ಮಕ್ಕಳ ಮನಸೆಳೆಯುವ
‘ಗುಡುಗುಡು ಗುಮ್ಮಟ ದೇವರು’
ಪ್ರಸ್ತುತ ಕೃತಿ ‘ಗುಡುಗುಡು ಗುಮ್ಮಟ ದೇವರು’ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಪ್ರಪ್ರಥಮ ಮಕ್ಕಳ ಕವನ ಸಂಕಲನವಾಗಿದೆ. ದಿವಂಗತ ಪಂಜೆ ಮಂಗೇಶ್ ರಾವ್ ಅವರ ಗುಡುಗುಡು ಗುಮ್ಮಟ ದೇವರು ಎಂಬ ಮಕ್ಕಳ ಕವನ ಬಹಳ ಪ್ರಸಿದ್ಧವಾದುದು. ಭಾರದ್ವಾಜ ಅವರ ಕವನ ಸಂಕಲನ ನೋಡಿದಾಕ್ಷಣ ಪಂಜೆಯವರ ಕವನವೇ ನೆನೆಪಿಗೆ ಬರುತ್ತದೆ.
ಈ ಸಂಕಲನದಲ್ಲಿ ಜನಪದ ಲಯ, ಆಳವಾದ , ಅರ್ಥಗರ್ಭಿತ ಆಲೋಚನೆ ಇದೆ. ಲಯಬದ್ಧ ಬರವಣಿಗೆ, ಲಾಲಿತ್ಯ, ಸಂಗೀತದ ಮಾಧುರ್ಯವಿದೆ. ಇಲ್ಲಿನ ಹಾಡುಗಳು ಛಂದಸ್ಸಿನಿಂದ ಕೂಡಿವೆ. ಪ್ರತಿ ಶಬ್ದವು ನಿರಾಡಂಬರವಾಗಿ, ಸಮಯೋಚಿತವಾಗಿ, ಅರ್ಥಪೂರ್ಣವಾಗಿ ಬಳಸಲ್ಪಟ್ಟಿದೆ. ತಿಳಿಹಾಸ್ಯದಲ್ಲಿ ಮಕ್ಕಳಿಗೆ ಅರ್ಥವಾಗುವಂತೆ, ಅತಿ ಸರಳ ಭಾಷೆಯಲ್ಲಿ, ಹಿತಕರವಾಗಿ, ಅಯಾಚಿತ, ವಿಶಿಷ್ಟ ಶೈಲಿಯಲ್ಲಿ ರಚಿಸಲ್ಪಟ್ಟಿದೆ.
ಜಿ ಪಿ ರಾಜರತ್ನಂ ಅವರ ಕವನಗಳಂತೆ ಇವೂ ಸಹ ಅತ್ಯಂತ ಜನಪ್ರಿಯ ಕವನಗಳಾಗಿವೆ. ಇಲ್ಲಿನ ಹಾಡುಗಳು ನೀತಿ ಬೋಧಕ, ಕಥಾ ಬೋಧಕ, ಜೊತೆಗೆ ರಂಜಕವೂ ಆಗಿವೆ. ಇವುಗಳನ್ನು ರಾಗದಲ್ಲಿ ಹಾಡಲು ಬಳಸಿಕೊಳ್ಳಬಹುದು ಎನ್ನುವಂತಿದೆ. ಈ ಸಂಕಲನದಲ್ಲಿ ಮಕ್ಕಳು ಇಷ್ಟಪಡುವ ವಿವಿಧ ವಿಷಯಗಳು ಇವೆ. ಮಕ್ಕಳ ನೆಚ್ಚಿನ ಗುಡಾಣ ಹೊಟ್ಟೆಯ ಗಣಪಣ್ಣ, ಗುಡುಗುಡುಗುಮ್ಮಟ ದೇವರು, ಪರಿಸರ, ದೀಪಾವಳಿ, ಮೊಬೈಲು, ಒಗಟುಗಳು, ಮಾವಿನಕಾಯಿ, ಸೈಕಲ್ ಸವಾರಿ, ಮಳೆ, ಟಿವಿ, ನವಿಲು, ಚಿಟ್ಟೆ, ಜಟಕಾ ಬಂಡಿ, ಕಣ್ಣಾಮುಚ್ಚಾಲೆ ಆಟ, ಮಸಾಲೆ ದೋಸೆ, ಗಾಳಿಪಟ... ಹೀಗೆ ಸುಮಾರು ೭೮ ವಿಧದ ಕವಿತೆಗಳು ಇದರಲ್ಲಿವೆ. ಈಗಾಗಲೇ ಈ ಕವನ ಸಂಕಲನ ಸಾಕಷ್ಟು ಹೆಸರುಗಳಿಸಿದೆ.
