ಸಂಸ್ಕೃತಿ, ಚರಿತ್ರೆಗಳ ಪಲ್ಲಟದ
 ಯಮುನಾ ನದಿಯ ತೀರಗಳಲ್ಲಿ...


‘ಯಮುನಾ ನದಿಯ ತೀರಗಳಲ್ಲಿ...’ ಇದು ಮಲಯಾಳಿ ಪ್ರಸಿದ್ಧ ಸಾಹಿತಿ  ಎಂ. ಮುಕುಂದನ್ ಅವರ ಕೃತಿ. ಮಲಯಾಳಿ ಕೃತಿ ‘ಯಮುನಾ ನದಿಯುಡೇ ತೀರಂಗಳಿಲ್...’ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಶಿವಮೊಗ್ಗದ ನಿವೃತ್ತ ಇಂಜಿನಿಯರ್ ಕೆ. ಪ್ರಭಾಕರನ್. ಮುಕುಂದನ್ ಜೊತೆಗೆ  ದೆಹಲಿ ಮತ್ತು ಹರಿದ್ವಾರಗಳಲ್ಲಿ  ಕೇರಳದ ಪತ್ರಕರ್ತ, ಬರಹಗಾರ ಇ. ಎಂ. ಅಶ್ರಫ್  ನಡೆಸಿದ ಒಂದು ಸಾಹಿತ್ಯ ಸಂಚಾರವಿದು. ಅವರ ಕೃತಿಗಳ ವಿಮರ್ಶಾತ್ಮಕ ವಿಶ್ಲೇಷಣೆಯ ಜೊತೆಗೆ  ವ್ಯಕ್ತಿತ್ವ ಮತ್ತು ಕೃತಿಗಳನ್ನು ಓದಿಸುವ, ಪರಿಚಯಿಸುವ ಪ್ರಯತ್ನ ಮಾಡಿದೆ.  ಕಾದಂಬರಿಗಳ ಸತ್ವವನ್ನು ನಮಗೆ ಇಲ್ಲಿ ನೀಡಿದೆ.

   ಈ ಕೃತಿಯು ದೆಹಲಿ ಹಾಗೂ ಹರಿದ್ವಾರ  ಕುರಿತು ಮುಕುಂದನ್  ಬರೆದ ‘ದೆಹಲಿ’ ಕುರಿತಾಗಿದೆ. ಮುಕುಂದನ್ ಸಾಮಾನ್ಯ ವಸ್ತುವನ್ನು ಅಸಾಮಾನ್ಯ ಎನ್ನುವಂತೆ ಚಿಂತಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿದ್ದರು. ಅರ್ಧಸತ್ಯವನ್ನು ಪೂರ್ಣಸತ್ಯವನ್ನಾಗಿಸುವ ಬರವಣಿಗೆ ಅವರಲ್ಲಿತ್ತು. ಅವರ ಕಾದಂಬರಿಯನ್ನು ಓದುವಾಗ ಬರವಣಿಗೆ ಅದ್ಭುತವಾಗಿ ಮೂಡಿ ಬಂದಿರುವುದನ್ನು ಕಾಣಬಹುದು. ಸಾಹಿತ್ಯ ಅಕ್ಷರಗಳನ್ನು ಮೀರಿದ ಅನುಭವಕ್ಕೆ ಓದುಗನನ್ನು ಕೊಂಡೊಯ್ಯಬೇಕು ಎನ್ನುವ ಮಾತಿದೆ. ಇದಕ್ಕೆ ಪ್ರಸ್ತುತ ಕಾದಂಬರಿ ಉತ್ತಮ ಉದಾಹರಣೆ.

