ಖಗೋಳ ಸಾಹಸಯಾತ್ರೆ ಹಿನ್ನೆಲೆಯ 
‘ಆಕಾಶಕಾಯ’ 


‘ಆಕಾಶಕಾಯ’ ಇದು ಒಂದು ಕಾಲ್ಪನಿಕ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿ. ಕಲಬುರ್ಗಿಯ ಸಾಹಿತಿ, ಸಂಶೋಧಕಿ ಶ್ರೀದೇವಿ ರಾಠೋಡ್  ಇದರ ರಚನಾಕಾರರು. ಅಂತರಿಕ್ಷಕ್ಕೆ ಹೋಗಿ ಬಂದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಸಾಹಸಯಾತ್ರೆ ಹಿನ್ನೆಲೆಯ ಕಥೆಯನ್ನೇ ಇಟ್ಟುಕೊಂಡು ಕೆಲವು ವೈಜ್ಞಾನಿಕ ಅಂಶಗಳ ಮಾಹಿತಿ ಆಧಾರದ ಮೇಲೆ ಈ ಕಥೆ ನಿರೂಪಿತವಾಗಿದೆ. ಬಾಹ್ಯಾಕಾಶದಲ್ಲಿ ಒಂದು ವಾರದ ಬದಲು  ೯ ತಿಂಗಳು ಸಂಕಷ್ಟದಲ್ಲಿ ಕಳೆದ ಸುನಿತಾ- ವಿಲ್ಮೋರವರ ವಿವರವನ್ನೇ ಇಟ್ಟುಕೊಂಡು ಸಾಹಸ ಮತ್ತು ರೋಚಕದ ಕಥೆಯನ್ನು ಹೆಣೆದಿದ್ದಾರೆ. ಅವರು ಭೂಮಿಗಿಳಿದ ನಂತರ ಈ ಕಥೆ ರಚನೆಯಾಗಿದೆ. 

ಈ ಕಾದಂಬರಿ ಬರೆಯುವಾಗ ಲೇಖಕಿ ಖಗೋಳಶಾಸ್ತ್ರದ ಗಹನ ಅಧ್ಯಯನ ಮಾಡಿರುವುದನ್ನು ಅವರ ಕಥೆಯಲ್ಲಿ ಕಾಣಬಹುದು. ಕಾಲ್ಪನಿಕವಾದರೂ ಇದರಲ್ಲಿ ನೈಜತೆಯ ಮೆರುಗಿದೆ. ಭೂಮಿಯಲ್ಲಿ ವಾಸ್ತವಿಕ ಎನ್ನಬಹುದಾದ ಬೀಜಗಳನ್ನು ಬಿತ್ತಿ  ಒಂದು ಕುತೂಹಲಕರವಾದ ಸೃಜನತೆಯ ಫಸಲನ್ನು ಬೆಳೆದಿದ್ದಾರೆ. ಆದ್ದರಿಂದ ಓದುಗ ಕಲ್ಪನೆಯ ಸಾಗರದಲ್ಲಿ ಮುಳುಗುವಂತೆ ಮಾಡುತ್ತದೆ.  

ಪ್ರಸ್ತುತ ಕಾದಂಬರಿಯಲ್ಲಿ ಲೇಖಕಿ ಆಯ್ದುಕೊಂಡಿರುವ ಕಾಲ ೨೦೩೫. ಖಗೋಳ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವ ರಾಮದಾಸ್ ಎಂಬ ವಿಜ್ಞಾನಿ  ತನ್ನ ಮಗಳು ವಿನಿತಾ ಮತ್ತು ತನ್ನ ಮನೆಕೆಲಸದ ಹೆಂಗಸಿನ ಮಗ ವಿಕ್ರಂನನ್ನು ಸ್ಪೇಸ್ ಕ್ರಾಫ್ಟ್-೧ ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸುವ ಯೋಚನೆ ಮಾಡುತ್ತ್ತಾರೆ. ಇಬ್ಬರಿಗೂ ಸಾಕಷ್ಟು ತರಬೇತಿಯನ್ನು ಕೊಡಿಸುತ್ತಾರೆ. ತರಬೇತಿಯಲ್ಲಿ ಯಂತ್ರ ಕೆಟ್ಟರೆ ಅದನ್ನು ಸರಿಪಡಿಸಿಕೊಳ್ಳುವುದು, ಪ್ಯಾರಾಚೂಟ್ ಉಪಯೋಗ, ಪ್ರತಿಕೂಲ ಪರಿಸ್ಥಿತಿ ಎದುರಾಗದ ಎದುರಾಗಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಆಹಾರ-ಪಾನೀಯಗಳ ನಿಯಂತ್ರಣ,  ಆಮ್ಲಜನಕದ ಕೊರತೆಯಾದರೆ ನಿಭಾಯಿಸುವ ರೀತಿ, ಅನ್ಯಗ್ರಹಗಳ ಸಂಪರ್ಕವಾದರೆ ಹೇಗೆ ಎದುರಿಸಬೇಕು, ಆರೋಗ್ಯ ಏರುಪೇರಾದಾರೆ ಯೋಗಗಳಿಂದ ನಿಯಂತ್ರಿಸುವುದು, ಭೂಕೇಂದ್ರವನ್ನು ಸಂಪರ್ಕಿಸುವುದು, ಸಂಜ್ಞೆ ನೀಡುವುದು ಮೊದಲಾದ ವಿಷಯಗಳ ಬಗ್ಗೆ ತರಬೇತಿ ಕೊಟ್ಟು ಕಳುಹಿಸಲಾಗುತ್ತದೆ.