‘ ಗಣಪಣ್ಣ’ ದಲ್ಲಿ ಗಣಪತಿಯ ವರ್ಣನೆ ಅದ್ಭುತವಾಗಿದೆ. ಗಣಪತಿ ಎಂದರೆ ಮಕ್ಕಳಿಗೆ ಇಷ್ಟ. ಇಲ್ಲಿ ಆತನನ್ನು ವರ್ಣಿಸುವ ಸಾಲುಗಳು ಮಕ್ಕಳನ್ನು ಸೆಳೆಯಬಲ್ಲವು. ಇವು ಧ್ವನ್ಯಾರ್ಥವನ್ನು ಸಾರಿ ಹೇಳುವ ಪ್ರತಿಮೆಗಳಾಗಿವೆ. ಕವಿಯ ಕಾವ್ಯಶಕ್ತಿಯನ್ನು ನಿಜಕ್ಕೂ ಮೆಚ್ಚಲೇಬೇಕು.
ಆನೆಯ ಮೋರೆ ಗುಡಾಣದ ಹೊಟ್ಟೆ
ಏನಿದು ವೇಷವು ಗಣಪಣ್ಣ
ಹೆಗ್ಗಣವೇರಿ ಸವಾರಿ ಮಾಡುತ
ನುಗ್ಗುವುದೆಲ್ಲಿಗೆ ಗಣಪಣ್ಣ
ಹೊಟ್ಟೆಗೆ ಹಾವನ್ನು ಸುತ್ತಿಹುದೇತಕೆ
ಬಟ್ಟೆಯು ಜಾರದೆ ಗಣಪಣ್ಣ
ಮುಂತಾದ ಸಾಲುಗಳು ಗಣಪತಿಯ ವಿವಿಧ ರೂಪಗಳನ್ನು, ಅವನ ಹಬ್ಬದ ಸೌಂದರ್ಯವನ್ನು ವಿವರಿಸುವ ಮೂಲಕ ಚಿಕ್ಕ ಮಕ್ಕಳು ಸಹ ಇಷ್ಟಪಡುವಂತೆ ವರ್ಣಿಸಿದ್ದಾರೆ.
‘ಗುಡುಗುಡು ಗುಮ್ಮಟ ದೇವರು’ ಕವನ ಒಂದು ಕಾಲ್ಪನಿಕ ದೇವರ ಹೆಸರು. ಈ ಹೆಸರೇ ವಿಚಿತ್ರವಾದುದು. ಮಕ್ಕಳಲ್ಲಿ ಕುತೂಹಲ ಹುಟ್ಟಿಸುವಂತದ್ದು. ಗ್ರಾಮೀಣ ಭಾಗದ ನಂಬಿಕೆ ಅಥವಾ ಆಚರಣೆಗಳನ್ನು ವ್ಯಂಗ್ಯ ಅಥವಾ ವಿಮರ್ಶಾ ದೃಷ್ಟಿಯಿಂದ ನೋಡುವ ಕವನ ಇದಾಗಿದೆ. ದೇವರು ಬರುತ್ತಿದ್ದಾನೆ. ದಾರಿ ಬಿಡಿ. ಅವನಿಗೆ ಪೂಜಿಸಲು ಮಂಟಪದಲ್ಲಿ ಹೂವನಿಡಿ ಎನ್ನುತ್ತಾ, ಪಲ್ಲಕ್ಕಿ ಏರಿ ದೇವರು ಬರುವಾಗ ಪಂಚಕಜ್ಜಾಯವನ್ನು ನೈವೇದ್ಯ ಮಾಡಿ ಮಕ್ಕಳಿಗೆ ಕೊಡುವರು. ಅದನ್ನು ತಿನ್ನುವ ಮಕ್ಕಳು ಸಂತೋಷಪಡುವರು. ದೇವರ ಹತ್ತಿರ ಯಾರೂ ಕೂಡ ಬರದೇ ಸುಮ್ಮನೆ ನೋಡಬೇಕು. ದೇವರು ಪಲ್ಲಕ್ಕಿಯಿಂದ ಎದ್ದ ನಂತರ ಬಂದು ದೇವರ ಹತ್ತಿರ ಮಾತನಾಡಿ ಎಂದು ಕವಿ ಮಕ್ಕಳಿಗೆ ಹೇಳುತ್ತಾರೆ.
