿರದಲ್ಲಿದ್ದರೂ  ಅವರಿಗೂ ಇವರಿಗೂ ಸಂಬಂಧ ಚೆನ್ನಾಗಿರಲಿಲ್ಲ. ೨೦೦ ರೂ ಸಾಲ ಪಡೆದು ಅದನ್ನು ಕೊಡಲು ಸಾಕಷ್ಟು ಆಟವಾಡಿದ್ದರು ಶೀನ ಮಯ್ಯ. ಶೀನಮಯ್ಯನಿಂತ ತಾನು ಚೆನ್ನಾಗಿರಬೇಕೆಂದು ಯೋಚಿಸಿದ ಐತಾಳರು  ಮನೆಯ ಹತ್ತಿರ ತೆಂಗಿನ ತೋಟ, ಇನ್ನೊಂದಷ್ಟು ಹೊಲ ಖರೀದಿಸುವರು.  ಜೊತೆಗೆ ಲಚ್ಚನನ್ನು ಶಾಲೆಗೆ  ಸೇರಿಸುವರು. ಉಡುಪಿಯಲ್ಲಿ, ಕುಂದಾಪುರದಲ್ಲಿ ಶಾಲೆಗ ಹೋಗುವಾಗಲೇ  ಇಸ್ಪೀಟ್ ಮತ್ತು ಹೆಣ್ಣಿನ ಸಂಗಕ್ಕೆ ತೊಡಗುತ್ತಾನೆ. ಇದನ್ನು ತಿಳಿದು ಐತಾಳರು ಚಿಂತಿತತರಾಗುವರು. ಓದು ಮುಗಿಯುತ್ತಲೇ ಮದುವೆ ಮಾಡಲು ನಿರ್ಧರಿಸಿ  ವಕೀಲ ವಾಸುದೇವಯ್ಯರ ಮಗಳು ನಾಗವೇಣಿಯೊಂದಿಗೆ ವಿವಾಹ ಮಾಡುತ್ತಾರೆ. ಐತಾಳರ ಮೊದಲ ಪತ್ನಿ ಪಾರೋತಿ ಈ ವೇಳೆ ಅನಾರೋಗ್ಯದಿಂದ ಸಾವಿಗೀಡಾಗುವಳು.

ಈ ಮಧ್ಯೆ ಲಚ್ಚ  ಮಾಡಿದ ಸಾಲ ತಿಳಿದು ಐತಾಳರು ಕಂಗಾಲಾಗುತ್ತಾರೆ. ಮನೆಯ ಆಸ್ತಿ ಹರಾಜಿಗೆ ಬರುತ್ತದೆ. ನಾಗವೇಣಿಗೆ ಗಂಡು ಮಗು ಜನನವಾಗುವುದು, ೬ ತಿಂಗಳಲ್ಲಿ ಮಗು ಸಾಯುವುದು,  ಸರಸೋತಿಯು ಕಾಶಿಗೆ ಹೋಗಿ ಬರುವ ಆಸೆ ವ್ಯಕ್ತಪಡಿಸುವುದು, ವಾಸುದೇವಯ್ಯನವರು  ಸರಸೋತಿಯನ್ನು ತಮ್ಮ ಕುಟುಂಬದೊಡನೆ  ಕರೆದುಕೊಂಡು ಕಾಶಿಗೆ ಹೋಗುವುದು, ಲಚ್ಚ  ‘ನಾನು ದೇಶಾವರಿ ಹೋಗದೆ ಹಕ್ಕಿನ ಮನೆಯಲ್ಲಿಯೇ ನಿಂತಿರುತ್ತೇನೆ’ ಎಂದು ಹೇಳಿ ಮನೆ ಬಿಟ್ಟು ಹೋಗುವುದು, ಮನೆಗೆ ಬರುವುದು, ನಾಗವೇಣಿಗೆ ಮತ್ತೆ ಗಂಡು ಮಗು ಜನನ, ಅದಕ್ಕೆ ಅಜ್ಜನ ಹೆಸರು ರಾಮ ಎಂದು ನಾಮಕರಣ ಮಾಡುವುದು, ನಾಗವೇಣಿ ಹೆಸರಿಗೆ ಐತಾಳರು ಬರೆದಿಟ್ಟಿದ್ದ  ಮನೆಯ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳುವುದು, ಮತ್ತೆ ಮನೆ ಬಿಟ್ಟು ಹೋಗುವುದು, ಮನೆಯನ್ನು ಮಾರಿದ ಸುದ್ದಿ ನಾಗವೇಣಿಗೆ ಗೊತ್ತಾದಾಗ ಬೇಸತ್ತು ಅಳಿವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವುದು, ಮೀನುಗಾರರು ಆಕೆಯನ್ನು ರಕ್ಷಿಸುವುದು, ಆಸ್ತಿ, ಮನೆ ಇಲ್ಲದೆ ನಾಗವೇಣಿ ಪರದಾಡುವುದು, ಸರಸೋತಿಯು ಸಾಯುವುದು....