ಈ ಕೃತಿಯಲ್ಲಿ ಒಟ್ಟು ಐದು ಅಧ್ಯಾಯಗಳಲ್ಲಿ ಅಶ್ರಫ್ ಅವರು ಮುಕುಂದನ್  ಸಂಚಾರವನ್ನು ವಿವರಿಸಿದ್ದಾರೆ.  ದೆಹಲಿಯಲ್ಲಿ ಮತ್ತು ಹರಿದ್ವಾರದಲ್ಲಿ ತಾವು ಕಂಡುಂಡ ನೆನಪುಗಳನ್ನು, ಸಾಮಾಜಿಕ ವಾತಾವರಣವನ್ನು ಈ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ. ಇಲ್ಲಿ  ಕಂಡುಕೊಂಡಂತಹ ಅನುಭವಗಳನ್ನು ಪ್ರತ್ಯಕ್ಷ ಅನುಭವಗಳ ನೆಲೆಗಟ್ಟಿನಲ್ಲಿ ತೋರಿಸಿದ್ದಾರೆ.  

  ‘ದೆಹಲಿ’ ಕಾದಂಬರಿ ಇಂದಿಗೂ ಓದುವವನನ್ನು ಬಿಟ್ಟು ಹೋಗಲಾರದಂತೆ ಉಳಿದುಕೊಂಡಿದೆ. ರಾಜಧಾನಿಯಲ್ಲಿ ನಡೆಯುವ ಅತ್ಯಾಚಾರದ ಚಿತ್ರಣ ಇದೆ, ಸಾಮಾಜಿಕ ಆತ್ಮಸಾಕ್ಷಿಯನ್ನು ಬಾಧಿಸುವ ಮರಗಟ್ಟುವಿಕೆಯನ್ನು ತೋರಿಸಲಾಗಿದೆ. ಸಮಕಾಲೀನ ಬೆಳವಣಿಗೆಗಳು ಈ ಕತೆಗಾರನಿಗೆ ಎಷ್ಟು ಶಕ್ತವಾಗಿ ಪ್ರತಿಪಾದಿಸಲು ಸಾಧ್ಯವಾಯಿತೆನ್ನುವುದನ್ನು ನಾವಿಲ್ಲಿ ಗಮನಿಸಬಹುದು. ಇದರಲ್ಲಿ ಅರವಿಂದನ್ ಎನ್ನುವನು ಕಥಾ ನಾಯಕ.  ಇದರ ಜೊತೆಗೆ ‘ಚಾಲಕನ್’ ಎಂಬ ಕಥೆ (ಇದರಲ್ಲಿ ವಯಸ್ಸಾದ ಚಾಲಕನೊಬ್ಬ ವಾಹನ ಚಾಲನೆ ವೃತ್ತಿ ಬಿಟ್ಟು ಕವಿತ್ವದೆಡೆಗೆ  ಹೊರಡುವ ಕಥೆ ಇದೆ) ಮತ್ತು ‘ಇಂದ್ರಿಯಂಗಳಿಲ್ ಶೈತ್ಯಂ’ ಎಂಬ ಕಥೆಯಲ್ಲಿ  ನಾವು ಹಿಂದೆಂದೂ ನೋಡಲು ಸಾಧ್ಯವಾಗದಿದ್ದಂತಹ  ಸಂಗೀತ ಮತ್ತು ಕಲೆಯನ್ನು ಒಳಗೊಂಡ  ವಿನೂತನ ಕಥನ ಶೈಲಿಯ ಕಥೆಯೊಂದನ್ನು ವಿಕಸನಗೊಳಿಸಿದ್ದಾರೆ.

‘ದೆಹಲಿ’ಯಲ್ಲಿ  ಶ್ರಮ ಜೀವಿಗಳ ಕಥೆಯನ್ನು ಮೊದಲ ಮತ್ತು ಎರಡನೆಯ ಅಧ್ಯಾಯದಲ್ಲಿ ತೋರಿಸುತ್ತಾರೆ ಈ ಕಾದಂಬರಿ ಜೀವನದ ಸನ್ನಿವೇಶಗಳನ್ನು, ಕಥಾ ಪಾತ್ರಗಳಲ್ಲಿ ಸೃಷ್ಟಿಸುವ ಭಾವನಾತ್ಮಕತೆಯನ್ನು ಅದ್ಭುತವಾಗಿ ಬಿಂಬಿಸಿದೆ. ಮುಕುಂದನ್  ಸುತ್ತಲಿನ ಅನುಭವ ಮಂಡಲಕ್ಕೆ ಬರುವ ಸೃಜನಶೀಲ ರಚನೆಯ ಸಾಧ್ಯತೆಗಳನ್ನು ಇಲ್ಲಿ ಕಾಣಬಹುದು.   ಕಾದಂಬರಿಯಲ್ಲಿ ಮಹಾನಗರದ ಅನುಭವ ಮತ್ತು ಕಾಣುವ ದೃಶ್ಯಗಳು ಕೇವಲ ಒಂದು ಪ್ರದೇಶವಲ್ಲ, ಅದೊಂದು ಕಾಲದ ಭೂಮಿಕೆ ಎಂದು ಲೇಖಕರು ಹೇಳುತ್ತಾರೆ.  