‘ಬಿಟ್ಟೆ ದುರ್ಗುಣವ’ ಕವನ ಬೆಟ್ಟದಲ್ಲಿ ನಾವು ಆಡುವ ಮಾತು ಅದು ಮೊಳಗಿ ಅಥವಾ ಪ್ರತಿಧ್ವನಿಸಿ ಮತ್ತೆ ವಾಪಸ್ ಬರುವುದರ ಬಗ್ಗೆ ಇದೆ. ಕೆಟ್ಟದ್ದು ಹೇಳಿದರೂ, ಒಳ್ಳೆಯದು ಹೇಳಿದರೂ ಅದು ನಮಗೇ ಮರಳುತ್ತದೆ. ಆದ್ದರಿಂದ ನಾವು ಒಳ್ಳೆಯದನ್ನೇ ಹೇಳಬೇಕು. ನಾವು ಏನನ್ನು ಕೊಡುತ್ತೇವೆಯೋ ಅದು ನಮಗೆ ಮರಳುತ್ತದೆ ಎನ್ನುವ ನೀತಿ ಇದರಲ್ಲಿದೆ. ಇದನ್ನೇ ಕವಿ
ಬೆಟ್ಟವಿದು ಪ್ರತಿಧ್ವನಿಯ ಸೋಜಿಗ
ಕೊಟ್ಟುದನೆ ಕೊಡುವ
ಸೃಷ್ಟಿ ನಿಯಮಕ್ಕೆ ಸಾಕ್ಷಿಯಾಗಿದೆ
ಬಿಟ್ಟೆ ದುರ್ಗುಣವ
ಎನ್ನುತ್ತಾರೆ.
‘ಬೆಳಕು ಹೆಚ್ಚಿತು’ ಎನ್ನುವಲ್ಲಿ ಅರಿವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ತಿಳಿವನ್ನು ಹಂಚಿಕೊಳ್ಳಬೇಕು. ಹೇಗೆಂದರೆ, ಹಣತೆಯನ್ನು ಹಚ್ಚುವ ಮೂಲಕ ಜಗತ್ತಿಗೆ ಬೆಳಕನ್ನು ಕೊಡುತ್ತದೆ. ನಾವು ಸಹ ಕುಳಿತುಕೊಂಡ ಜಾಗದಲ್ಲೇ ಒಂದು ನಗೆಯನ್ನು ಬೀರಿದರೆ ಅದು ಇತರರನ್ನು ಆಕರ್ಷಿಸುತ್ತದೆ. ದೀಪ ಕತ್ತಲೆಯನ್ನು ಓಡಿಸುವಂತೆ ನಾವು ಸಹ ನಮ್ಮ ಜ್ಞಾನದಿಂದ ವಿಷಯವನ್ನು ತಿಳಿದುಕೊಳ್ಳಬೇಕು ಎನ್ನುತ್ತಾರೆ. ‘ಹಬ್ಬ ತರುವುದು ಹಾವಳಿ’ಯಲ್ಲಿ ಸಾಲು ಹಣತೆಗೆ ದೀಪ ಹಚ್ಚಲು ಸಂಭ್ರಮದ ದೀಪಾವಳಿ ಬರಬೇಕು. ಬಾಣ, ದುರುಸು, ಪಟಾಕಿ ಸಿಡಿಸಲು ಹಬ್ಬ ತರುವುದು ಹಾವಳಿ ಎಂದು ವರ್ಣಿಸುತ್ತ ಹಬ್ಬದಲ್ಲಿ ಗೂಡು ದೀಪವನ್ನು ಕಟ್ಟುವುದು, ಪಟಾಕಿಯನ್ನು ಸಿಡಿಸುವುದು ಮಕ್ಕಳಿಗೆ ವಿಶೇಷ. ಆದರೆ ಪಟಾಕಿಯಿಂದ ಹಿತವಿಲ್ಲ. ಇದರ ಬೇಗೆ ಏತಕ್ಕೆ ಎಂದು ಕೇಳುವ ಕವಿಗೆ ಬೇಸರ ಕಳೆಯುವಂತಹ ಬೆಳಕನ್ನು ನಾವು ನೀಡಬೇಕು ಎಂದು ಕರೆ ಕೊಡುತ್ತಾರೆ.
