ಹನಿಮಳೆಯ ಮುತ್ತಂತಿರುವ
‘ನನ್ನ ನಿನ್ನ ನಡುವೆ’
ನರೇಂದ್ರ ಕಬ್ಬಿನಾಲೆ ಇವರ ಕವನ ಸಂಕಲನ ‘ನನ್ನ ನಿನ್ನ ನಡುವೆ’. ಶೀರ್ಷಿಕೆ ಹೇಳುವಂತೆ ಈ ಕವನದಲ್ಲಿ ನಮ್ಮ-ನಿಮ್ಮ ನಡುವೆ ಇರುವ ಪ್ರಕೃತಿಯ ಸೌಂದರ್ಯ, ಸಮುದ್ರದ ಭೋರ್ಗರೆತವಿದೆ. ನದಿಯ ಚೆಲುವಿದೆ, ಗೆಳೆತನ, ಪ್ರೇಮವಿದೆ. ನಾಡು -ನುಡಿ, ತಾಯಿ, ಬಾಳ ಸಂಗಾತಿ, ಭಾರತ, ಏಕಾಂತ, ಮನಸ್ಸು, ಸಂಸ್ಕಾರ... ಹೀಗೆ ಅನೇಕ ಮಗ್ಗುಲಗಳಲ್ಲಿ ಕವಿ ಇಲ್ಲಿ ೫೭ ಕವನಗಳನ್ನು ರಚಿಸಿದ್ದಾರೆ.
ಹೊಸ ಭಾವ ಹಾಗೂ ಹೊಸ ದಿಕ್ಕುಗಳನ್ನು ಇಲ್ಲಿನ ಕವನಗಳು ನಮಗೆ ತೋರಿಸುತ್ತವೆ. ಕಾವ್ಯ ಕಟ್ಟುವ ಕಲೆಯನ್ನು ಇಲ್ಲಿ ನಾವು ಕಾಣಬಹುದು. ವಿಶೇಷವಾಗಿ ಪ್ರಕೃತಿ ಸಂಬಂಧಿತ ಕವನಗಳಿಗೆ ಹೆಚ್ಚಿನ ಆದ್ಯತೆಯನ್ನು ಮಲೆನಾಡಿನವರಾದ ಕವಿ ಕೊಟ್ಟಿರುವುದನ್ನು ಕಾಣಬಹುದು. ಸುಂದರವಾದ, ಅದರ ಪ್ರೀತಿಯ ಸೊಬಗನ್ನು ಸವಿದು ಬೆಳೆದ ಕವಿ ಕೇವಲ ಪರಿಸರವನ್ನಷ್ಟೇ ಅಲ್ಲ, ಉಳಿದ ವಿಚಾರಗಳಿಗೂ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಇಲ್ಲಿನ ಎಲ್ಲಾ ಕವನಗಳು ನಮ್ಮ ಅನುಭವಕ್ಕೆ ಅನುಭಾವವಾಗಿ ಆಪ್ತವೆನಿಸುತ್ತವೆ. ಇಲ್ಲಿ ಪ್ರಕೃತಿ ಪ್ರೀತಿಯ ಜೊತೆ ಸಮಾಜ ಪ್ರೀತಿ ಇದೆ, ಬದ್ಧತೆ ಇದೆ. ಸಾಂಸಾರಿಕ ಜವಾಬ್ದಾರಿಯೂ ಇದೆ
ಸೀತಾ ನದಿಯ ಅಂಚಿನ ಊರಿನವರಾದ ಕವಿ ತನ್ನ ನೆಚ್ಚಿನ ಸೀತಾನದಿ ಕುರಿತಾಗಿಯೇ ಮೊದಲ ಕವನ ಬರೆದಿದ್ದಾರೆ. ನದಿಯ ಹರಿವಿನ ನಾದವನ್ನು ಸಂಗೀತ ಸ್ವರಗಣಕ್ಕೆ, ಹರಿಯುವ ನೀರನ್ನು ಓಡುವ ಮೋಡಕ್ಕೆ ಹೋಲಿಸಿ, ಆಕಾಶ ಇಲ್ಲಿ ಬಾಗಿ ಭೂಮಿಗೆ ಚುಂಬಿಸುತ್ತಿರುವಂತೆ ಕಂಡು ಬರುತ್ತಿದೆ. ಇಂತಹ ದೃಶ್ಯವನ್ನು ನೋಡುವಾಗ ಸಂತೋಷ ಲೋಕದಲ್ಲಿ ಇದ್ದಂತೆ ಅನಿಸುತ್ತದೆ. ನಮ್ಮ ಮೈಮನ ಮರೆಸುತ್ತದೆ ಎನ್ನುತ್ತಾ
ಭೂರಮೆ ಮೈಸಿರಿ ಹೊಸತನ ತಂದಿದೆ
ಸಖಿಯಾಗಿ ಸುಖಿಯಾಗಿ ಸುಧೆಯಾಗ ಬಯಸುವೆ
ಎಂದು ಆಶಿಸುತ್ತಾರೆ.