 ಅಧ್ಯಾಯ ಮೂರರಲ್ಲಿ ದೆಹಲಿಯಲ್ಲಿ  ಅಲೆದಾಡುವ ಬಡಬರಹಗಾರರು ಮತ್ತು ಕಲಾವಿದರೊಂದಿಗೆ ಸಂಪರ್ಕವನ್ನು ಮುಕುಂದನ್  ಸಾಧಿಸಿ, “ಇವರು ಹೆಗಲ ಮೇಲೆ ಬಟ್ಟೆಯ ಚೀಲಗಳನ್ನು ನೇತು ಹಾಕಿಕೊಂಡು ಬೀಡಿ ಸೇದುತ್ತಿದ್ದ ಕಲಾವಿದರಾಗಿದ್ದಾರೆ. ಅಂಚಿಗೆ ತಳ್ಳಲ್ಪಟ್ಟವರಾಗಿದ್ದರು. ಜೀವನವನ್ನು ನೋಡುವ ನಗುವಿನಲ್ಲಿ ಎಲ್ಲವೂ ಅಡಗಿಕೊಂಡಿರುತ್ತದೆ. ನಗರದ ಶೂನ್ಯತೆಯೊಳಗೆ ನಾವು ವಿಲೀನಗೊಳ್ಳುತ್ತಿದ್ದಂತೆ ಶೂನ್ಯಗೊಳ್ಳುವ ಜೀವನದ ಮಿಡಿತಗಳು ಹೃದಯದ ತಾಳಗಳಾಗಿ ಬದಲಾಗುತ್ತವೆ. ಅಸ್ತಿತ್ವ ದುಃಖವನ್ನು ಸ್ವತಃ ಮನಸ್ಸಿನೊಳಗೆ ತೆಗೆದುಕೊಳ್ಳುತ್ತದೆ. ದೆಹಲಿಯ ವ್ಯಭಿಚಾರ, ಕೊಳಕಾದ ಜೀವನ, ಬೋಳು ಮಾಡಿದ ತಲೆಗೆ ಪೊಲೀಸರು ನಡೆಸುವ ಚಿತ್ರಹಿಂಸೆ ಮೊದಲಾದುವು ತನ್ನನ್ನು ಅತಿಯಾಗಿ ಕಾಡಿತು” ಎನ್ನುತ್ತಾರೆ.