ನಂತರ ಅವರಿಬ್ಬರು ೨೦೧೫ರ ಆಗಸ್ಟ್ ೧೫ರಂದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಕಂಪ್ಯೂಟರ್, ಡ್ರೋನ್, ಸುರಕ್ಷತಾ ಯಂತ್ರಗಳೊಂದಿಗೆ ಪ್ರಪಂಚಕ್ಕೇ ಸವಾಲಾದ ಭಾರತೀಯ ಸ್ಪೇಸ್ ಕ್ರಾಫ್ಟ್ ವಿವಿ-೧ ಕ್ಯಾಪ್ಸೂಲ್ ಮೂಲಕ  ಒಂದು ವರ್ಷದ ಯಾತ್ರೆಗಾಗಿ ಭೂಮಿಯಿಂದ ನೆಗೆಯುತ್ತಾರೆ. ಇವರ ಉಪಗ್ರಹ ಭೂಮಿಯನ್ನು ಒಂದು ಸುತ್ತು ಹಾಕಿ ವಿವಿ -೧ ಕ್ಯಾಪ್ಸುಲನ್ನು ಬಿಟ್ಟು ವಾಪಸಾಗುತ್ತದೆ. ಕ್ಯಾಪ್ಸುಲ್‌ನಲ್ಲಿ ಗುರುತ್ವಾಕರ್ಷಣ ಶಕ್ತಿ ಇರದ ಕಾರಣ ವಿನಿತಾ ಮತ್ತು ವಿಕ್ರಂ ತೇಲುತ್ತಿದ್ದರು. ಇದಕ್ಕೆ ಹೊಂದಿಕೊಂಡ ನಂತರ ವಿನಿತಾಳ ಋತುಚಕ್ರದಲ್ಲಿ ವ್ಯತ್ಯಾಸವಾಗುತ್ತದೆ. ಬೆಳಕು, ಗಾಳಿ, ಶಬ್ದ ಮೊದಲಾದ ಬಗ್ಗೆ ಅವರು ದಾಖಲಿಸುತ್ತಾ ಸಾಗುತ್ತಾರೆ. ಬಾಹ್ಯಾಕಾಶದಲ್ಲಿ ಮುರಿದ ಉಪಗ್ರಹಗಳ ಭಾಗಗಳಿಂದಾಗಿ ರಾಶಿ ಕಸ ತುಂಬಿಕೊಂಡಿದ್ದು, ಅವೆಲ್ಲ ಇವರ ಕ್ಯಾಪ್ಸೂಲಿಗೆ ಅಡ್ಡಬರುತ್ತಿದ್ದವು. ಹೀಗೆಯೇ ಎರಡು ತಿಂಗಳು  ಅದು ಭೂಮಿಯನ್ನು ಸುತ್ತಿತ್ತಿತ್ತು. ಅದರ ವಿವರವೆಲ್ಲ ಭೂಮಿಯ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತಿತ್ತು.