‘ಮೊಬೈಲು ಬೇಕು’ ಕವನ ಅಂಗೈಯೊಳಗೆ ವಿಶ್ವವನ್ನಡಗಿಸಿ ಮಿಂಚುತ್ತಿರುವ ಮೊಬೈಲ್ ಎಷ್ಟೊಂದು ಬಗೆಯಲ್ಲಿ ಉಪಯೋಗವಾಗುತ್ತದೆ. ಇದರಲ್ಲಿ ಕಲಿಯುವುದೇ ಹೆಚ್ಚಿದೆ ಎನ್ನುವ ಮಗು, ಅಪ್ಪ ನನಗೆ ಮೊಬೈಲ್ ಬೇಕು ಎಂದು ಹೇಳುತ್ತದೆ. ‘ಒಗಟನು ಬಿಡಿಸಿದೆ ನಾನಣ್ಣ’ ಕವಿತೆ ಮಕ್ಕಳ ಜ್ಞಾನ ಸಾಮರ್ಥ್ಯ
ಪರೀಕ್ಷಿಸುವುದಾಗಿದೆ. ಸುಮಾರು ೧೦ ಒಗಟುಗಳನ್ನು ಇಲ್ಲಿ ನೀಡಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕುಂತಲ್ಲಿ, ನಿಂತಲ್ಲಿ ಇಂತಹ ಒಗಟುಗಳು ಕೇಳಿಬರುತ್ತವೆ. ಇವು ಮಕ್ಕಳ ಮನದ ಮೇಲೆ ಅಗಾಧ ಜ್ಞಾನದ ಪ್ರಭಾವ ಬೀರುವಂತಹವು. ‘ಸೈಕಲ್ ಸವಾರಿ’ಯಲ್ಲಿ ಸೈಕಲ್ ಕಲಿಯಲು ಯತ್ನಿಸುವಾಗ ಬಿದ್ದುದ್ದು, ನೆತ್ತರು ಸುರಿಸಿದು, ಚಕ್ರಕ್ಕೆ ಗಾಳಿಯನ್ನು ತುಂಬಿದ್ದು, ಶಾಲೆಗೆ ಬೇಗನೆ ಹೋಗಿದ್ದು, ಹಿಂಬದಿಗೆ ಮಕ್ಕಳನ್ನು ಕೂಡ್ರಿಸಿಕೊಂಡು ಮೆರೆದಾಡಿದ್ದು ಮುಂತಾದ ಸಂಭ್ರಮವನ್ನು ವಿವರಿಸುತ್ತಾರೆ. ‘ಮಾವಿನಕಾಯಿ ಕೊಯ್ಯಿರಿ’ ಕವನ ಸಹ ಬಾಲ್ಯದಲ್ಲಿದ್ದಾಗ ಮಧ್ಯಾಹ್ನದ ಉರಿಬಿಸಿಲಲ್ಲಿ ಸದ್ದನು ಮಾಡದೆ ತೋಟಕ್ಕೆ ನುಗ್ಗಿದ್ದು, ಮಾವಿನ ಮರ ಹತ್ತಿ ಕಾಯಿ ಕೊಯ್ಯುವಾಗ ತೋಟದಲ್ಲಿದ್ದ ನಾಯಿಯು ಬೊಗಳುವುದು, ತೋಟದ ಮಾಲೀಕ ಭಟ್ಟರ ಹೆಂಡತಿ ಸೊಂಟ ಮುರಿಯುವೆ ಎಂದು ಎಚ್ಚರಿಸಿದ್ದು ಮತ್ತು ಬೈದಿದ್ದನ್ನು ವಿವರಿಸುತ್ತಾರೆ.