ಅಧ್ಯಾಯ ನಾಲ್ಕರಲ್ಲಿ ಲೇಖಕರು ದೆಹಲಿ ಈಗಾಗಲೇ ಬದಲಾಗಿಬಿಟ್ಟಿದೆ ಎಂದು ಹೇಳುತ್ತಾರೆ. ದೆಹಲಿಯ ಕಥಾನಾಯಕ ಅರವಿಂದನ್ ಅವರಂತವರನ್ನು ಚಿತ್ರಗೊಳಿಸಿದ ಸಮಾಜವೇ ದೆಹಲಿಯನ್ನು ಪರಿವರ್ತಿಸಿದೆ. ವ್ಯಕ್ತಿಗಳನ್ನು ಇಲ್ಲವಾಗಿಸುವ, ವ್ಯಕ್ತಿತ್ವಗಳನ್ನು ನಿರ್ಮೂಲನೆ ಮಾಡುವ ಜಾಗತೀಕರಣದ ಪಶುವಾಗಿ ದೆಹಲಿ ಬದಲಾಗಿದೆ. ಇತಿಹಾಸದ ಶ್ವೇತಪತ್ರದಲ್ಲಿ ಎಸೆಯಲ್ಪಟ್ಟವರ ರಕ್ತದ ಕಲೆ ಅಲ್ಲಿ ಮೂಡಿದೆ. ಅಪರಾಧಗಳಿಂದ ತುಂಬಿಕೊಂಡಿರುವ ಮಾನವೀಯತೆ, ಬರಿದಾಗಿರುವ ಹೆಂಡತಿಯನ್ನು ಗಂಡ ಮತ್ತು ಮಗುವಿನ ಎದುರೇ ಅತ್ಯಾಚಾರ ಮಾಡುವ ದೆಹಲಿ ಇದಾಗಿದೆ. ಅಪರಾಧಗಳ ದೆಹಲಿಯಾಗಿದೆ ಎಂದು ವ್ಯಥೆ ಪಡುತ್ತಾರೆ.

ಅಧ್ಯಾಯ  ೫ರಲ್ಲಿ ಮುಕುಂದನ್ ಮತ್ತು ಅಶ್ರಫ್ ದೆಹಲಿಯಿಂದ ಹರಿದ್ವಾರಕ್ಕೆ ಬರುತ್ತಾರೆ. ಹರಿದ್ವಾರ ಗಂಗಾ ನದಿಯ ದಡದಲ್ಲಿದ್ದರೆ, ದೆಹಲಿ ಯಮುನಾ ನದಿಯ ದಡದಲ್ಲಿದೆ.  ಬರವಣಿಗೆಯನ್ನು ಒಳಗೊಳಿಸಿಕೊಳ್ಳಲು ಸಾಧ್ಯವಾಗದ ಸ್ಥಳಗಳಾಗಿ ದೆಹಲಿ ಮತ್ತು ಹರಿದ್ವಾರವನ್ನು ಇಲ್ಲಿ ಪರಿವರ್ತಿಸಲಾಗಿದೆ. ಸನ್ಯಾಸಿಗಳು ನದಿ ದಡದ ಕತ್ತಲೆಯಲ್ಲಿ ಗಾಂಜಾ ಸೇದುತ್ತಾರೆ. ಉರಿಯುವ ಗಾಂಜಾದ ಮುಖಗಳು, ಉರಿಯುತ್ತಿರುವ ಕಣ್ಣುಗಳು ಕತ್ತಲೆಯಲ್ಲಿ ಪರಸ್ಪರ ಹೊಂದಿಕೊಂಡಿರುತ್ತದೆ. ಲೇಖಕರಿಗೆ ಮನಸ್ಸಿನಿಂದ ನೋಡುವಂತಹ ಹರಿದ್ವಾರ ಇಷ್ಟವಾಗುತ್ತದೆ. ಹರಿದ್ವಾರದಲ್ಲಿ ಯಾತ್ರಿಕರು ನಡೆದಾಡುವ ಗಲ್ಲಿಗಳು, ಭಿಕ್ಷುಕರಾದ ಕುರುಡರು, ಮತ್ತೆ ಕೆಲವು ಅಂಗವಿಕಲರು, ಅಧಿಪತಿಗಳು, ಕಳ್ಳರು, ದರೋಡೆಕೋರರು, ಜೀವನ ಬೇಸರವಾಗಿ ಎಲ್ಲವನ್ನೂ ಬಿಟ್ಟು ಹೋದವರು, ಬದುಕನ್ನು ತ್ಯಜಿಸಿ ಬಂದ ಸನ್ಯಾಸಿಗಳು ಇದ್ದಾರೆ ಎನ್ನುತ್ತಾರೆ ಲೇಖಕರು.