ಭೂಮಿಯನ್ನು ಬಿಟ್ಟು ಅನ್ಯಗ್ರಹಗಳತ್ತ ಸಾಗಲು ಭೂಮಿಯ ಕೇಂದ್ರದಿಂದ ಆದೇಶ ಹೋಗುತ್ತದೆ. ಅದಕ್ಕನುಗುಣವಾಗಿ ಮಂಗಳ, ಶುಕ್ರ, ಶನಿ ದಾಟುತ್ತ ಅಲ್ಲಿಯ ಚಿತ್ರಗಳನ್ನು ಭೂಮಿಗೆ ರವಾನಿಸುತ್ತಿದ್ದರು. ಶನಿಗ್ರಹ ದಾಟಿದ ಮೇಲೆ ಕ್ಷುದ್ರಗ್ರಹವೊಂದು ಇವರಿದ್ದ ಕ್ಯಾಪುಲ್‌ಗೆ ಡಿಕ್ಕಿ ಹೊಡೆಯುತ್ತದೆ. ಇದರಿಂದ ದಿಕ್ಕು ದೆಸೆಯಿಲ್ಲದೆ ಗತಿಯನ್ನು ಕ್ಯಾಪ್ಸೂಲ್ ಪಡೆಯುತ್ತದೆ. ಯಾವ ಕಡೆ ಹೋಗುತ್ತ್ತಿದೆ ಎನ್ನುವುದನ್ನು ಅರಿಯಲಾಗದ ಸ್ಥಿತಿ ಎದುರಾಗುತ್ತದೆ. ಸೌರಮಂಡಲವನ್ನು ಬಿಟ್ಟು ಕರ್ಕಶ ದ್ವನಿಯಲ್ಲಿ ಅದು ಸಾಗುತ್ತದೆ. ಇದರಿಂದ ಅವರು ಅನೇಕ ಎಡರು- ತೊಡರು- ಸಂಕಷ್ಟ ಎದುರಿಸಬೇಕಾಗುತ್ತದೆ. ಭೂ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗುತ್ತದೆ. ಕ್ಯಾಪ್ಸೂಲ್ ನಿಯಂತ್ರಿಸಲಾಗದೆ ಸೋತು ದೇವರಿಗೆ ಶರಣಾಗುತ್ತಾರೆ. ಅನ್ಯಲೋಕದ ವಿಷಜೀವಿಯಿಂದಾಗಿ  ವಿನಿತಾ ಜೀವ ತ್ಯಜಿಸುವಂತಾಗುತ್ತದೆ. ವಿನಿತಾಳಿಲ್ಲದೆ ಹತಾಶ ಸ್ಥಿತಿಗೆ ತಲುಪುತ್ತಾನೆ ವಿಕ್ರಮ್. ಆದರೆ ವಿನಿತಾ ಜೀವ ಬಿಡುವ ಮುನ್ನ  ಕೆಲವು ಜೀವಿಗಳಿಗೆ ಜೀವ ಕೊಡುತ್ತಾಳೆ.  ಅವಳನ್ನು ಸಂಗ್ರಹಕೋಶದಲ್ಲಿಟ್ಟು  ಮುಂದೆ ಸಾಗುವಾಗ ಬೇರೊಂದು ಗ್ರಹದ ವಲಯಕ್ಕೆ ಕ್ಯಾಪ್ಸೂಲ್ ಹೋಗುತ್ತದೆ.  

