ಹೊಸ ಹೊಳಹಿನ 
"ಒಂದು ಹನಿ ಮೌನ"


ಇದೊಂದು ಹನಿಗವನದ ಸಂಕಲನ. ಕಣ್ಣೆದರು ಕಂಡದ್ದನ್ನು ಮತ್ತು ಪರಿಭಾವಿಸಿದ ಬಾಳನ್ನು ಕವಯಿತ್ರಿ ಅಮೃತಾ ಮೆಹಂದಳೆ  ಅವರ ಎರಡನೆಯ ಹನಿಗವನ ಕೃತಿ ಒಂದು ಹನಿ ಮೌನದ ಮೂಲಕ ನಿರೂಪಿಸಿದ್ದಾರೆ. ಈ ಕೃತಿಯಲ್ಲಿ ಯಾವ ಹನಿಗೂ ಪ್ರತ್ಯೇಕ ತಲೆಬರಹವಿಲ್ಲ. ಬದುಕೇ, ಈ ಪ್ರೇಮ, ಹಾ! ವಿಷಾದ ಎಂಬ ಮೂರು ವಿಭಾಗಗಳಲ್ಲಿ ಹನಿಗವನ ತೆರೆದಿಟ್ಟಿದ್ದಾರೆ. ಜೀವನದ ಅಪೇಕ್ಷೆ, ನಿರಾಸೆ, ಅನಿವಾರ್‍ಯತೆ,ವಿನೋದ, ವಿಡಂಬನೆ, ಮುಗ್ಧ, ಪ್ರಬುದ್ಧ, ಪ್ರೀತಿ, ಪ್ರೇಮ, ಬಯಕೆ, ವಿರಹ, ನೋವು, ಸಾವಿನ ಅರಿವು,  ಸುಖ, ದುಃಖ, ನೋವು- ನಲಿವು, ವಿಷಾದ, ನಿರುದ್ವಿಗ್ನತೆ, ನಿರ್ಲಿಪ್ತತೆ ಮೊದಲಾದವುಗಳಿಂದ ಈ ಮೂರು ಭಾಗದಲ್ಲಿನ ಹನಿಗಳು  ಕೂಡಿವೆ.

ಅತಿ ಚಿಕ್ಕ ಕೃತಿಯಾದರೂ ಇಲ್ಲಿನ ಹನಿಗಳು  ಹೊಸ ಅರ್ಥ ಹೊಳೆಯಿಸುವಂತಹವು. ಎಂದೂ ಮುಗಿಯದ ಭಾವಗಳಿವೆ.  ಹಲವು ಹತ್ತು ಸಂವೇದನೆಗಳನ್ನು ಮತ್ತದರ ಪರಿಣಾಮವನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದ ಓದುಗನ ಚಿತ್ತ ಚಿಂತನೆಯಾಚೆಗೆ ಹೋಗುತ್ತದೆ.  

ಈ ಕೃತಿಯಲ್ಲಿ ಓದುಗನನ್ನು ಸೆಳೆಯಬಲ್ಲ ಕೆಲವು ಸಾಲುಗಳು ಇಲ್ಲಿವೆ:


ಈರುಳ್ಳಿ ಕೊಚ್ಚುವುದು

ಹೂಹೃದಯದ

ಗಟ್ಟಿಗಿತ್ತಿಯರ

ಸುಂದರ ಹವ್ಯಾಸ..

***

ಅಗತ್ಯಗಳ

ಭಾರ ಇಳಿದಷ್ಟೂ

ಮನಸು ಹಗುರ

****

ಕಿವಿಗಡಚಿಕ್ಕುವುದು

ಶಬ್ದ ಮಾತ್ರವಲ್ಲ

ಮೌನವೂ...

***

ಮಳಲ ಮೇಲೆ

ಬರೆದ ಚಿತ್ರದಂತೆ

ಕ್ಷಣಿಕವಲ್ಲ ಒಲುಮೆ

ನಿಜದೊಲವು

ಶಿಲೆಯಚಲ

ಕಲಾತ್ಮಕ ಪ್ರತಿಮೆ

ಈ ರೀತಿಯ ಕಲಾತ್ಮಕ ಹೋಲಿಕೆಗಳು ಇದರಲ್ಲಿ ಮನಸೆಳೆಯುತ್ತವೆ.