 ಲೇಖಕರು ಕೆಲವು ವರ್ಷಗಳ ನಂತರ ನೋಡಿದಾಗ ಹರಿದ್ವಾರ ಬದಲಾಗಿದೆ. ಬದಲಿಗೆ ಸ್ಟಾರ್ ಹೋಟೆಲ್‌ಗಳು ಬಂದಿವೆ. ಹಿಪ್ಪಿಗಳ ಬದಲಿಗೆ ಡಿಜಿಟಲ್ ಕ್ಯಾಮೆರಾಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರವಾಸಿಗಳು ಕಂಡುಬರುತ್ತಾರೆ. ಬೆಟ್ಟ ಹತ್ತಲು ಹಾಳಾದ ಮೆಟ್ಟಿಲುಗಳ ಬದಲು ಎಲೆಕ್ಟ್ರಿಕ್ ರೋಪ್ ವೇ ಆಗಿದೆ. ಪುರಾತನ ಮರಗಳು ಮಾತ್ರ ಬದಲಾಗದೆ ಹಾಗೆಯೇ ಉಳಿದಿವೆ. ಕೊನೆಯ ದಿನಗಳನ್ನು ಇಲ್ಲೇ ಎಣಿಸುತ್ತ ಕಳೆಯುವ ಸಲುವಾಗಿ ಸಾಯುವುದಕ್ಕಾಗಿ ಬರುತ್ತಾರೆ. ಇಂಥವರಿಗೆ ಹರಿದ್ವಾರ ಎನ್ನುವುದು ಒಂದು ಪವಿತ್ರ ಭೂಮಿಯಾಗಿದೆ. ಹರಿದ್ವಾರ ವ್ಯಾಮೋಹ ಮತ್ತು ಹತಾಶೆಯ ಭಾವನೆಗಳನ್ನು ಮೂಡಿಸುತ್ತದೆ ಎನ್ನುತ್ತಾರೆ.

ಒಟ್ಟಿನಲ್ಲಿ,  ಮುಕುಂದನ್ ಅವರ ದೆಹಲಿಯ ಕಥೆಗಳು ಸಾಮಾನ್ಯವಾಗಿ ಜೀವನದ ವ್ಯಕ್ತಿತ್ವವನ್ನು ಹುಡುಕುವ ಪ್ರಯಾಣವನ್ನು ಚಿತ್ರಿಸಿದ್ದಾರೆ. ಇಲ್ಲಿ ಯಾರೂ ಚಿಂತಿಸದ್ದನ್ನು ಚಿಂತಿಸುವಂತೆ, ಯಾರೂ ಬರೆಯದ್ದನ್ನು ಬರೆಯುವಂತೆ, ಅವರವರನ್ನೇ ಭಿನ್ನವಾಗಿ ಕಾಣುವಂತೆ ಮಾಡುವುದೇ ಮುಕುಂದನ್ ಅವರ ಬರವಣಿಗೆಯ ಸ್ವಂತಿಕೆಯಾಗಿದೆ. ದೆಹಲಿ ಮತ್ತು ಹರಿದ್ವಾರದಲ್ಲಿ ಮುಕುಂದನ್ ಕಂಡುಕೊಂಡಂತಹ ಪ್ರತಿಯೊಂದು ಪಾತ್ರಗಳು ತಮ್ಮದೇ ಅಸ್ತಿತ್ವವನ್ನು ಹುಡುಕುವವರದ್ದಾಗಿದೆ. ಕಾದಂಬರಿಯಲ್ಲಿ ಕಾಲಘಟ್ಟದ ಆತಂಕಗಳು ಮತ್ತು ವ್ಯಾಕುಲತೆಗಳನ್ನು ಸೃಜನಾತ್ಮಕವಾಗಿ ತೀವ್ರ ರೀತಿಯಲ್ಲಿ ಲೇಖಕರು ಅಭಿವ್ಯಕ್ತಿಗೊಳಿಸಿದ್ದನ್ನು ನಾವು ಕಾಣಬಹುದು.

-

ದತ್ತಾತ್ರೇಯ ಹೆಗಡೆ

PUBLISHED BY DATTATREYA HGDE ON APRIL 10, 2025

,,,,,,,,,,,,,,,,,,,,,,,,,,,,,,,,,


Comments

Popular posts from this blog