ವಿಕ್ರಂ ತನ್ನ ಕೋಶದಿಂದ ಹೊರಬರುತ್ತಾನೆ. ಹೀಲಿಯಂ ಹೈಡ್ರೋಜನ್ ಅನಿಲ ಲಭಿಸಿದ್ದರಿಂದ ಅದರ ಮೂಲಕ ಕೆಲವು ಜೀವಿಗಳನ್ನು ಸಂಗ್ರಹಿಸಿ ಕ್ಯಾಪ್ಸೂಲ್ ಮೂಲಕ ಭೂಮಿಗೆ ಸಂದೇಶ ಕಳುಹಿಸುತ್ತಾನೆ. ಆದರೆ ಉತ್ತರ ಬರುವುದೇ ಇಲ್ಲ. ಒಮ್ಮೆ ಸಂದೇಶ ಬಂದಿದ್ದನ್ನು ಗಮನಿಸಿದ ಸಂಸ್ಥೆಯವರು ಸಿಗ್ನಲ್ ಕನೆಕ್ಷನ್ ಗೆ ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಮತ್ತೆ ಒಂದು ದಿನ ಸಂದೇಶ ಬಂದಾಗ ರಾಮದಾಸ್ ಬಳಿ ಸಂಸ್ಥೆಯ ಮುಖ್ಯಸ್ಥೆ ತೆರಳಿ ಮಾಹಿತಿ ಕೊಡುತ್ತಾರೆ. . ಎಲ್ಲಾ ದೇಶದ ಸ್ಪೇಸ್ ಸೆಂಟರ್‌ಗಳಿಗೆ ಮಾಹಿತಿ ಕೊಡುವಂತೆ ಸೂಚಿಸುತ್ತಾರೆ. ಎರಡು ದಿನದ ನಂತರ ಮತ್ತೆ ಮೆಸೇಜ್ ಬರುತ್ತದೆ. ಅದರಲ್ಲಿ ಹೆಲ್ಪ್ ಮಿ. ನಿಯರ್ ನೆಪ್ಚೂನ್, ಸೇವ್ ಮಿ ಎಂದಿರುತ್ತದೆ. ವಿವಿ-೧ ಎಲ್ಲಿದೆ ಎಂದು ಹುಡುಕಲಾರಂಭಿಸಿದಾಗ ಅದು ಅಮೆರಿಕದ ಸ್ಪೇಸ್ ಸ್ಟೇಶನ್ ನಲ್ಲಿದೆ ಎಂದು ಗೊತ್ತಾಗುತ್ತದೆ. ಅಮೆರಿಕದವರು ಅಲ್ಲಿಗೆ ಹೋದಾಗ ಅದು ಗುರುಗ್ರಹದ ಹತ್ತಿರ ತಿರುಗುತ್ತಿತ್ತು. ಅಲ್ಲಿಂದ ಅಮೆರಿಕನ್ ಸ್ಪೇಸ್ ಸೆಂಟರ್ ಗೆ ಕರೆತರುತ್ತಾರೆ.  

ಆಗಲೇ ಇವರು ಬಾಹ್ಯಾಕಾಶಕ್ಕೆ  ಹೋಗಿ ೫೦ ವರ್ಷ ಕಳೆದಿತ್ತು. ಸಂದೇಶವೇ ಬಾರದಿದ್ದರಿಂದ ಇವರಿಬ್ಬರೂ ತೀರಿಕೊಂಡಿದ್ದಾರೆಂದೇ ಮಾಧ್ಯಮಗಳು ವಿವರಿಸುತ್ತಿದ್ದವು. 

 ಕ್ಯಾಪ್ಸೂಲ್ ಭೂಮಿಗೆ ಬಂದು ಇಳಿದಾಗ ವಿಕ್ರಮ್ ಮೂಳೆಗಳಿಗೆ ಚರ್ಮದ ಹೊದಿಕೆ ಇಲ್ಲದೆ, ಹಲ್ಲುಗಳಿಲ್ಲದೆ, ನಿಯಂತ್ರಣವಿಲ್ಲದ ಕಾಲುಗಳಿಂದ ಕೂಡಿರುತ್ತಾನೆ.  ಸುಧಾರಿಸಿಕೊಳ್ಳಲು ಹಲವಾರು ವರ್ಷ ಬೇಕಾಗುತ್ತದೆ. ವಿಕ್ರಮ್ ನಂತರ ಹೇಗೆ ಬದುಕುಳಿದ. ಅವನ ಸೇವೆಯ ಉಪಯೋಗವಾಯಿತೇ? ಅವನಿಂದ ಏನೇನು ಹೊಸ ಸಂಶೋಧನೆ ನಡೆಯಿತು, ವಿನಿತಾಳ ದೇಹದಿಂದ ಜೀವಿಗಳಿಗೆ ಜೀವ ಕೊಟ್ಟ ನಂತರ ಅದು ಹೇಗೆ ಬೆಳವಣಿಗೆ ಕಂಡಿತು, ಮನುಷ್ಯರೂಪಿಯಾಗಿ ಬೆಳೆದುಬಂದೀತೇ? ಅದರ ಹೆಸರೇನು? ವಿಕ್ರಂ -ವಿನೀತಾಳ ನೆನಪಿಗಾಗಿ ಮಾಡಿದ ಕೆಲಸವೇನು? ಯಾಲಿ ಮುಂದೆ ಹೇಗೆ ಬೆಳೆಯಿತು? ಅದರಿಂದ ಸಮಾಜಕ್ಕಾದ ಲಾಭವೇನು ಎನ್ನುವ ವಿಚಾರವನ್ನು  ಈ ಕಾದಂಬರಿಯಲ್ಲಿ ಲೇಖಕಿ ಕಟ್ಟಿಕೊಟ್ಟಿದ್ದಾರೆ.

- ದತ್ತಾತ್ರೇಯ ಹೆಗಡೆ

...........................


Comments

Popular posts from this blog