‘ಬನ್ನಿ ನಮ್ಮೂರಿಗೆ’ ಎನ್ನುವ ಕವನದಲ್ಲಿ
ನೋವು ಗುಣಪಡಿಸುವೆ
ಸ್ವಚ್ಛಂದ ವಿಹಾರದಲಿ
ದಾಹ ತೀರಿಸುವೆ
ಝರಿತೊರೆಗಳ ಮೊರೆತದಲಿ
ಪ್ರಕೃತಿ ಆಲಿಂಗನದಲ್ಲಿ
ಬರುವುದಾದರೆ ಹೇಳಿ
ಸ್ವಾಗತಕೆ ಕಾಯುತ್ತಿವೆ
ಎಂದು ತಮ್ಮೂರಿನ ಪ್ರಕೃತಿಯನ್ನು ರಸವತ್ತಾಗಿ ವರ್ಣಿಸಿದ್ದಾರೆ ಎಂತಹ ಕಷ್ಟಗಳಿದ್ದರೂ ಇಲ್ಲಿಗೆ ಬಂದರೆ ಎಲ್ಲವೂ ಮಾಯವಾಗುತ್ತದೆ. ತೆಂಗು ಮತ್ತಿತರ ಗಿಡಗಳು ಇಲ್ಲಿ ಸ್ವಾಗತಕ್ಕಾಗಿ ಕಾಯುತ್ತಿವೆ. ಹಸುರಾದ ತರುಗಳು, ಗಿಳಿ- ಕೋಗಿಲೆಗಳ ಹಾಡು ನಮ್ಮ ಮನವನ್ನು ತೋಯಿಸುತ್ತದೆ. ತಾಳೆ ಮತ್ತು ತೆಂಗಿನ ನೀರಾ ಸವಿದರೆ ಅದರ ರುಚಿಯೇ ಬೇರೆ. ಪ್ರಕೃತಿಯ ಹಸಿವು ಯಾರಿಗಿದೆಯೋ ಅವರು ಬಂದರೆ ಅವರಿಗೆ ಮೋಹ ಉಂಟಾಗುತ್ತದೆ ಎಂದು ಕಾವ್ಯಾತ್ಮಕವಾಗಿ ವರ್ಣಿಸಿದ್ದಾರೆ.