‘ಟಿವಿ ಎಂಬ ಮಾಯಾ ಪೆಟ್ಟಿಗೆ’ ಕವನದಲ್ಲಿ ಟಿವಿಯಿಂದ ಏನೇನು ಉಪಯೋಗವಿದೆ. ದಿನವಿಡೀ ಅದನ್ನು ನೋಡುತ್ತ ಕುಳಿತರೆ ಏನೆಲ್ಲಾ ಅಪಾಯವಿದೆ ಎನ್ನುವುದನ್ನು ಮಕ್ಕಳು ಅರ್ಥವಾಗುವಂತೆ ಚಿತ್ರಿಸುತ್ತಾ,
ದಿನವಿಡಿ ನೋಡುತ ಇದ್ದರೆ ನಮ್ಮನು
ದಾಸ್ಯದ ಬಲೆಗೆ ನೂಕುವುದು
ಯಾವುದು ಬೇಕೋ ಅಷ್ಟೇ ನೋಡಲು
ಸಂತೋಷದ ಸವಿ ಸೋಕುವುದು.
ಎನ್ನುತ್ತಾರೆ. ಮೊದಲ ಮಳೆ ಬಂದಾಗ ಮಕ್ಕಳು ಕೊಡುವ ಖುಷಿ ಮತ್ತು ಸಂಭ್ರಮವನ್ನು ‘ಮಳೆ ಬಂತು ಮಳೆ’ ಎಂಬ ಕವನದಲ್ಲಿ ವಿವರಿಸಿದ್ದರೆ, ನವಿಲಿನ ನೃತ್ಯಕ್ಕೆ ಜಗದೊಳಗೆ ಅದಕ್ಕೆ ಯಾವುದೂ ಹೋಲಿಕೆ ಇಲ್ಲ. ಅದಕ್ಕೆ ಕಿರೀಟವನ್ನು ಇಟ್ಟವರು ಯಾರು ಎಂದು ಪ್ರಶ್ನಿಸುತ್ತಾರೆ. ‘ಸುಮ್ಮನೆ ಮಲಗು’ ಕವನದಲ್ಲಿ ಚಿಕ್ಕ ಮಕ್ಕಳನ್ನು ಮಲಗಿಸಲು ಗುಮ್ಮ ಬರುವನೆಂದು ಎಂದು ಹೆದರಿಸುವುದನ್ನು, ‘ಯಕ್ಷಗಾನ ಮೇಳ’ದಲ್ಲಿ ಅಲ್ಲಿನ ವೇಶ, ಒಡ್ಡೋಲಗ, ಚಂಡೆ, ಮೃದಂಗದ ಮಾರ್ದನಿ, ರಾಕ್ಷಸರ ಆಭsಟ, ರೋಮಾಂಚನದ ರಾತ್ರಿಯನ್ನು ವರ್ಣಿಸಿದ್ದಾರೆ. ‘ಉಪ್ಪು ಬೇಕೇ ಉಪು’ ಮಕ್ಕಳ ನ್ನುಸ ಎಏಳಯುವ ಮತ್ತೊಂದು ಕವನ. ಬೆನ್ನ ಮೇಲೆ ಮಕ್ಕಳನ್ನು ಉಪ್ಪಿನ ಮೂಟೆಯಂತೆ ಹೊತ್ತು ಉಪ್ಪು ಬೇಕೇ ಉಪ್ಪು ಎಂದು ಆಟವಾಡುವುದನ್ನು ಸುಂದರ ಕವನದ ಮೂಲಕ ಇಲ್ಲಿ ನೇಯ್ದಿದ್ದಾರೆ.