 ಈಗ ಉಳಿದವರು ಲಚ್ಚನ ಮಗ ರಾಮ ಮತ್ತು ಆತನ ತಾಯಿ ನಾಗವೇಣಿ. ವಾಸುದೇವಯ್ಯ ತಮ್ಮ ಮನೆಗೆ ಬಂದುಬಿಡು ಎನ್ನುತ್ತಾರೆ. ಮೂಲಗೇಣಿ ಮನೆ ಇದು. ಬರಬೇಕೆನಿಸಿದರೆ ಮತ್ತೆ ಬಂದು ಉಳಿ ಎನ್ನುವರು.  ತವರಿಗೆ ನಾಗವೇಣಿ ಹೋಗುತ್ತಾಳೆ. ಅಲ್ಲಿ ಎರಡು, ಮೂರು ತಿಂಗಳ ಇದ್ದಾಗ ಸಂಗೀತ ಕಲಿಯುವ ಆಸೆ ಉಂಟಾಗುತ್ತದೆ ಕಲಿಯಲು ಆರಂಭಿಸುತ್ತಾಳೆ.  ಮತ್ತೆ ಮೂಲ ಮನೆಗೆ ಬಂದು ಇಲ್ಲಿರಲು ನಿರ್ಧರಿಸುತ್ತಾಳೆ. ಈ ವೇಳೆ ರಾಮ ಮದ್ರಾಸಿಗೆ ಹೋಗಿ ಇಂಟರ್ ಮೀಡಿಯೇಟ್ ಪಾಸು ಮಾಡಿ ಕೆಲಸಕ್ಕೆ ಸೇರಲು ನಿರ್ಧರಿಸುತ್ತಾನೆ.  ಕೆಲಸ  ಸಿಗದೇ ತನ್ನ ಭವಿಷ್ಯವೇ ತ್ರಿಶಂಕುವಾಯಿತು ಎಂದು ಬೇಸರಗೊಳ್ಳುತ್ತಾನೆ.  ಹೆತ್ತ ತಾಯಿಗೆ ಮಗ ಇನ್ನೂ ದುಡಿಯುವನೆಂಬ ಆಸೆ ಎದುರಾಗುತ್ತದೆ. ಬೆಂಗಳೂರಿನ  ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿಂದ ಮೈಸೂರಿಗೆ ಒಮ್ಮೆ ಹೋದಾಗ ತನ್ನ ತಂದೆ ಲಚ್ಚ ಇರುವ ಮಾಹಿತಿ  ರಾಮನಿಗೆ ಸಿಗುತ್ತದೆ. 

ಹುಡುಕಿಕೊಂಡು ಹೋದಾಗ ಆತ ಇಸ್ಪೀಟಿನಲ್ಲ್ಲಿ ತಲ್ಲೀನನಾಗಿರುತ್ತಾನೆ, ತಲೆಯೆತ್ತಿಯೂ ಮಗನನ್ನು ನೋಡುವುದಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ವಾಪಸಾಗುತ್ತಾನೆ.  ಮತ್ತೆ ಮುಂಬೈಗೆ ಕೆಲಸ ಹುಡುಕಿಕೊಂಡು ಹೋಗುತ್ತಾನೆ ಅಲ್ಲಿಯೂ ಕೆಲಸ ಸಿಗುವುದಿಲ್ಲ. ಮರಳಿ ಊರಿಗೆ ಬಂದಾಗ ಮೂಲ ಗೇಣಿಯ ಜಾಗವನ್ನು  ಕ್ರಯಕ್ಕೆ ಖರೀದಿಸುತ್ತಾರೆ. ಜೊತೆಗೆ ಮಾಸ್ತರಿಕೆ ಕೆಲಸಕ್ಕೆ  ರಾಮ ಸೇರಿಕೊಳ್ಳುತ್ತಾನೆ. ಗದ್ದೆಯನ್ನೂ ಸಹ ಖರೀದಿಸಿ ಮನೆಯ ಬದುಕನ್ನು ಮತ್ತೆ ಕಟ್ಟಿಕೊಳ್ಳುತ್ತಾನೆ.  ಹೀಗೆ ರಾಮ ಐತಾಳರ ಕುಟುಂಬದ ಆಸ್ತಿಯನ್ನೆಲ್ಲಾ  ಪಡೆದು ಅದಕ್ಕೆ ಹಕ್ಕುದಾರನಾಗುತ್ತಾನೆ.  ‘ಮರಳಿ ಮಣಿನ ಋಣ’ ತಮಗೆ ದೊರೆತಿದ್ದಕ್ಕೆ ತಾಯಿ-ಮಗ ಸಂತಸಪಡುವರು. ಇತ್ತ ಬ್ರಹ್ಮಾವರದ  ನಾಗಪ್ಪಯ್ಯ ಎನ್ನುವವರ ಮಗಳು ಸರಸ್ವತಿಯ ಜೊತೆ ವಿವಾಹ ನಿಶ್ಚಯ ಮಾಡಿಕೊಳ್ಳುತ್ತಾನೆ. ಸಿದ್ಧತೆ ಆರಂಭವಾಗುತ್ತದೆ.