‘ಚೆಲುವಿನ ಸಿರಿ’ ಎಂಬ ಕವನದಲ್ಲಿ ಪ್ರಕೃತಿಯಲ್ಲಿ ಅರಳಿದ ಹೂವು, ಅಲ್ಲಿನ ಮಕರಂದ, ಭ್ರಮರಗಳ ಹಾಡು, ಪಕ್ಷಿಗಳ ಗುಂಪು ಕಲರವ ಎಲ್ಲವೂ ನಮ್ಮನ್ನು ಆಕರ್ಷಿಸುತ್ತವೆ. ಇದನ್ನು ಕೇಳುತ್ತಾ ಇದ್ದರೆ ನಾವು ಕಳೆದುಹೋಗುತ್ತೇವೆ. ಇಂತಹ ಸುಂದರ ಪರಿಸರದಲ್ಲಿ ಇದ್ದಾಗ ಕವನ ಬರೆಯಬೇಕು ಎಂದೆನಿಸುತ್ತದೆ. ಏಕೆಂದರೆ ಆ ಅವರ್ಣನೀಯ ಪರಿಸರದಿಂದ, ಅಲ್ಲಿನ ಸುಂದರ, ವರ್ಣಮಯ ಗಾನಲೋಕದಿಂದ ನಮ್ಮನ್ನು ನಾವು ಮರೆತುಬಿಡುತ್ತೇವೆ, ಪ್ರಕೃತಿಯಲ್ಲಿ ಲೀನವಾಗುತ್ತೇವೆ. ಮಧ್ಯೆ ನೇಸರನು ಬಂದು ಆಗಾಗ ನಮ್ಮನ್ನು ತಬ್ಬಿ ಎಚ್ಚರಿಸುತ್ತಾನೆ ಎಂದು ವರ್ಣಿಸುತ್ತಾರೆ.
‘ಪ್ರತ್ಯಕ್ಷ ದೇವತೆ’ ಎಂಬ ಕವನದಲ್ಲಿ ತಾಯಿಯನ್ನು ಚಿತ್ರಿಸಿರುವ ಕವಿ,
‘ಹರಿಯುವ ನೀರಿದ್ದರೂ,
ಬೀಸೋ ಗಾಳಿಯಿದ್ದರೂ
ಕುಡಿಯೊಡೆಯಲು ಭೂಮಿ ಬೇಕು ಬೀಜಕೆ’ ಎನ್ನುತ್ತಾ ನವಮಾಸ ಹೊತ್ತು ತನ್ನ ಜೀವ ಬಸಿದು ಮಗುವನ್ನು ಸಾಕುವಳು ತಾಯಿ. ನಮಗೆ ಬೇಕು ತಾಯಿ ಭೂತಾಯಿಯಂತೆ ಸಲುಹುವವಳು ಎನ್ನುತ್ತಾರೆ. ಎಷ್ಟೇ ದೇವರ ವರವಿದ್ದರೂ ಭೂಮಿಯಂತೆ ತಾಯಿ ನಮ್ಮನ್ನು ಧರೆಗಿಳಿಸಿ, ಕೊನೆವರೆಗೂ ನಮ್ಮನ್ನು ಬೆಳೆಸುತ್ತಾಳೆ. ದೇವತೆಯಾಗಿ ಇದ್ದು ಕಾಪಾಡುತ್ತಾಳೆ ಎಂದು ತಾಯಿಯ ಮಹತ್ವವನ್ನು ವಿವರಿಸುತ್ತಾರೆ.
‘ಯಾರಲ್ಲಿ ಬಂದವರು’ ಎಂಬ ಕವನದಲ್ಲಿ ತನ್ನ ಕಣ್ಣಿಂದ ಮರೆಯಾಗಿ, ವಿರಹ ವೇದನೆಯನ್ನು ಕೊಟ್ಟ ಪ್ರಿಯ ನಲ್ಲೆಯ ಆಗಮನವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ತಡವಾಗಿ ಬಂದರೂ
ನನ್ನವಳೇ ಆಗಿರುವೆ
ಇನ್ನು ತಡವೇಕೆ ಬಾ ಒಳಗೆ
ಬತ್ತಿದ್ದ ಬದುಕಿನಲ್ಲಿ
ಒಲವಿನ ಧಾರೆಯೆರೆದು
ಬಚ್ಚಿಟ್ಟುಕೋ ನಿನ್ನ ಎದೆಯೊಳಗೆ
ಎಂದು ಆಹ್ವಾನ ನೀಡುತ್ತಾರೆ. ತನ್ನ ಪ್ರಿಯತಮೆ ತನ್ನನ್ನು ಬಿಟ್ಟು ಹೋದಾಗ ಆಕೆಯನ್ನು ಹುಡುಕಿ ಸುಸ್ತಾಗಿ, ಬೆಂದು ಹೋಗಿ, ಬಾಯಿಯಿಂದ ಮಾತು ಬಾರದ ಸ್ಥಿತಿಯಲ್ಲಿರುವಾಗ ಆಕೆ ಆಕಸ್ಮಾತಾಗಿ ತನ್ನ ಮನೆಗೆ ಬಂದಾಗ
‘ಇಂದಾದರೂ ಬಂದೇಯಲ್ಲೇ ಮುದ್ದು ನಲ್ಲೆ’
ಎಂದು ವರ್ಣಿಸುತ್ತಾರೆ.