‘ಬಣ್ಣದ ಚಿಟ್ಟೆ’ ಕವನದಲ್ಲಿ ಚಿಟ್ಟೆಯ ಸೌಂದರ್ಯಕ್ಕೆ ಕವಿ ಮಾರುಹೋಗಿದ್ದಾನೆ. ಅದರ ಮಿರುಗುವ ರೆಕ್ಕೆ, ವಯ್ಯಾರವನ್ನು ಕುರಿತು ಬರೆಯುತ್ತಾರೆ.
‘ಬಣ್ಣದ ಚಿಟ್ಟೆ ಬಣ್ಣದ ಚಿಟ್ಟೆ,
ಎಲ್ಲಿಗೆ ಹೋಗಿ ಬಂದುಬಿಟ್ಟೆ
ಬ್ಯೂಟಿ ಪಾರ್ಲರ್ ಒಳಗೆ ಹೋಗಿ
ಸುಂದರಿಯಾಗಿ ಬಂದುಬಿಟ್ಟೆ
ಎಂದು ಕವನ ಆರಂಭಿಸುವ ಕವಿ ಚಿಟ್ಟೆಯ ಸೌಂದರ್ಯವನ್ನು ವಿವರಿಸುತ್ತಾರೆ. ಹೂವಿನ ಮೇಲೆ ಹೆಜ್ಜೆಯೂರಿ ಕುಳಿತುಕೊಳ್ಳುವುದು, ಯಾರಲ್ಲೂ ಮಾತನಾಡದಿರುವುದು, ಹೂವಿಂದ ಹೂವಿಗೆ ಹಾರುವುದು, ಹತ್ತಿರ ಬರುವುದು ಮನಸ್ಸಿಗೆ ಸಂತೋಷವನ್ನು ತಂದುಕೊಡುವುದನ್ನು ವರ್ಣಿಸಿದ್ದಾರೆ.
ಕೊನೆಯದಾಗಿ, ರಜೆಯಲ್ಲಿ ಇಂತಹ ಮನಾಕರ್ಷಕ, ರಸದೂಟ ಬಡಿಸುವ ಕವನಗಳನ್ನು ಮಕ್ಕಳು ಓದಿದಲ್ಲಿ ಹೊಸ ವಿಷಯದ ಜೊತೆಗೆ ಸಾಹಿತ್ಯಿಕ ಜ್ಞಾನವೂ ಬೆಳೆಯುತ್ತದೆ. ಮಕ್ಕಳಿಗೆ ಇದು ಒಂದು ಆದರ್ಶವೆನಿಸುವ ಪದ್ಯಗಳ ಗುಚ್ಛವಾಗಿದೆ. ಶಾಲಾ ಪಠ್ಯ್ಟಗಳಲ್ಲಿ ಇವು ಅಳವಡಿಕೆ ಆಗಿದ್ದರೆ, ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಸಾಮರ್ಥ್ಯವನ್ನು ಹೆಚ್ಚಿಸುತ್ತಾ, ಕಲ್ಪನಾಶಕ್ತಿಯ ಜೊತೆಗೆ ಸಾಹಿತ್ಯ ಸಂಗೀತದ ರುಚಿಯನ್ನೂ ಸಹ ಮೂಡಿಸುವಲ್ಲಿ ಇದು ಯಶಸ್ವಿಯಾಗುತ್ತಿತ್ತು.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ,

Comments
Post a Comment