ಹೀಗೆ ಮರಳಿ ಮಣ್ಣಿಗೆ ಕಾದಂಬರಿ  ನಮ್ಮ ತಾಯ್ನಾಡಿನೊಂದಿಗಿನ ಅವಿನಾಭಾವ ಸಂಬಂಧ ಮತ್ತು ಅದರೊಂದಿಗೆ ನಿರ್ವಿವಾದದ ಭಾವನಾತ್ಮಕ ಸಂಪರ್ಕವನ್ನು ಚಿತ್ರಿಸುತ್ತದೆ. ವಿಧವೆ ಸರಸ್ವತಿ, ಪ್ರಶ್ನಾತೀತ ಪತ್ನಿ ಪಾರ್ವತಿ, ಬಲವಾದ ಇಚ್ಛಾಶಕ್ತಿ ಮತ್ತು ನಿಜವಾದ ಸಹಾನುಭೂತಿಯುಳ್ಳ ನಾಗವೇಣಿ, ಸರಸ್ವತಿ ಮತ್ತು ಪಾರ್ವತಿಯ ಶ್ರಮದಾಯಕ ಜೀವನದ ಚಿತ್ರಣವು ಶುದ್ಧ ಕಾವ್ಯವಾಗಿದೆ. ಅವರ ದುಃಖಕರ ದೈನಂದಿನ ಜೀವನ, ಅವರ ಜೀವನದ ಕಷ್ಟಗಳು, ಆದರೂ ಅವರ ಸಂತೋಷ ಮತ್ತು ಆಳವಾದ ಒಡನಾಟವು ಹೃದಯಸ್ಪರ್ಶಿಯಾಗಿದೆ.

ಒಬ್ಬ ವ್ಯಕ್ತಿಯ ದುಶ್ಚಟದಿಂದ, ತಪ್ಪು ನಡತೆಯಿಂದ, ಬೇಜವಾಬ್ದಾರಿಯಿಂದ ಹೀಗೆ ಒಂದು ಸಂತತಿಯಿಂದ ಕಡಲಲ್ಲಿ ಮುಳುಗುವಂತೆ ಒಬ್ಬ ವ್ಯಕ್ತಿಯ ಸ್ವಾಭಿಮಾನ, ಸನ್ಮಾರ್ಗದ ನಡೆಯಿಂದ ಮತ್ತೆ ಆ ಕುಟುಂಬದ ಪರಮ ವೈಭವವನ್ನು ಮರಳಿ ಪಡೆಯಬಹುದು ಎಂಬುದು ಸೂಕ್ಷ್ಮವಾಗಿ ಕಾರಂತರು ಕಟ್ಟಿಕೊಟ್ಟಿದ್ದಾರೆ.

ಜೀವನದ ಸುಖ ಸಂತೋಷ, ನೋವು, ಅವಮಾನ, ಸಾಧನೆ, ದ್ವೇಷ, ಅಸೂಯೆ ಯಲ್ಲವನ್ನು ಅನುಭವಿಸಿ ಕೊನೆಯಲ್ಲಿ ಸೇರುವುದು ಮಣ್ಣಿಗೆ! ಅದೇ ಮರಳಿ ಮಣ್ಣಿಗೆ. ಎಲ್ಲಾ ಕಳೆದುಕೊಂಡು, ದಿಕ್ಕುದೆಸೆಯಿಲ್ಲದೆ ಅಲೆದಾಡಿದರೂ,ಕೃಷಿ ಭೂಮಿಯೇ ಶ್ರಮಿಕನ ಕೊನೆಯ ನೆಲೆಯಾಗಿದೆ ಎನ್ನುವುದನ್ನು ಕಾದಂಬರಿ ಸಾರುತ್ತದೆ. 

ಆಧುನಿಕತೆಯ ಆಗಮನದಿಂದ ಸಾಂಪ್ರದಾಯಿಕ, ಕೃಷಿ ಆಧಾರಿತ ಸಮಾಜದಲ್ಲಿ ಉಂಟಾಗುವ ಬದಲಾವಣೆಗಳನ್ನು ಮತ್ತು ಕುಟುಂಬದ ಸದಸ್ಯರು ಅದನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾರಂತರು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಕಾದಂಬರಿಯಲ್ಲಿ ನಲಿವಿಗಿಂತ ನೋವುಗಳೇ ಹೆಚ್ಚಾಗಿ ಇದ್ದರೂ ಕೂಡ ಕೊನೆಯಲ್ಲಿ ಕಾರಂತರು ಉತ್ತಮ ಜೀವನ ಸಂದೇಶ ನೀಡುವುದರೊಂದಿಗೆ, ಮನಸ್ಸಿಗೆ ಸಂತೃಪ್ತಿ ನೀಡಿ ಕಾದಂಬರಿಗೆ ಅಂತ್ಯ ಹಾಡುತ್ತಾರೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

......................... 

Comments

Popular posts from this blog