ಹಿರಿಯ ಜೀವಗಳು ತಮ್ಮ ವೃದ್ಧಾಪ್ಯವನ್ನು ಕಳೆಯುತ್ತಾ, ಬಾಲ್ಯದಲ್ಲಿ ಕಳೆದ ಜೀವವನ್ನು ನೆನಪಿಸಿಕೊಳ್ಳುವುದನ್ನು ಚಿತ್ರಿಸಿದ್ದಾರೆ.
ಮುಸ್ಸಂಜೆಯ ಹೊತ್ತಲ್ಲಿ ಮಬ್ಬಾದ ಬದುಕು
ಮತ್ತದೇ ಹಳೆಯ ನೆನಪುಗಳ ಗೋಪುರ
ಎನ್ನುತ್ತಾ ಹಳೆಯ ಜೀವನ ಒಂದು ಸವಿ ಊಟವಾಗಿತ್ತು. ಸುಖವಿತ್ತು. ನೆಮ್ಮದಿ ಇತ್ತು. ಈಗ ಅದು ಪದೇ ಪದೇ ನೆನಪಾಗಿ ಕಾಡುತ್ತಿದೆ. ಸಮುದ್ರದ ಅಲೆಗಳಂತೆ ಒಂದರ ಮೇಲೊಂದು ನೆನಪಿನ ಅಲೆ ಬರುತ್ತಿದೆ. ಈಗ ಜೀವ ಬಳಲಿ ಬೆಂಡಾಗಿದೆ. ನೆಮ್ಮದಿ ಕಾಣದ ಬದುಕಾಗಿದೆ. ಇದ್ದುದನು ತಿಂದು, ಸುಖ ನಿದ್ದೆ ಮಾಡಿ, ನಾಳೆಗೆ ನಾಳೆ ಏನು ಎನ್ನುವಂತ ಸ್ಥಿತಿ ಇದೆ, ಹಿಂದಿನ ಜೀವನ ಈಗ ಇಲ್ಲ ಎಂದು ಸ್ಮರಿಸುವುದನ್ನು ‘ಅಂತರಂಗದ ಅಂತರ’ ಎಂಬ ಕವನದಲ್ಲಿ ತೋರಿಸುತ್ತಾರೆ.
‘ಮುಖಪುಟ’ (ಫೇಸ್ ಬುಕ್)ನಿಂದಾಗುವ ಪ್ರಯೋಜನವನ್ನು ಈ ಕವಿತೆಯಲ್ಲಿ ವಿವರಿಸಿದ್ದಾರೆ. ಮನದೊಳಗಿನ ವಿಷಯವನ್ನೆಲ್ಲ ಸೊಗಸಾಗಿ ತೆರೆದಿಡುವ, ಮನದಾಳದಲ್ಲಿ ಮೂಡುವ ಭಾವ ಹೊರಸೂಸಲು, ಪುಟಿದೇಳುವ ಯೋಚನೆಗೆ ಇದು ಸುಂದರ ಅಂಕಣ. ಇಲ್ಲಿ ಪರಿಚಯ ಆಗುತ್ತದೆ. ಪರಿವಿಲ್ಲದೆ ನಮ್ಮ ಆಶಯಗಳನ್ನು ಹಂಚಬಹುದು, ಮೂಡುವ ಭಾವಗಳಿಗೆ ಖುಷಿಕೊಡುವ ಸುಂದರ ತಾಣ ಇದು ಎಂದು ಚಿತ್ರಿಸುತ್ತಾರೆ.