 ಗಾಳಿ

 ತುಂಬಿ ಹಾರುವ

ಪ್ರತಿ

 ಬಲೂನಿಗಾಗಿಯೂ

 ಸೂಜಿಯೊಂದು

ಸೃಷ್ಟಿಯಾಗೇ

 ಬಿಟ್ಟಿರುತ್ತದೆ

ಎನ್ನುವ ಗಾದೆ ಮಾತಿನಂತಹ, ಇನ್ನೂ ಕೆಲವೆಡೆ ರೂಪಕದಂತಹ, ಜೀವನದ ಪಾಠದಂತಹ ಸಾಲುಗಳು ಇಲ್ಲಿವೆ.  

ಕವನವೆಂದರೆ ತನ್ನ ಪಾಲಿಗೆ ಹೃದಯವರಳಿಸುವ ಹೂಗೊಂಚಲು, ಸದಾ ಕೈ ಹಿಡಿಯುವ ಸಂಗಾತಿ  ಎನ್ನುತ್ತಲೇ ಹನಿವನಗವನ್ನು ಆರಂಭಿಸುತ್ತಾರೆ. ಆತ್ಮೀಯರ ಒತ್ತಾಯಕ್ಕೆ  ಮೌನ ಕವಿತೆಯಾಗಿ ಹನಿಯುತ್ತಿದೆ. ಕವಿತೆಯಿಲ್ಲದೆ ಸುಖವಿಲ್ಲ ಎಂದು ಹೇಳುತ್ತ್ತಾರೆ ಕವಯಿತ್ರಿ.

ಕೃತಿಗೆ ಮುನ್ನುಡಿಯನ್ನು ಕವಿ ವಾಸುದೇವ ನಾಡಿಗ ಮತ್ತು ಬೆನ್ನುಡಿಯನ್ನು ಬಿ. ಆರ್. ಲಕ್ಷ್ಮಣರಾವ್  ಬರೆದಿದ್ದಾರೆ. ಕವಿ ಲಕ್ಷ್ಮಣರಾವ್ ಅವರು, ಮಾತನ್ನು ತುಂಬಿಕೊಂಡ ಮೌನ ಮತ್ತು ಅನೇಕವನ್ನು ಇದು ಒಳಗೊಂಡಿದೆ.  ಆಧುನಿಕ ಹೆಣ್ಣಿನ ಪ್ರಣಯ ಜಗತ್ತಿನ ಆಲಾಪ, ವಿಲಾಪ ಮತ್ತು ಸಲ್ಲಾಪಗಳೇ ಈ ಹನಿಗವನಗಳ ಭಾವಕೋಶವಾಗಿದೆ. ಹೊಸ ದೃಷ್ಟಿ, ಹೊಸ ಚಿತ್ರ ಮತ್ತು ಹೊಸ ನುಡಿಗಟ್ಟುಗಳಿಂದ ವೈಶಿಷ್ಟ್ಯವಾಗಿವೆ ಎಂದಿದ್ದಾರೆ.

ಒಟ್ಟಿನಲಿ, ಇಲ್ಲಿನ ಹನಿಗಳು ಹೊಸ ವಿಚಾರವನ್ನು ಬೆಳಕಿನಂತೆ ಸ್ಫುರಿಸುತ್ತವೆ. ವಿಶಾಲವಾದ ಅರ್ಥವನ್ನು ನಾವು ಯೋಚಿಸುತ್ತ ಹೋದಂತೆ ನೀಡುತ್ತವೆ. ಇಲ್ಲಿನ ಸಾಲ್ಮಿಂಚು ಓದುಗರನ್ನು ಗಾಢವಾಗಿ ತಟ್ಟುತ್ತದೆ. ಓದುಗನನ್ನು ಸೆಳೆದುಕೊಳ್ಳುವ ಶಕ್ತಿ, ಮೊನಚಾದ, ಕಟು ವಾಸ್ತವ ಪ್ರಜ್ಞೆಯ  ಮತ್ತು  ಸರಳ ಸಾಲುಗಳು ಇದರಲ್ಲಿವೆ.  

Published by Dattatreya Hegde on April 16,2025

,,,,,,,,,,,,,,,,,,


Comments

Popular posts from this blog