ಚುಟುಕುಗಳು
ಈ ಕವನ ಸಂಕಲನದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಚುಟುಕುಗಳಿವೆ. ಇದರಲ್ಲೂ ನನಗೆ ಸಂಬಂಧಪಟ್ಟ, ಸಮಾಜದ, ಪ್ರೀತಿ ಪ್ರೇಮ ಸಹಿತ ಹತ್ತಾರು ವಿಷಯದ ಚುಟುಕುಗಳಿವೆ. ಇವು ಒಂದು ಕ್ಷಣ ನಮಗೆ ಕಚಗುಳಿ ಕೊಡುವಂತಹವು.
ಕೆಲವು ಚುಟುಕುಗಳನ್ನು ಗಮನಿಸುವುದಾದರೆ
೧. ಮುಂಜಾನೆಯ
ಇಬ್ಬನಿ
ರಾತ್ರಿಯೆಲ್ಲಾ
ದುಡಿದ
ಚಂದಿರನ
ಬೆವರ ಹನಿ
೨. ನೀ ಕೊಟ್ಟ
ಕಣ್ಣ ಕಚಗುಳಿಗೆ
ನಮ್ಮೆರಡು ಹೃದಯ
ಒಂದಾಯಿತು.
ನೀನಿತ್ತ
ಆ ಮುತ್ತ ಅಮಲಿಗೆ
ನಮಗೆರಡು
ಮಕ್ಕಳಾಯಿತು.
೩. ವಿದಾಯ ಹೇಳುತ್ತಾ ಹೊರಟ
ಹಳೆ ಕ್ಯಾಲೆಂಡರ್
ಹೊಸದಾಗಿ ಬಂದ ಕ್ಯಾಲೆಂಡರಿಗೆ
ಹೇಳಿತು ಪಿಸುಮಾತು
ನನಗೆ ಸೂಜಿ ಚುಚ್ಚಿಸಿಕೊಂಡು ಸಾಕಾಯಿತು
ನಾಳೆಯಿಂದ ನಿನ್ನ ಸರದಿ.
ಹೀಗೆ ಕವನ ಮತ್ತು ಚುಟುಕುಗಳ ಮೂಲಕ ಉತ್ತಮ ಸಂದೇಶವನ್ನು ಈ ಸಂಕಲನ ಕಟ್ಟಿಕೊಟ್ಟಿದೆ. ಇಲ್ಲಿನ ಕವಿತೆಗಳು ಗಾಢತೆಯನ್ನು ಮೈಗೂಡಿಸಿಕೊಂಡಿರುವುದು ನಮ್ಮ ಗಮನಕ್ಕೆ ಬರುತ್ತದೆ. ಕವಿಯ ಮನಸ್ಸಿನ ತುಮುಲವೇ ಕವಿತೆ ಎನ್ನುವ ಮಾತಿದೆ. ಪ್ರಾಪಂಚಿಕ ಅವ್ಯವಸ್ಥೆಯ ಈ ನೆರೆಯಲ್ಲ್ಲಿಅವೆಲ್ಲ ಕೊಚ್ಚಿಹೋಗದಂತೆ ಹನಿಮಳೆಯ ಮುತ್ತುಗಂತೆ ಕವಿ ಹಿಡಿದಿಟ್ಟು ಅದನ್ನು ನಮಗೆ ಉಣಬಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ನಮಗೆ ಇನ್ನಷ್ಟು ಆಪ್ತವಾಗುತ್ತದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
....................

Comments
Post a Comment